ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರನ್ನು ಕೆಣಕಿದರೆ ತಂಡವೇ ತಿರುಗಿಬೀಳುತ್ತದೆ: ಕೆ.ಎಲ್. ರಾಹುಲ್ ಎಚ್ಚರಿಕೆ

ಎದುರಾಳಿ ಆಟಗಾರರ ಕೆಣಕಾಟಕ್ಕೆ ಎಚ್ಚರಿಕೆ
Last Updated 17 ಆಗಸ್ಟ್ 2021, 15:55 IST
ಅಕ್ಷರ ಗಾತ್ರ

ಲಂಡನ್: ‘ನಮ್ಮ ಒಬ್ಬ ಆಟಗಾರನನ್ನು ಎದುರಾಳಿ ಆಟಗಾರರು ನಿಂದಿಸಿದರೆ, ತಂಡದ ಇನ್ನುಳಿದ ಹತ್ತು ಆಟಗಾರರೂ ತಿರುಗಿಬೀಳುತ್ತಾರೆ. ಆಟದ ಮೂಲಕ ಉತ್ತರ ಕೊಡುತ್ತಾರೆ. ಎರಡನೇ ಟೆಸ್ಟ್‌ನಲ್ಲಿ ಆಗಿದ್ದು ಅದೇ’–

ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಮಾತುಗಳಿವು. ಲಾರ್ಡ್ಸ್‌ನಲ್ಲಿ ಸೋಮವಾರ ಮುಕ್ತಾಯವಾದ ಟೆಸ್ಟ್‌ನಲ್ಲಿ ಭಾರತ ತಂಡವು 151 ರನ್‌ಗಳಿಂದ ಇಂಗ್ಲೆಂಡ್ ವಿರುದ್ಧ ಜಯಿಸಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಅಮೋಘ ಜೊತೆಯಾಟದಿಂದ ಭಾರತಕ್ಕೆ ಗೆಲುವಿನ ವೇದಿಕೆ ಸಿದ್ಧಪಡಿಸಿದ್ದರು. ಅಲ್ಲದೇ ಬೌಲಿಂಗ್‌ನಲ್ಲಿಯೂ ಮಿಂಚಿದ್ದ ಅವರು ಭಾರತಕ್ಕೆ ಐತಿಹಾಸಿಕ ಜಯದ ಕಾಣಿಕೆ ನೀಡಿದ್ದರು.

ಆದರೆ ಬೂಮ್ರಾ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಆತಿಥೇಯ ಬೌಲರ್ ಮಾರ್ಕ್‌ವುಡ್ ಶಾರ್ಟ್‌ ಪಿಚ್ ಎಸೆತಗಳನ್ನು ಪ್ರಯೋಗಿಸಿದ್ದರು. ಅವರು ಬೂಮ್ರಾ ತಲೆಯನ್ನೇ ಗುರಿಯಾಗಿಸಿಕೊಂಡಿದ್ದವು. ಜೋ ರೂಟ್, ಜಿಮ್ಮಿ ಆ್ಯಂಡರ್ಸನ್ ಮತ್ತು ಒಲಿ ರಾಬಿನ್ಸನ್ ಅವರೂ ಬ್ಯಾಟ್ಸ್‌ಮನ್‌ಗಳನ್ನು ಕೆಣಕುತ್ತಿದ್ದರು. ಇದರಿಂದಾಗಿ ಮಾತಿನ ಚಕಮಕಿಗಳು ನಡೆದವು.

‘ಉಭಯ ತಂಡಗಳೂ ಜಯಗಳಿಸಲು ಪಣತೊಟ್ಟಿದ್ದು ಇದಕ್ಕೆ ಕಾರಣ. ನಾವು ತಂಡವಾಗಿ ಯಾವತ್ತೂ ತಿರುಗೇಟು ನೀಡಲು ಹಿಂಜರಿಯುವುದಿಲ್ಲ’ ಎಂದು ರಾಹುಲ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಮ್ಮ ಒಬ್ಬ ಆಟಗಾರನನ್ನು ಕೆಣಕಿದರೆ ಉಳಿದವರೆಲ್ಲರೂ ಎದುರಾಳಿಗಳಿಗೆ ತಿರುಗಿಬೀಳುತ್ತಾರೆ. ಇದು ನಮ್ಮ ಬಳಗದಲ್ಲಿ ಇರುವ ಮಧುರ ಬಾಂಧವ್ಯದ ಪ್ರತೀಕ. ಆದ್ದರಿಂದ ಎದುರಾಳಿಗಳು ನಮ್ಮಲ್ಲಿ ಯಾರನ್ನಾದರೂ ಕೆಣಕುವಾಗ, ಇಡೀ ಭಾರತ ತಂಡವನ್ನು ಕೆಣಕುತ್ತಿದ್ದಾರೆಂದು ಅರಿತುಕೊಳ್ಳಬೇಕು’ ಎಂದರು.

‘ಬೂಮ್ರಾ ಮತ್ತು ಶಮಿ ಅವರ 89 ರನ್‌ಗಳ ಜೊತೆಯಾಟವು ಅಮೋಘವಾದದ್ದು. ಅದನ್ನು ಬಣ್ಣಿಸಲು ಪದಗಳೇ ಸಾಲುತ್ತಿಲ್ಲ. ಅಂತಹದೊಂದು ಸ್ಪೂರ್ತಿದಾಯಕ ಹೋರಾಟವೇ ಬೌಲರ್‌ಗಳಲ್ಲಿಯೂ ಹುರುಪು ತುಂಬಿತ್ತು. ಊಟದ ವಿರಾಮದಲ್ಲಿ ಡಿಕ್ಲೇರ್ ಮಾಡುವ ಸಂಗತಿ ನಮಗೆಲ್ಲ ಗೊತ್ತಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT