ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಟ್ವೆಂಟಿ- 20 ವಿಶ್ವಕಪ್: ಭಾರತ–ಆಸ್ಟ್ರೇಲಿಯಾ ಮುಖಾಮುಖಿ

ದಕ್ಷಿಣ ಆಫ್ರಿಕಾ ಹೋರಾಟಕ್ಕೆ ಸಿಗದ ಗೆಲುವು; ಫೈನಲ್‌ಗೆ ಹರ್ಮನ್‌ಪ್ರೀತ್ ಬಳಗ
Last Updated 5 ಮಾರ್ಚ್ 2020, 18:53 IST
ಅಕ್ಷರ ಗಾತ್ರ

ಸಿಡ್ನಿ: ಭಾರತ ಮತ್ತು ಹಾಲಿಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಹೋರಾಟಕ್ಕೆ ಮಳೆ ಅಡ್ಡಿಯಾಯಿತು. ಒಂದೂ ಎಸೆತ ಕಾಣದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಲೀಗ್‌ ಹಂತದಲ್ಲಿ ಒಂದೂ ಸೋಲಿಲ್ಲದೇ ಅಗ್ರಸ್ಥಾನ ಗಳಿಸಿದ್ದ ಭಾರತ ತಂಡವು ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿತು.

ಹೋದ ವರ್ಷದ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ ನಲ್ಲಿ ಭಾರತ ತಂಡ ಸೋತಿತ್ತು. ಆದರೆ, ಈ ಸಲ ಬಿ ಗುಂಪಿನಲ್ಲಿ ಪಡೆದ ಎರಡನೇ ಸ್ಥಾನದೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿದ್ದ ಇಂಗ್ಲೆಂಡ್‌ ನಿರಾಶೆ ಅನುಭವಿಸಿತು.

ರೋಚಕ ಹೋರಾಟ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ಆಸ್ಟ್ರೇ ಲಿಯಾ ತಂಡವು 5 ರನ್‌ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಜಯಿಸಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾ ತಂಡವು ನಾಯಕಿ ಮ್ಯಾಗ್ ಲ್ಯಾನಿಂಗ್ (49; 49ಎಸೆತ, 4ಬೌಂಡರಿ, 1ಸಿಕ್ಸರ್) ಅವರ ಆಟದ ಬಲದಿಂದ 20 ಓವರ್‌ಗಳಲ್ಲಿ 5ಕ್ಕೆ 134 ರನ್ ಗಳಿಸಿತು. ನದೈನ್ ಡಿ ಕ್ಲರ್ಕ್ (19ಕ್ಕೆ3) ಅವರ ಉತ್ತಮ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾವು ದೊಡ್ಡ ಮೊತ್ತ ಪೇರಿಸಲಿಲ್ಲ.

ಆದರೆ, ಮಳೆ ಸುರಿದ ಕಾರಣ ಪಂದ್ಯಕ್ಕೆ ತಡೆಯಾಯಿತು. ನಂತರ ಡಕ್ವರ್ಥ್‌ ಲೂಯಿಸ್ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ತಂಡಕ್ಕೆ ಜಯಿಸಲು 13 ಓವರ್‌ಗಳಲ್ಲಿ 98 ರನ್‌ಗಳನ್ನು ಗಳಿಸುವ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಆಸ್ಟ್ರೇಲಿಯಾದ ಮಧ್ಯಮವೇಗಿ ಮೇಗನ್ ಶುಟ್ (17ಕ್ಕೆ2) ಅವರು ನೀಡಿದ ಪೆಟ್ಟಿಗೆ ದಕ್ಷಿಣ ಆಫ್ರಿಕಾದ ರನ್‌ ಗಳಿಕೆಯ ವೇಗ ಕುಂಠಿತವಾಯಿತು. ಆದರೆ ಕೊನೆಯ ಓವರ್‌ನವರೆಗೆ ಹೋರಾಡಿದ ಲಾರಾ ವೋಲ್ವಾರ್ಡಟ್ (ಔಟಾಗದೆ 41; 27ಎ, 3ಬೌಂ, 2ಸಿ) ಅವರ ಆಟಕ್ಕೆ ಜಯ ಒಲಿಯಲಿಲ್ಲ. ಬೌಲರ್‌ ಬಿಗಿದಾಳಿ ಮತ್ತು ಉತ್ತಮ ಫೀಲ್ಡಿಂಗ್‌ನಿಂದಾಗಿ ದಕ್ಷಿಣ ಆಫ್ರಿಕಾ ತಂಡವು 13 ಓವರ್‌ಗಳಲ್ಲಿ 5ಕ್ಕೆ92 ರನ್ ಗಳಿಸಲು ಮಾತ್ರ ಶಕ್ತವಾಯಿತು.

ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಎದುರು ಜಯಿಸಿತ್ತು.ಈಗ ಮತ್ತೆ ಮುಖಾಮುಖಿಯಾಗಲಿವೆ. 2009ರಿಂದ ಇಲ್ಲಿಯವರೆಗೆ ನಾಲ್ಕು ಸಲ ಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡವು ಐದನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ:
20 ಓವರ್‌ಗಳಲ್ಲಿ 5ಕ್ಕೆ134 (ಬೆಥ್ ಮೂನಿ 28, ಮೆಗ್‌ ಲ್ಯಾನಿಂಗ್ ಔಟಾಗದೆ 49, ರಚೆಲ್ ಹೇನ್ಸ್ 17, ನದೈನ್ ಡಿ ಕ್ಲರ್ಕ್ 19ಕ್ಕೆ3)
ದಕ್ಷಿಣ ಆಫ್ರಿಕಾ: 13 ಓವರ್‌ಗಳಲ್ಲಿ 5ಕ್ಕೆ92(ಸುನೆ ಲೂಸ್ 21, ಲಾರಾ ವೋಲ್ವಾರ್ಡಟ್ ಔಟಾಗದೆ 41, ಮೇಗನ್ ಶುಟ್ 17ಕ್ಕೆ2)
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 5 ರನ್‌ಗಳ ಜಯ (ಡಕ್ವರ್ಥ್ ಲೂಯಿಸ್ ನಿಯಮ ಅನ್ವಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT