ಆಸೀಸ್ ಗಾಯದ ಮೇಲೆ ಬರೆ; ಭಾರತಕ್ಕೆ ಸರಣಿ ಗೆಲುವಿನ ಗುರಿ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 11 ರನ್ ಅಂತರದ ರೋಚಕ ಗೆಲುವು ಬಾರಿಸಿರುವ ಟೀಮ್ ಇಂಡಿಯಾ, ಈಗ ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ.
ಪ್ರವಾಸಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ದ್ವಿತೀಯ ಟಿ20 ಪಂದ್ಯವು ಭಾನುವಾರದಂದು ಇಲ್ಲಿನ ಇತಿಹಾಸ ಪ್ರಸಿದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ (ಎಸ್ಸಿಜಿ) ನಡೆಯಲಿದೆ. ಇದೇ ಮೈದಾನದಲ್ಲಿ ನಡೆದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿರುವುದು ಭಾರತದ ಹಿನ್ನೆಡೆಗೆ ಕಾರಣವಾಗಿತ್ತು. ಸರಣಿಯ ಅಂತಿಮ ಪಂದ್ಯವು ಡಿ 8 ಮಂಗಳವಾರದಂದು ಸಿಡ್ನಿ ಮೈದಾನದಲ್ಲೇ ನಡೆಯಲಿರುವುದು ಗಮನಾರ್ಹವೆನಿಸುತ್ತದೆ.
ಆಗಲೇ ಮೊದಲ ಟಿ20 ಪಂದ್ಯದಲ್ಲಿ ಸೋಲಿಗೆ ಶರಣಾಗಿರುವ ಆಸ್ಟ್ರೇಲಿಯಾ ಮತ್ತಷ್ಟು ಇಂಜುರಿ ಸಮಸ್ಯೆ ಎದುರಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಗಾಯಕ್ಕೆ ತುತ್ತಾಗಿರುವ ನಾಯಕ ಆ್ಯರನ್ ಫಿಂಚ್ ನಿರ್ಣಾಯಕ ಟಿ20 ಕದನಕ್ಕೆ ಲಭ್ಯವಾಗುವರೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸೊಂಟದ ನೋವಿಗೆ ಒಳಗಾಗಿರುವ ಫಿಂಚ್, ಶನಿವಾರ ಸ್ಕ್ಯಾನಿಂಗ್ಗೆ ಒಳಪಡಲಿದ್ದಾರೆ.
ಇದನ್ನೂ ಓದಿ: IND vs AUS T20: ಚುಟುಕು ಕದನದಲ್ಲಿ ಭಾರತಕ್ಕೆ ರೋಚಕ ಗೆಲುವು
ಈಗಾಗಲೇ ಗಾಯದಿಂದ ಬಳಲುತ್ತಿರುವ ಆ್ಯಷ್ಟನ್ ಅಗರ್ ಸ್ಥಾನಕ್ಕೆ ಟೆಸ್ಟ್ ಸ್ಪಿನ್ನರ್ ನಥನ್ ಲಯನ್ ಅವರಿಗೆ ಕರೆ ನೀಡಲಾಗಿದೆ.
ಅತ್ತ ಟಿ20 ಮಾದರಿಯಲ್ಲಿ, ಸತತ ಎಂಟು ಗೆಲುವು ಸೇರಿದಂತೆ ಕೊನೆಯ 10 ಪಂದ್ಯಗಳಲ್ಲಿ ಒಂಬತ್ತು ಗೆಲುವುಗಳನ್ನು ಬಾರಿಸಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ, ಆಸೀಸ್ ನಾಡಲ್ಲಿ ಮಗದೊಂದು ಸ್ಮರಣೀಯ ಸರಣಿ ಗೆಲುವು ದಾಖಲಿಸುವ ಇರಾದೆಯಲ್ಲಿದೆ.
ಮೊದಲ ಟಿ20 ಪಂದ್ಯದ ವೇಳೆ ಗಾಯ ಮಾಡಿಕೊಂಡಿರುವ ರವೀಂದ್ರ ಜಡೇಜ ಸರಣಿಯಿಂದಲೇ ನಿರ್ಗಮಿಸಿದ್ದಾರೆ. ಇದರ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಕಂಕಷನ್ ನಿಯಮದಲ್ಲಿ ಜಡೇಜ ಬದಲಿ ಆಟಗಾರನಾಗಿ ಕಾಣಿಸಿಕೊಂಡು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಯಜುವೇಂದ್ರ ಚಾಹಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
On to Sydney 👍🏻. pic.twitter.com/jRkH6SM4LY
— Virat Kohli (@imVkohli) December 4, 2020
ಅಗ್ರ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಜೊತೆ ಅನುಭವಿ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳುವ ಅಗತ್ಯವಿದೆ. ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಮನೀಶ್ ಪಾಂಡೆ ಪರಿಣಾಮಕಾರಿ ಎನಿಸಿಕೊಳ್ಳಬೇಕಿದೆ. ಇವರಿಬ್ಬರಲ್ಲಿ ಒಬ್ಬರನ್ನು ಕೈಬಿಟ್ಟು ಶ್ರೇಯಸ್ ಅಯ್ಯರ್ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಇದರಿಂದಾಗಿ ಮಯಾಂಕ್ ಅಗರ್ವಾಲ್ ತಮ್ಮ ಅವಕಾಶಕ್ಕಾಗಿ ಕಾಯಬೇಕಿದೆ.
ಇದನ್ನೂ ಓದಿ: ಟಿ20 ಸರಣಿ; ಗಾಯಾಳು ಜಡೇಜಗೆ ವಿಶ್ರಾಂತಿ; ಶಾರ್ದೂಲ್ಗೆ ಸ್ಥಾನ
ಅಂತಿಮ ಎರಡು ಪಂದ್ಯಗಳಿಗೆ ಆಲ್ರೌಂಡರ್ ರವೀಂದ್ರ ಜಡೇಜ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಮೇಲೆ ಬೌಲಿಂಗ್ ಮಾಡುವ ಒತ್ತಡ ಹೆಚ್ಚಿರುತ್ತದೆ. ವಾಷಿಂಗ್ಟನ್ ಸುಂದರ್ ಮತ್ತದೇ ಪ್ರಭಾವಿ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ ಗಳಿಸುವ ಭರವಸೆಯಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವಿಶ್ರಾಂತಿಯ ಬಳಿಕ ಜಸ್ಪ್ರೀತ್ ಬುಮ್ರಾ ಪ್ರಮುಖ ಅಸ್ತ್ರವಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗಾದ್ದಲ್ಲಿ ದೀಪಕ್ ಚಹರ್ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಮುಂಬರುವ ಟೆಸ್ಟ್ ಸರಣಿ ಗಮನದಲ್ಲಿಟ್ಟುಕೊಂಡು ಮೊಹಮ್ಮದ್ ಶಮಿಗೆ ವಿಶ್ರಾಂತಿ ಸೂಚಿಸಿದ್ದಲ್ಲಿ ಚಹರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ತಮ್ಮ ಚೊಚ್ಚಲ ಪಂದ್ಯದಲ್ಲೇ ಮೂರು ವಿಕೆಟ್ ಕಬಳಿಸಿ ಮಿಂಚಿರುವ ತಂಗರಸು ನಟರಾಜನ್ ಮಗದೊಮ್ಮೆ ತಂಡದ ಅಸ್ತ್ರವಾಗಲಿದ್ದಾರೆ. ಇನ್ನುಳಿದಂತೆ ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕ್ಷೀಣವೆನಿಸಿದೆ.
ಅತ್ತ ಆಸೀಸ್ ತಂಡದಲ್ಲಿ ಸ್ಟೀವನ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಫಾರ್ಮ್ಗೆ ಮರಳಬೇಕಾಗಿರುವುದು ಅತಿ ಅಗತ್ಯವೆನಿಸಿದೆ. ಡೆತ್ ಓವರ್ ಬೌಲಿಂಗ್ ಕೂಡಾ ಆತಂಕಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಸಿಡ್ನಿ ಮೈದಾನದಲ್ಲಿ ಅಭಿಮಾನಿಗಳು ಮಗದೊಂದು ಹೈ ವೋಲ್ಟೇಜ್ ಕದನವನ್ನು ನಿರೀಕ್ಷೆ ಮಾಡಬಹುದಾಗಿದೆ.
ಇದನ್ನೂ ಓದಿ: ರವೀಂದ್ರ ಜಡೇಜಗೆ ತಲೆಸುತ್ತು ಇತ್ತು: ಸಂಜು ಸ್ಯಾಮ್ಸನ್
We played with heart 💙
Thank you to all the fans that came out to show their support in Canberra 🇮🇳 pic.twitter.com/kmApiQhtDR— K L Rahul (@klrahul11) December 4, 2020
ಪಂದ್ಯಾರಂಭ: ಮಧ್ಯಾಹ್ನ 1.40ಕ್ಕೆ ಸರಿಯಾಗಿ (ಭಾರತೀಯ ಕಾಲಮಾನ)
ತಂಡಗಳು ಇಂತಿದೆ:
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ಉಪನಾಯಕ, ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ಟಿ ನಟರಾಜನ್ ಮತ್ತು ಶಾರ್ದೂಲ್ ಠಾಕೂರ್
ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಸೀನ್ ಅಬಾಟ್, ನಥನ್ ಲಯನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ಉಪ ನಾಯಕ), ಕ್ಯಾಮರಾನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಮೊಯಿಸೆಸ್ ಹೆನ್ರಿಕ್ಸ್, ಮಾರ್ನಸ್ ಲಾಬುಷೇನ್, ಗ್ಲೆನ್ ಮ್ಯಾಕ್ಸ್ವೆಲ್, ಡ್ಯಾನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಡಾರ್ಸಿ ಶಾರ್ಟ್ ಮತ್ತು ಆ್ಯಡಂ ಜಂಪಾ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.