ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಶಮಿ, ಸಿರಾಜ್ ದಾಳಿಗೆ ಉರುಳಿದ ಆಸ್ಟ್ರೇಲಿಯಾ 188ಕ್ಕೆ ಆಲೌಟ್

Last Updated 17 ಮಾರ್ಚ್ 2023, 11:26 IST
ಅಕ್ಷರ ಗಾತ್ರ

ಮುಂಬೈ: ಮೊಹಮ್ಮದ್ ಶಮಿ (17ಕ್ಕೆ 3) ಹಾಗೂ ಮೊಹಮ್ಮದ್ ಸಿರಾಜ್ (29ಕ್ಕೆ 3) ಸೇರಿದಂತೆ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ತಂಡವು ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ 35.4 ಓವರ್‌ಗಳಲ್ಲಿ ಕೇವಲ 188 ರನ್‌ಗಳಿಗೆ ಆಲೌಟ್ ಆಗಿದೆ.

ಇದರೊಂದಿಗೆ ಅತಿಥೇಯ ಭಾರತ ತಂಡವು ಗೆಲುವಿಗೆ 189 ರನ್‌ಗಳ ಗುರಿ ಪಡೆದಿದೆ.

ಇದೇ ಮೊದಲ ಬಾರಿಗೆ ಏಕದಿನದಲ್ಲೂ ನಾಯಕತ್ವ ವಹಿಸಿರುವ ಹಾರ್ದಿಕ್ ಪಾಂಡ್ಯ, ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆರಂಭದಲ್ಲೇ ಅಪಾಯಕಾರಿ ಟ್ರಾವಿಸ್ ಹೆಡ್ (5) ಕ್ಲೀನ್ ಬೌಲ್ಡ್ ಮಾಡಿದ ಮೊಹಮ್ಮದ್ ಸಿರಾಜ್ ಗಮನ ಸಳೆದರು.

ದ್ವಿತೀಯ ವಿಕೆಟ್‌ಗೆ ಮಿಚೆಲ್ ಮಾರ್ಷ್ ಹಾಗೂ ನಾಯಕ ಸ್ಟೀವ್ ಸ್ಮಿತ್ 72 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಜೋಡಿಯನ್ನು ಹಾರ್ದಿಕ್ ಪಾಂಡ್ಯ ಬೇರ್ಪಡಿಸಿದರು. ಪರಿಣಾಮ 22 ರನ್ ಗಳಿಸಿದ ಆಸ್ಟ್ರೇಲಿಯಾ ಕಪ್ತಾನ ಸ್ಮಿತ್ ವಿಕೆಟ್ ಭಾರತದ ನಾಯಕ ಹಾರ್ದಿಕ್ ಪಾಲಾಯಿತು.

ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಾರ್ಷ್ ಅರ್ಧಶತಕ ಗಳಿಸಿದರು. ಅವರನ್ನು ರವೀಂದ್ರ ಜಡೇಜ ಔಟ್ ಮಾಡಿದರು. 65 ಎಸೆತಗಳನ್ನು ಎದುರಿಸಿದ ಮಾರ್ಷ್ 10 ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು.

ಮಾರ್ಷ್ ವಿಕೆಟ್ ಪತನದ ಬಳಿಕ ಆಸೀಸ್ ಬ್ಯಾಟರ್‌ಗಳು ಪರದಾಡಿದರು. ಮಾರ್ನಸ್ ಲಾಬುಶೇನ್‌ಗೆ (15) ಕುಲದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು.

ದಿಢೀರ್ ಕುಸಿತ...
ಆಸೀಸ್ ಕೊನೆಯ ಆರು ವಿಕೆಟ್‌ಗಳನ್ನು ಕೇವಲ 19 ರನ್ ಅಂತರದಲ್ಲಿ ಕಳೆದುಕೊಂಡಿತು. ಒಂದು ಹಂತದಲ್ಲಿ 27.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ 35.4 ಓವರ್‌ಗಳಲ್ಲಿ 188 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಶಮಿ ಹಾಗೂ ಸಿರಾಜ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ರವೀಂದ್ರ ಜಡೇಜ ಎರಡು ಮತ್ತು ಕುಲದೀಪ್ ಯಾದವ್ ಒಂದು ವಿಕೆಟ್ ಗಳಿಸಿದರು.

ಆಸ್ಟ್ರೇಲಿಯಾ ಪರ ಜೋಶ್ ಇಂಗ್ಲಿಸ್ (26), ಕ್ಯಾಮರೂನ್ ಗ್ರೀನ್ (12), ಗ್ಲೆನ್ ಮ್ಯಾಕ್ಸ್‌ವೆಲ್ (8), ಮಾರ್ಕಸ್ ಸ್ಟೋಯಿನಿಸ್ (5), ಸೀನ್ ಅಬಾಟ್ (0), ಮಿಚೆಲ್ ಸ್ಟಾರ್ಕ್ (4*) ಹಾಗೂ ಆ್ಯಡಂ ಜಾಂಪಾ (0) ನಿರಾಸೆ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT