ಶನಿವಾರ, ಜೂನ್ 19, 2021
23 °C

IND vs BAN Pink test | ಭಾರತಕ್ಕೆ ಮುನ್ನಡೆ, ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಟೆಸ್ಟ್‌ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ 106 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿರುವ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ, ಮೊದಲ ದಿನದಾಟದ ಅಂತ್ಯಕ್ಕೆ 46 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 174 ರನ್‌ ಕಲೆ ಹಾಕಿದೆ. ಇದರೊಂದಿಗೆ 68 ರನ್‌ಗಳ ಮುನ್ನಡೆ ಸಾಧಿಸಿದ್ದು, ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕುವತ್ತ ಮುನ್ನಡೆದಿದೆ.

ಟೆಸ್ಟ್‌ ಪಂದ್ಯವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಹಗಲು ರಾತ್ರಿ ಆಯೋಜಿಸಲಾಗುತ್ತಿದೆ. ಹಾಗಾಗಿ ಕ್ರಿಕೆಟ್‌ ಜಗತ್ತನ್ನು ತನ್ನತ್ತ ಸೆಳೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ಪಡೆ, ಅಲ್ಪಮೊತ್ತಕ್ಕೆ ಕುಸಿದಿತ್ತು. ತ್ರಿವಳಿ ವೇಗಿಗಳಾದ ಇಶಾಂತ್‌ ಶರ್ಮಾ (5), ಉಮೇಶ್‌ ಯಾದವ್‌ (3) ಹಾಗೂ ಮೊಹಮದ್‌ ಶಮಿ ಅತ್ಯುತ್ತಮವಾಗಿ ಬೌಲಿಂಗ್‌ ದಾಳಿ ಸಂಘಟಿಸಿ, ಪ್ರವಾಸಿ ಬಳಗದ ಎಲ್ಲ ವಿಕೆಟ್‌ಗಳನ್ನೂ ಕಬಳಿಸಿದ್ದರು.

ಇದನ್ನೂ ಓದಿ: ಟಾಸ್‌ ಗೆದ್ದ ಬಾಂಗ್ಲಾ ಬ್ಯಾಟಿಂಗ್‌ ಆಯ್ಕೆ

ಮೊತ್ತ ಹಿಂಬಾಲಿಸಿದ ಭಾರತಕ್ಕೂ ಆರಂಭಿಕ ಆಘಾತ ಎದುರಾಯಿತು. ಕನ್ನಡಿಗ ಮಯಂಕ್‌ ಅಗರವಾಲ್‌ (14) ಹಾಗೂ ರೋಹಿತ್‌ ಶರ್ಮಾ (21) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲವಾದರು. ಮೂರನೇ ವಿಕೆಟ್‌ಗೆ ಟೆಸ್ಟ್‌ ಪರಿಣಿತ ಚೇತೇಶ್ವರ ಪೂಜಾರ (55)  ಹಾಗೂ ನಾಯಕ ವಿರಾಟ್‌ ಕೊಹ್ಲಿ 94 ರನ್‌ಗಳ ಜೊತೆಯಾಟವಾಡಿದರು.

ಸದ್ಯ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ. 93 ಎಸೆತಗಳಲ್ಲಿ 8 ಬೌಂಡರಿ ಸಹಿತ 59 ರನ್‌ ಕಲೆಹಾಕಿರುವ ಕೊಹ್ಲಿ ತಾಳ್ಮೆಯ ಆಟ ಮುಂದುವರಿಸಿದ್ದಾರ. 22 ಎಸೆತಗಳಲ್ಲಿ 23 ರನ್‌ ಗಳಿಸಿರುವ ರಹಾನೆ, ಕೊಹ್ಲಿಗೆ ತಕ್ಕ ಸಾಥ್‌ ನೀಡುತ್ತಿದ್ದಾರೆ.

ಇದನ್ನೂ ಓದಿ: ಹಾಕಿ ಚೆಂಡಿನಂತೆ ಭಾರವಾಗಿದೆ: ವಿರಾಟ್

ವೇಗವಾಗಿ ಐದು ಸಾವಿರ ರನ್ ಕಲೆಹಾಕಿದ ನಾಯಕ ಕೊಹ್ಲಿ

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕರಾಗಿ ವೇಗವಾಗಿ ಐದು ಸಾವಿರ ರನ್‌ ಪೂರೈಸಿದ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾದರು.

ನಾಯಕರಾಗಿ ಇದುವರೆಗೆ 53 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಅವರು, 86 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಈ ದಾಖಲೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಹೆಸರಲ್ಲಿ ಈವರೆಗೆ  ಇತ್ತು. ಪಾಂಟಿಂಗ್‌ 97ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ: ಭಾರಿ ಸದ್ದು ಮಾಡುತ್ತಿರುವ ಪಿಂಕ್‌ ಬಾಲ್‌ ಬಗ್ಗೆ ನಿಮಗೆಷ್ಟು ಗೊತ್ತು?

ಹೆಚ್ಚು ರನ್‌ ಗಳಿಸಿದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಸದ್ಯ ಆರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು 109 ಪಂದ್ಯಗಳ 193 ಇನಿಂಗ್ಸ್‌ಗಳಿಂದ ಒಟ್ಟು 8,659 ರನ್‌ ಕಲೆಹಾಕಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಅಲನ್‌ ಬಾರ್ಡರ್‌ ಇದ್ದು, ಅವರು 93 ಪಂದ್ಯಗಳ 154 ಇನಿಂಗ್ಸ್‌ನಿಂದ 6,623 ರನ್‌ ಬಾರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು