ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾವಸ್ಕರ್–ಬಾರ್ಡರ್ ಟೆಸ್ಟ್ ಕ್ರಿಕೆಟ್ ಸರಣಿ: ಭಾರತ ಪಡೆಗೆ ಫೀಲ್ಡಿಂಗ್ ಪಾಠ

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ತರಬೇತಿ ಶಿಬಿರ; ಆಸ್ಟ್ರೇಲಿಯಾ ಎದುರಿನ ಸರಣಿಗೆ ಭರದ ಸಿದ್ಧತೆ
Last Updated 5 ಫೆಬ್ರುವರಿ 2023, 14:45 IST
ಅಕ್ಷರ ಗಾತ್ರ

ನಾಗಪುರ: ಪ್ರತಿಷ್ಠಿತ ಗಾವಸ್ಕರ್–ಬಾರ್ಡರ್ ಟೆಸ್ಟ್ ಕ್ರಿಕೆಟ್ ಸರಣಿ ಇದೇ ವಾರ ಆರಂಭವಾಗಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನಗಳನ್ನು ಭದ್ರಗೊಳಿಸಿಕೊಳ್ಳಲು ಈ ಎರಡೂ ಬಲಾಢ್ಯ ತಂಡಗಳಿಗೆ ಈ ಸರಣಿ ಜಯದ ಮೇಲೆ ಕಣ್ಣಿದೆ. ಆದ್ದರಿಂದ ಪ್ರತಿಯೊಂದು ಹಂತದಲ್ಲಿಯೂ ಉತ್ತಮವಾದ ಯೋಜನೆ ಮತ್ತು ಸಾಮರ್ಥ್ಯ ನೀಡುವುದು ಪ್ರಮುಖವಾಗಲಿದೆ.

ಅದರಿಂದಾಗಿಯೇ ಭಾರತ ತಂಡದ ಫೀಲ್ಡಿಂಗ್ ಕೌಶಲಗಳನ್ನು ಮತ್ತಷ್ಟು ಉತ್ತಮಗೊಳಿಸಲು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕಾರ್ಯಪ್ರವೃತ್ತರಾಗಿದ್ದಾರೆ. ಅದರಲ್ಲೂ ಸ್ಪಿಪ್ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.

ನಾಗಪುರದಲ್ಲಿ ಭಾನುವಾರ ನಡೆದ ತಂಡದ ಆಟಗಾರರ ಅಭ್ಯಾಸದಲ್ಲಿ ಅವರ ಮೇಲುಸ್ತುವಾರಿಯಲ್ಲಿ ಫೀಲ್ಡಿಂಗ್ ಡ್ರಿಲ್ ನಡೆಯಿತು.

‘ತಂಡದಲ್ಲಿ ಎಲ್ಲರೂ ಉತ್ತಮ ಲಯದಲ್ಲಿದ್ದಾರೆ. ಮತ್ತೊಮ್ಮೆ ಟೆಸ್ಟ್ ತಂಡವು ಇಲ್ಲಿ ಜೊತೆಗೂಡಿರುವುದು ಸಂತಸ ಮತ್ತು ಹುಮ್ಮಸ್ಸು ಹೆಚ್ಚಿಸಿದೆ. ಈಚಿನ ದಿನಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಡಿದ್ದೇವೆ. ದೀರ್ಘ ಮಾದರಿ ಮತ್ತು ಕೆಂಪು ಚೆಂಡಿನ ಆಟಕ್ಕೆ ಹೊಂದಿಕೊಳ್ಳಲು ಹೆಚ್ಚು ಸಮಯವನ್ನು ವಿನಿಯೋಗಿಸುತ್ತಿದ್ದೇವೆ. ಮಾದರಿಯಿಂದ ಮಾದರಿಗೆ ಹೊಂದಿಕೊಳ್ಳುವಲ್ಲಿ ಕೆಲವು ಆಟಗಾರರು ಬಹಳ ವೇಗವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ದ್ರಾವಿಡ್ ಹೇಳಿದರು.

ಇಲ್ಲಿಯ ಸಿವಿಲ್‌ ಲೈನ್ಸ್‌ನಲ್ಲಿರುವ ವಿಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ಶಿಬಿರ ನಡೆಯುತ್ತಿದೆ.

‘ತರಬೇತಿ ಶಿಬಿರ ನಡೆಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಇಂತಹ ಶಿಬಿರಗಳು ಹೆಚ್ಚು ನಡೆಯಬೇಕು. ಆಗ ಕೋಚಿಂಗ್ ಸಿಬ್ಬಂದಿ ಮತ್ತು ಆಟಗಾರರ ನಡುವೆ ಮತ್ತಷ್ಟು ಬಾಂಧವ್ಯ ಬೆಳೆಯುತ್ತದೆ. ಕೌಶಲಗಳೂ ಉತ್ತಮಗೊಳ್ಳುತ್ತವೆ. ಈ ಶಿಬಿರದಲ್ಲಿ ಫೀಲ್ಡಿಂಗ್, ಕ್ಯಾಚಿಂಗ್‌ ಹೆಚ್ಚು ಒತ್ತು ಕೊಟ್ಟಿದ್ದೇವೆ. ನೆಟ್ಸ್‌ಗಳಲ್ಲಿ ಬ್ಯಾಟರ್‌ಗಳೂ ಹೆಚ್ಚುವರಿ ಸಮಯ ವಿನಿಯೋಗಿಸುತ್ತಿದ್ದಾರೆ’ ಎಂದು ಹೇಳಿದರು.

ಭಾರತ ತಂಡವು ಕಳೆದ ಮೂರು (2017, 2018–19 ಮತ್ತು 2020–21) ಬಾರಿ ಬಾರ್ಡರ್‌–ಗಾವಸ್ಕರ್ ಟ್ರೋಫಿಗಳನ್ನು ಗೆದ್ದಿದೆ.

ಈ ಸಲದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಹಣಾಹಣಿಯು ಫೆ 9ರಿಂದ ನಾಗಪುರದ ಜಮ್ತಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನವದೆಹಲಿ (ಫೆ 17–21), ಧರ್ಮಶಾಲಾ (ಮಾರ್ಚ್ 1–5) ಹಾಗೂ ಅಹಮದಾಬಾದ್ (ಮಾರ್ಚ್ 9–13) ಪಂದ್ಯಗಳು ನಡೆಯಲಿವೆ.

ಜೋಶ್ ಗೈರು: ಆಸ್ಟ್ರೇಲಿಯಾ ತಂಡದ ವೇಗಿ ಜೋಸ್ ಹ್ಯಾಜಲ್‌ವುಡ್ ಅವರು ಗಾಯದಿಂದ ಇನ್ನೂ ಪೂರ್ಣ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರು ಭಾರತ ಎದುರಿನ ಮೊದಲ ಟೆಸ್ಟ್‌ನಲ್ಲಿ ಆಡುವುದಿಲ್ಲ.

ಹೋದ ತಿಂಗಳು ಸಿಡ್ನಿಯಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಆಡುವ ಸಂದರ್ಭದಲ್ಲಿ ಜೋಶ್ ಎಡಗಾಲಿಗೆ ಗಾಯವಾಗಿತ್ತು. 32 ವರ್ಷದ ಜೋಶ್ ಚಿಕಿತ್ಸೆ ಪಡೆಯುತ್ತಿದ್ದು ದೆಹಲಿಯಲ್ಲಿ ನಡೆಯುವ ಎರಡನೇ ಟೆಸ್ಟ್‌ನಲ್ಲಿ ಆಡುವರು ಎಂದು ತಂಡದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT