ಶನಿವಾರ, ಫೆಬ್ರವರಿ 27, 2021
30 °C

IND vs AUS: ಗಾಬಾದಲ್ಲೂ ಸಿರಾಜ್‌ಗೆ ಮುಂದುವರಿದ ನಿಂದನೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತೀಯ ಆಟಗಾರರ ವಿರುದ್ಧ ನಿಂದನೆ ಮುಂದುವರಿದಿದೆ. ಅಶಿಸ್ತಿನ ಆಸೀಸ್ ಅಭಿಮಾನಿಗಳ ಗುಂಪೊಂದು, ಭಾರತೀಯ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಬಗ್ಗೆ ಸಿಡ್ನಿ ಮಾರ್ನಿಂಗ್ ಹೇರಾಲ್ಡ್ ವರದಿ ಮಾಡಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಜನಾಂಗೀಯ ನಿಂದನೆಯನ್ನು ಎದುರಿಸಿದ್ದರು. ಈಗ ಗಾಬಾದಲ್ಲೂ ಮುಂದುವರಿದಿದ್ದು, ಅಭಿಮಾನಿಗಳ ಗುಂಪು 'ಹುಳ' ಎಂದು ನಿಂದಿಸಿದೆ.

ಸಿಡ್ನಿ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬೂಮ್ರಾ ವಿರುದ್ಧ ನಡೆದ ಜನಾಂಗೀಯ ನಿಂದನೆ ವಿರುದ್ಧ ಭಾರತವು ಅಧಿಕೃತವಾಗಿ ದೂರು ದಾಖಲಿಸಿತ್ತು. ನಾಲ್ಕನೇ ದಿನದಾಟದಲ್ಲೂ ಇದು ಮುಂದುವರಿದಾಗ ಫೀಲ್ಡ್ ಅಂಪೈರ್ ನೆರವಿನಿಂದ ಆಪಾದಿತ ಆರು ಮಂದಿ ಪ್ರೇಕ್ಷಕರನ್ನು ಹೊರ ಹಾಕಲಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯಾ ಈ ಸಂಬಂಧ ತನಿಖೆಯನ್ನು ನಡೆಸುತ್ತಿದೆ.

ಸಿಡ್ನಿ ಮಾರ್ನಿಂಗ್ ಹೇರಾಲ್ಡ್ ವರದಿ ಪ್ರಕಾರ, ಗಾಬಾದಲ್ಲಿ ಶುಕ್ರವಾರ ಆರಂಭವಾದ ಮೊದಲ ದಿನದಾಟದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಪ್ರೇಕ್ಷಕರ ಗುಂಪೊಂದು ಹುಳ ಎಂದು ಪದೇ ಪದೇ ನಿಂದಿಸುತ್ತಿದ್ದರು.

ಇದನ್ನೂ ಓದಿ: 

ಸಿರಾಜ್‌ಗೆ ಮಾತ್ರವಲ್ಲದೆ ಪದಾರ್ಪಣಾ ಆಟಗಾರ ವಾಷಿಂಗ್ಟನ್ ಸುಂದರ್ ಅವರಿಗೂ ಈ ಕಹಿ ಅನುಭವ ಎದುರಾಗಿದೆ. ನನ್ನ ಹಿಂದಿರುವ ಪ್ರೇಕ್ಷಕರು ಸುಂದರ್ ಹಾಗೂ ಸಿರಾಜ್ ಅವರನ್ನು ಹುಳ ಎಂದು ನಿಂದಿಸುತ್ತಿದ್ದರು. ಇಲ್ಲೂ ಸಿರಾಜ್ ಅವರನ್ನು ಗುರಿಯಾಗಿಸಿ ಆರಂಭಿಸಲಾಗಿತ್ತು. ಅಲ್ಲದೆ ಸಿಡ್ನಿಗೆ ಹೋಲುವಂತಿತ್ತು ಎಂದು ಕೇಟ್ ಎಂಬ ಪ್ರೇಕ್ಷಕನ ಹೇಳಿಕೆಯನ್ನು ಸಿಡ್ನಿ ಮಾರ್ನಿಂಗ್ ಹೇರಾಲ್ಡ್ ಉಲ್ಲೇಖಿಸಿದೆ.

ಸಿಡ್ನಿ ಘಟನೆಯ ಬಳಿಕ ಆಸೀಸ್ ಪ್ರೇಕ್ಷಕರು ಉದ್ದೇಶಪೂರ್ವಕವಾಗಿಯೇ ಸಿರಾಜ್ ಅವರನ್ನು ಗುರಿಯಾಗಿಸುತ್ತಿದೆ. ಇದೀಗ ಗಾಬಾದಲ್ಲೂ ಮುಂದುವರಿದಿದ್ದು, ಈ ಬಗ್ಗೆ ಸದ್ಯಕ್ಕೆ ಟೀಮ್ ಇಂಡಿಯಾ ಆಟಗಾರರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು