ಮಂಗಳವಾರ, ಫೆಬ್ರವರಿ 18, 2020
29 °C

U19 world cup | ಕೆನಡಾ ವಿರುದ್ಧ ಬ್ರೈಸ್ ಶತಕ; ಬೃಹತ್ ಮೊತ್ತದತ್ತ ಆಫ್ರಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಬರ್ಲಿ: ಕ್ರಿಕೆಟ್‌ ಶಿಶು ಕೆನಡಾ ತಂಡದ ವಿರುದ್ಧ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ಆತಿಥೇಯ ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ ಕಲೆಹಾಕುವತ್ತ ಹೆಜ್ಜೆ ಇಟ್ಟಿದೆ.

ಫಾಟ್ಚೆಫ್‌ಸ್ಟ್ರೋಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಕೆನಡಾ, ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಆಫ್ರಿಕಾ ತಂಡಕ್ಕೆ ಬಿಟ್ಟುಕೊಟ್ಟಿತು. ಆಫ್ರಿಕಾ ಪರ ಜೊನಾಥನ್‌ ಬರ್ಡ್‌ (54) ಜೊತೆ ಇನಿಂಗ್ಸ್‌ ಆರಂಭಿಸಿದ ಆ್ಯಂಡ್ರೋ ಲಾವೌ ಕೇವಲ 6 ರನ್‌ ಗಳಿಸಿ ಔಟಾದರು. ಬಳಿಕ ಬಂದ ನಾಯಕ ಬ್ರೈಸ್‌ ಪಾರ್ಸನ್ಸ್‌, ಬರ್ಡ್‌ ಜೊತೆ ಸೇರಿ ಎರಡನೇ ವಿಕೆಟ್‌ಗೆ 64 ರನ್‌ ಸೇರಿಸಿದರು.

ಬಿರುಸಿನ ಬ್ಯಾಟಿಂಗ್ ನಡೆಸಿದ ಬ್ರೈಸ್‌ ಕೇವಲ 92 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 121 ರನ್‌ ಗಳಿಸಿ ಔಟಾದರು. ಸದ್ಯ ಆಫ್ರಿಕಾ 41 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 271ರನ್‌ ಕಲೆಹಾಕಿದೆ.

ಫಾಟ್ಚೆಫ್‌ಸ್ಟ್ರೋಮ್‌ನ ಇನ್ನೊಂದು ಕ್ರೀಡಾಂಗಣದಲ್ಲಿ ಅಫ್ಗಾನಿಸ್ತಾನ ಮತ್ತು ಯುಎಇ ತಂಡಗಳು ಸೆಣಸುತ್ತಿವೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಅಫ್ಗನ್‌ ಪಡೆ 44 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 195 ರನ್‌ ಗಳಿಸಿ ಆಡುತ್ತಿದೆ. ಈ ತಂಡದ ಇಬ್ರಾಹಿಂ ಜದಾರ್ನ್‌ 87 ರನ್ ಗಳಿಸಿ ಔಟಾಗಿದ್ದಾರೆ. ಅರ್ಧಶತಕ ಗಳಿಸಿರುವ ರಹ್ಮಾನುಲ್ಲ (57) ಕ್ರೀಸ್‌ನಲ್ಲಿದ್ದಾರೆ.

ಈ ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಜಿಂಬಾಬ್ವೆ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಫವಾದ್‌ ಮುನಿರ್‌ (53) ಮತ್ತು ಕ್ವಾಸಿಂಗ್‌ ಅಕ್ರಮ್‌ (53) ಗಳಿಸಿದ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ತಂಡ 44 ಓವರ್‌ಗಳಲ್ಲಿ 228 ರನ್ ಗಳಿಸಿದ್ದು, ಸವಾಲಿನ ಮೊತ್ತದತ್ತ ಮುನ್ನುಗ್ಗಿದೆ.

ದಿನದ ನಾಲ್ಕನೇ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ ತಂಡಗಳು ಸೆಣಸುತ್ತಿವೆ. ಕಿವೀಸ್‌ ಪಡೆ ಟಾಸ್‌ ಗೆದ್ದರೂ ಬೌಲಿಂಗ್ ಆಯ್ಕೆಮಾಡಿಕೊಂಡಿದೆ. ಆದಿತ್ಯ ಅಶೋಕ್‌ ಸ್ಪಿನ್‌ ಬಲೆಗೆ ಸಿಲುಕಿದ ಲಂಕಾ ಸದ್ಯ 43 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್‌ ಗಳಿಸಿದ್ದಾರೆ.

10 ಓವರ್ ಎಸೆದ ಅಶೋಕ್‌ 3 ವಿಕೆಟ್‌ ಉರುಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು