ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WTC ಫೈನಲ್: ಆಸ್ಟ್ರೇಲಿಯಾ ತಂಡಕ್ಕೆ ಮೊದಲ ದಿನದ ಗೌರವ- ಟ್ರಾವಿಸ್ ಹೆಡ್ ಶತಕ

Published 8 ಜೂನ್ 2023, 3:14 IST
Last Updated 8 ಜೂನ್ 2023, 3:14 IST
ಅಕ್ಷರ ಗಾತ್ರ

ಲಂಡನ್ : ಚೆಂಡು ಎತ್ತರಕ್ಕೆ ಪುಟಿಯುತ್ತಿದ್ದ ಪಿಚ್‌ನಲ್ಲಿ ಆರಂಭಿಕ ಯಶಸ್ಸು ಸಾಧಿಸಿದ ಭಾರತದ ಬೌಲರ್‌ಗಳ ಓಟಕ್ಕೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಸ್ಟಿವನ್ ಸ್ಮಿತ್ ತಡೆಯೊಡ್ಡಿದರು.

ದ ಒವಲ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಪಂದ್ಯದ ಮೊದಲ ದಿನದ ಗೌರವ ಆಸ್ಟ್ರೇಲಿಯಾ ಪಾಲಾಯಿತು. ‌

ಶತಕ ಬಾರಿಸಿದ ಹೆಡ್ (ಬ್ಯಾಟಿಂಗ್ 146, 156ಎ, 4X22, 6X1) ಮತ್ತು ತಾಳ್ಮೆಯ ಬ್ಯಾಟಿಂಗ್ ಮಾಡಿದ ಸ್ಮಿತ್ (ಬ್ಯಾಟಿಂಗ್ 95, 227ಎ, 4X14) ಅವರ ದ್ವಿಶತಕದ (251 ರನ್) ಜೊತೆಯಾಟದ ಬಲದಿಂದ ಆಸ್ಟ್ರೇಲಿಯಾ ತಂಡವು 85ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 327 ರನ್‌ ಗಳಿಸಿತು.

ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಸುಳಿಗಾಳಿ ಹಾಗೂ ಗಟ್ಟಿ ಪಿಚ್‌ ಮೇಲೆ ಎದೆ ಮಟ್ಟಕ್ಕೆ ಪುಟಿಯುತ್ತಿದ್ದ ಎಸೆತಗಳನ್ನು ಎದುರಿಸಲು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ಗಳು ಪರದಾಡಿದರು.

ನಾಲ್ವರು ವೇಗಿಗಳು ಹಾಗೂ ಒಬ್ಬ ಸ್ಪಿನ್ನರ್‌ ಜೊತೆಗೆ ಕಣಕ್ಕಿಳಿದ ಭಾರತಕ್ಕೆ ಇನಿಂಗ್ಸ್‌ನ 4ನೇ ಓವರ್‌ನಲ್ಲಿಯೇ ಯಶಸ್ಸು ಲಭಿಸಿತು. ಮೊಹಮ್ಮದ್ ಸಿರಾಜ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಉಸ್ಮಾನ್ ಖ್ವಾಜಾ, ವಿಕೆಟ್‌ಕೀಪರ್ ಶ್ರೀಕರ್ ಭರತ್‌ಗೆ ಕ್ಯಾಚಿತ್ತರು.

ಡೇವಿಡ್ ವಾರ್ನರ್ ಜೊತೆಗೂಡಿದ ಮಾರ್ನಸ್ ಲಾಬುಷೇನ್ ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಇಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 69 ರನ್‌ ಸೇರಿಸುವಲ್ಲಿ ಯಶಸ್ವಿಯಾದರು.

ಆದರೆ ಶಾರ್ಟ್ ಪಿಚ್ ಎಸೆತಗಳು ಮತ್ತು ಸ್ವಿಂಗ್ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸುವುದು ಸುಲಭವಾಗಿರಲಿಲ್ಲ. ಊಟದ ವಿರಾಮಕ್ಕೂ ಕೆಲವೇ ನಿಮಿಷಗಳ ಮುನ್ನ ವಾರ್ನರ್ (43 ರನ್) ಲಯ ತಪ್ಪಿದರು. ಶಾರ್ದೂಲ್ ಠಾಕೂರ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ವಿಕೆಟ್‌ಕೀಪರ್ ಭರತ್‌ಗೆ ಕ್ಯಾಚ್ ಕೊಟ್ಟರು.

ಇದಾಗಿ ಮೂರು ಓವರ್‌ಗಳ ನಂತರ ಲಾಬುಷೇನ್ ಅವರ ವಿಕೆಟ್ ಎಗರಿಸಿದ ಮೊಹಮ್ಮದ್ ಶಮಿ ಸಂಭ್ರಮಿಸಿದರು.ಇದರ ನಂತರ ಭಾರತದ ಆಟಗಾರರಿಗೆ ಸಡಗರಪಡುವ ಅವಕಾಶವನ್ನು ಸ್ಮಿತ್ ಮತ್ತು ಹೆಡ್ ನೀಡಲಿಲ್ಲ.

ಹೆಡ್ ಅವರು ಸ್ಮಿತ್‌ಗಿಂತ ವೇಗವಾಗಿ ರನ್‌ ಗಳಿಸಿದರು. 60 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರ ಆಟದ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ತಾವೆದುರಿಸಿದ 106ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು. 29 ವರ್ಷದ ಹೆಡ್‌ ಅವರಿಗೆ ಟೆಸ್ಟ್‌ನಲ್ಲಿ ಇದು ಆರನೇ ಶತಕ. ಇದಕ್ಕೂ ಕೆಲವೇ ಎಸೆತಗಳ ಮುನ್ನ ಸ್ಮಿತ್ ಅರ್ಧಶತಕ ಪೂರೈಸಿದ್ದರು. ಅವರು ಅದಕ್ಕಾಗಿ 144 ಎಸೆತಗಳನ್ನು ಎದುರಿಸಿದ್ದರು. ಆದರೆ ಇವರಿಬ್ಬರ ಶಿಸ್ತುಬದ್ಧ ಜೊತೆಯಾಟದ ಮುಂದೆ ಬೌಲರ್‌ಗಳ ಆಟ ನಡೆಯಲಿಲ್ಲ.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 3ಕ್ಕೆ327 (85 ಓವರ್‌ಗಳಲ್ಲಿ)

ವಾರ್ನರ್ ಸಿ ಭರತ್ ಬಿ ಠಾಕೂರ್ 43 (60ಎ, 4X8)

ಉಸ್ಮಾನ್ ಸಿ ಭರತ್ ಬಿ ಸಿರಾಜ್ 0 (10ಎ)

ಮಾರ್ನಸ್ ಬಿ ಶಮಿ 26 (62ಎ, 4X3)

ಸ್ಮಿತ್ ಬ್ಯಾಟಿಂಗ್ 95 (227ಎ, 4X14)

ಹೆಡ್ ಬ್ಯಾಟಿಂಗ್ 146 (156ಎ, 4X22, 6X1)

ಇತರೆ: 17 (ಬೈ 1, ಲೆಗ್‌ಬೈ 5, ವೈಡ್ 6, ನೋಬಾಲ್ 5)

ವಿಕೆಟ್ ಪತನ: 1–2 (ಉಸ್ಮಾನ್ ಖ್ವಾಜಾ; 3.4), 2–71 (ಡೇವಿಡ್ ವಾರ್ನರ್; 21.4), 3–76 (ಮಾರ್ನಸ್ ಲಾಬುಷೇನ್; 24.1)

ಬೌಲಿಂಗ್‌: ಮೊಹಮ್ಮದ್ ಶಮಿ 20–3–77–1, ಮೊಹಮ್ಮದ್ ಸಿರಾಜ್ 19–4–67–1, ಉಮೇಶ್ ಯಾದವ್ 14–4–54–0, ಶಾರ್ದೂಲ್ ಠಾಕೂರ್ 18–2–75–1, ರವೀಂದ್ರ ಜಡೇಜ 14–0–48–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT