ಬುಧವಾರ, ಏಪ್ರಿಲ್ 1, 2020
19 °C

ಕಳೆದ ಸಲ ಆಸ್ಟ್ರೇಲಿಯಾದಲ್ಲಿ ಭಾರತ ಗೆದ್ದಿತ್ತು; ಈ ಬಾರಿ ನಾವೇ ಫೇವರಿಟ್: ಸ್ಟೀವ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ವಿರಾಟ್‌ ಕೊಹ್ಲಿ ಪಡೆ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್‌ ಕ್ರಿಕೆಟ್‌ ಸರಣಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಈ ಸಾಧನೆ ಮಾಡಿದ ಭಾರತ ತಂಡ ಎನಿಸಿತ್ತು. ಆದರೂ ಈ ಬಾರಿ ನಾವೇ ಫೇವರಿಟ್‌ (ನೆಚ್ಚಿನ ತಂಡ) ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್‌ ವಾ ಹೇಳಿದ್ದಾರೆ.

ಇದೇ ವರ್ಷ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಚೆಂಡು ವಿರೂಪ ಪ್ರಕರಣದಲ್ಲಿ 12 ತಿಂಗಳು ನಿಷೇಧ ಶಿಕ್ಷೆ ಅನುಭವಿಸಿದ್ದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ತಂಡಕ್ಕೆ ವಾಪಸ್‌ ಆಗಿರುವುದು, ಆತಿಥೇಯರ ಶಕ್ತಿ ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಆಸ್ಟ್ರೇಲಿಯಾವೇ ನೆಚ್ಚಿನ ತಂಡವಾಗಲಿದೆ ಎಂದು ನನಗನಿಸುತ್ತದೆ. ಪಿಚ್‌ಗಳ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ನಮ್ಮ ತಂಡಕ್ಕೆ ಹೋಲಿಸಿದರೆ, ಹಗಲು–ರಾತ್ರಿ ಟೆಸ್ಟ್‌ (ಪಿಂಕ್‌ ಟೆಸ್ಟ್) ಕೂಡ ಭಾರತಕ್ಕೆ ಇನ್ನೂ ಹೊಸದು. ವಿರಾಟ್‌ ಕೊಹ್ಲಿ ಸವಾಲನ್ನು ಸ್ವೀಕರಿಸುವ ರೀತಿಯನ್ನು ನಾನು ಇಷ್ಟಪಡುತ್ತೇನೆ. ನೀವು ವಿಶ್ವದ ಅತ್ಯುತ್ತಮ ತಂಡ ಎನಿಸಿಕೊಳ್ಳಬೇಕಾದರೆ, ತವರಿನಿಂದ ಹೊರಗೂ ಗೆದ್ದು ತೋರಿಸಬೇಕಾದದ್ದು ಅವಶ್ಯ’ ಎಂದು ಹೇಳಿದ್ದಾರೆ.

ಈ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡವು ಒಂದು ಪಿಂಕ್‌ ಟೆಸ್ಟ್ ಆಡಲಿದೆ ಎಂದು ಬಿಸಿಸಿಐ ಮೂಲಗಳು ಭಾನುವಾರ ತಿಳಿಸಿವೆ. ತಾವು ಯಾವುದೇ ಕ್ರೀಡಾಂಗಣದಲ್ಲಿಯೂ ಸವಾಲು ಸ್ವೀಕರಿಸಲು ಸಿದ್ಧ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲಿರುವ ಭಾರತ

‘ಕಳೆದ ಸಲ ಭಾರತ ಟೆಸ್ಟ್‌ ಸರಣಿ ಗೆದ್ದಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಆಸ್ಟ್ರೇಲಿಯಾ ತಂಡದಲ್ಲಿ ಆಗ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಇರಲಿಲ್ಲ. ಈ ಬಾರಿ ಮಾರ್ನಸ್‌ ಲಾಬುಶೇನ್‌ ತಂಡದಲ್ಲಿದ್ದಾರೆ. ಬೌಲಿಂಗ್‌ ಕೂಡ ಮತ್ತಷ್ಟು ಪಕ್ವಗೊಂಡಿದೆ. ಅದರಂತೆ ಭಾರತ ತಂಡದಲ್ಲೂ ಯಾವುದೇ ದೌರ್ಬಲ್ಯಗಳಿಲ್ಲ. ಹಾಗಾಗಿ ಇದೊಂದು ಶ್ರೇಷ್ಠ ಸರಣಿಯಾಗುವ ಸಾಧ್ಯತೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸಿಸ್‌ ವಿಕೆಟ್‌ ಕೀಪರ್‌ ಮತ್ತು ನಾಯಕ ಟಿಮ್‌ ಪೇನ್‌ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನಾಡಿರುವ ವಾ, ‘ಪೇನ್‌ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಹೀಗಿರುವಾಗ ನಾಯಕತ್ವ ಬದಲಿಸುವ ಅಗತ್ಯವೇನಿದೆ. ನಾವು ಅವರಿಗೆ (ಪೇನ್‌ಗೆ) ಹೆಚ್ಚಿನ ಗೌರವ ನೀಡಬೇಕಿದೆ. ಅವರು ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ಬಂದವರು. ಭವಿಷ್ಯದ ನಾಯಕ. ಪೇನ್‌ಗೆ 35 ವರ್ಷ ವಯಸ್ಸಿರಬಹುದು. ಆದರೆ, ಅವರು ಮತ್ತಷ್ಟು ವರ್ಷ ನಾಯಕರಾಗಿ ಮುಂದುವರಿಯಲಾರರು ಎಂಬುದರಲ್ಲಿ ಅರ್ಥವಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನಿಸುವುದು ಸದ್ಯದ ನಾಯಕನನ್ನು ನಾವು ಗೌರವಿಸುತ್ತಿಲ್ಲ ಎಂಬುದನ್ನು ತೋರಿಸುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು