ಸೋಮವಾರ, ಜನವರಿ 20, 2020
27 °C

ಟಿ20 ವಿಶ್ವಕಪ್: ಧೋನಿ–ಧವನ್‌ರನ್ನು ಕೈಬಿಟ್ಟ ಲಕ್ಷ್ಮಣ್ ತಂಡದಲ್ಲಿ ಉಳಿದವರು ಯಾರು?

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ 15 ಆಟಗಾರರನ್ನೊಳಗೊಂಡ ತಮ್ಮ ಆಯ್ಕೆಯ ಭಾರತ ತಂಡವನ್ನು ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ಗೆ ಸ್ಥಾನ ನೀಡದಿರುವುದು ಅಚ್ಚರಿ ಮೂಡಿಸಿದೆ.

2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ಧೋನಿ, ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ವೆಸ್ಟ್‌ ಇಂಡೀಸ್‌ ಪ್ರವಾಸ ಸೇರಿದಂತೆ, ತವರಿನಲ್ಲಿ ನಡೆದ ‌ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ವಿಂಡೀಸ್‌ ಸರಣಿಯಿಂದ ಹೊರಗುಳಿದಿದ್ದರು. ಮಾತ್ರವಲ್ಲದೆ ಸದ್ಯ ನಡೆಯುತ್ತಿರು ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮತ್ತು ಇದೇ ತಿಂಗಳು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಅವರನ್ನು ಪರಿಗಣಿಸಿಲ್ಲ.

ವಿಶ್ವಕಪ್‌ ಬಳಿಕ ಸಾಕಷ್ಟು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿರುವ ಧವನ್‌ ಹಳೆಯ ಲಯಕ್ಕೆ ಮರಳಲು ಹೋರಾಟ ನಡೆಸುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿದ್ದ ಧವನ್‌ ಆರಂಭದಲ್ಲಿ ರನ್‌ ಗಳಿಸಲು ಪರದಾಡಿದ್ದರು. 29 ಎಸೆತಗಳನ್ನು ಎದುರಿಸಿ 32 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಸಾಧಾರಣ ಗುರಿ ಎದುರು ಧವನ್‌ ಗಳಿಸಿದ ರನ್‌ ಅಷ್ಟೇನು ನಿರಾಸೆ ಮೂಡಿಸದಿದ್ದರೂ, ಉತ್ತಮ ಲಯದಲ್ಲಿ ಮುಂದುವರಿಯಲೇ ಬೇಕಾದ ಒತ್ತಡ ಅವರ ಮೇಲಿದೆ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದ ಗೆಲುವಿನ ಬಳಿಕ ಪ್ರಕಟವಾಗಿರುವ ಲಕ್ಷ್ಮಣ್‌ ಆಯ್ಕೆಯ ತಂಡದಲ್ಲಿ ಉಪನಾಯಕ ರೋಹಿತ್‌ ಶರ್ಮಾ ಜೊತೆಗೆ ಕನ್ನಡಿಗ ಕೆ.ಎಲ್‌. ರಾಹುಲ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಶ್ರೇಯಸ್‌ ಅಯ್ಯರ್‌, ಮನೀಷ್ ಪಾಂಡೆ ಮತ್ತು ವಿಕೆಟ್‌ ಕೀಪರ್‌ ರಿಷಭ್‌ ಪಂತ್ ಅವರಿಗೆ ಸ್ಥಾನ ನೀಡಲಾಗಿದೆ.

ಆಲ್ರೌಂಡರ್‌ಗಳಾಗಿ ಹಾರ್ದಿಕ್‌ ಪಾಂಡ್ಯ, ರವಿಂದ್ರ ಜಡೇಜಾ ಮತ್ತು ಶಿವಂ ದುಬೆ ಇದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಜಸ್‌ಪ್ರೀತ್‌ ಬೂಮ್ರಾ ಮುನ್ನಡೆಸಲಿದ್ದು, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಾಹರ್‌, ಮೊಹಮದ್‌ ಶಮಿ ಸಾಥ್‌ ನೀಡಲ್ಲಿದ್ದಾರೆ. ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಸ್ಪಿನ್‌ ಅಸ್ತ್ರ ಪ್ರಯೋಗಿಸಲಿದ್ದಾರೆ.

ವಿವಿಎಸ್‌ ಲಕ್ಷ್ಮಣ್‌ ಆಯ್ಕೆ ತಂಡ ಹೀಗಿದೆ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್ ಪಾಂಡೆ, ರಿಷಭ್‌ ಪಂತ್(ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ರವಿಂದ್ರ ಜಡೇಜಾ, ಶಿವಂ ದುಬೆ, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಾಹರ್‌, ಮೊಹಮದ್‌ ಶಮಿ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು