ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಬಾಂಗ್ಲಾ ಎದುರಿನ ಒಂದೇ ಪಂದ್ಯದಲ್ಲಿ ಸಚಿನ್, ಮಹೇಲ ದಾಖಲೆ ಮುರಿದ ಕೊಹ್ಲಿ

Last Updated 4 ನವೆಂಬರ್ 2022, 7:44 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡದ 'ರನ್‌ ಯಂತ್ರ' ವಿರಾಟ್‌ ಕೊಹ್ಲಿ ದಾಖಲೆ ಬೇಟೆಯನ್ನು ಮುಂದುವರಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿರುವ ಅವರು, ಬುಧವಾರ (ನವೆಂಬರ್ 2) ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಇನ್ನೂ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 184 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಬಾಂಗ್ಲಾ 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 66 ರನ್ ಗಳಿಸಿತ್ತು. ಈ ಹಂತದಲ್ಲಿ ಮಳೆ ಸುರಿದ ಕಾರಣ ಓವರ್‌ಗಳನ್ನು 16ಕ್ಕೆ ಕಡಿತಗೊಳಿಸಿ, ಗುರಿಯನ್ನು 151ಕ್ಕೆ ಇಳಿಸಲಾಯಿತು.

ಮಳೆ ವಿರಾಮದ ಬಳಿಕ ಅಮೋಘ ಆಟವಾಡಿದ ಭಾರತದ ಆಟಗಾರರು, 6 ವಿಕೆಟ್‌ ಪಡೆದು ಬಾಂಗ್ಲಾ ಬ್ಯಾಟರ್‌ಗಳನ್ನು 145ಕ್ಕೆ ನಿಯಂತ್ರಿಸಿದರು. ಹೀಗಾಗಿ 5 ರನ್ ಅಂತರದ ರೋಚಕ ಜಯ ದೊರೆಯಿತು. ಇದರೊಂದಿಗೆ ರೋಹಿತ್‌ ಶರ್ಮಾ ಪಡೆ ಆಡಿರುವ 4 ಪಂದ್ಯಗಳಲ್ಲಿ 3ನೇ ಜಯ ಸಾಧಿಸಿ 'ಬಿ' ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಈ ಪಂದ್ಯದ ಮೂಲಕ ಕೊಹ್ಲಿ ಬರೆದ ಹಲವು ದಾಖಲೆಗಳ ವಿವರ ಇಲ್ಲಿದೆ.

ಮಹೇಲ ದಾಖಲೆ ಬ್ರೇಕ್
ಈ ಬಾರಿಯ ವಿಶ್ವಕಪ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, ಮೂರು ಅರ್ಧಶತಕ ಸಹಿತ 220 ರನ್ ಗಳಿಸಿದ್ದಾರೆ. ಇದರೊಂದಿಗೆ ಚುಟುಕು ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.ಈವರೆಗೆ 25 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 23 ಇನಿಂಗ್ಸ್‌ಗಳಿಂದ 1,065 ರನ್‌ ಗಳಿಸಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಬ್ಯಾಟಿಂಗ್‌ ದಿಗ್ಗಜ ಮಹೇಲ ಜಯವರ್ಧನೆ ಅವರ ಹೆಸರಲ್ಲಿತ್ತು. ಅವರು 31 ಪಂದ್ಯಗಳಲ್ಲಿ 1,016 ರನ್ ಕಲೆಹಾಕಿದ್ದರು.

ಆಸ್ಟ್ರೇಲಿಯಾದಲ್ಲಿ ಕೊಹ್ಲಿಯೇ ಕಿಂಗ್
ವೇಗದ ಬೌಲಿಂಗ್‌ಗೆ ನೆರವು ನೀಡುವ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಕೊಹ್ಲಿ ಲೀಲಾಜಾಲವಾಗಿ ರನ್‌ ಗಳಿಸುವುದನ್ನು ಮುಂದುವರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ 62ರನ್‌ ಸಿಡಿಸುವುದರೊಂದಿಗೆ, ಆಸ್ಟ್ರೇಲಿಯಾದಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿದ್ದಾರೆ.

ಕಾಂಗರೂ ನಾಡಿನಲ್ಲಿ 68 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಮಾಡಿರುವ ಕೊಹ್ಲಿ,56.77 ರ ಸರಾಸರಿಯಲ್ಲಿ ಇದುವರೆಗೆ3,350 ರನ್‌ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್‌ ಇದ್ದಾರೆ. ಸಚಿನ್‌84 ಇನಿಂಗ್ಸ್‌ಗಳಿಂದ3,300 ರನ್‌ ಕಲೆಹಾಕಿದ್ದಾರೆ.

ವಿಶ್ವಕಪ್‌ನಲ್ಲಿ 13ನೇ ಅರ್ಧಶತಕ
ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ಅರ್ಧಶತಕ ಗಳಿಸಿದ ಬ್ಯಾಟರ್‌ ಎಂಬ ದಾಖಲೆಯನ್ನು ಕೊಹ್ಲಿ ಮತ್ತಷ್ಟು ಭದ್ರ ಪಡಿಸಿಕೊಂಡರು. ಬಾಂಗ್ಲಾ ವಿರುದ್ಧದ ಇನಿಂಗ್ಸ್‌ನೊಂದಿಗೆ ಈ ಟೂರ್ನಿಗಳಲ್ಲಿ ಅವರಅರ್ಧಶತಕಗಳ ಸಂಖ್ಯೆ 13ಕ್ಕೇರಿತು.

ತಲಾ 9 ಅರ್ಧಶತಕ ಸಿಡಿಸಿರುವ ಭಾರತದ ರೋಹಿತ್‌ ಶರ್ಮಾ ಮತ್ತು ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್ಎರಡನೇ ಸ್ಥಾನದಲ್ಲಿದ್ದಾರೆ.

60ನೇ ಸಲ 'ಪಂದ್ಯ ಶ್ರೇಷ್ಠ'
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗೆಲುವಿಗೆ ಪ್ರಮುಖ ಕಾರಣರಾದ ವಿರಾಟ್‌, ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಒಟ್ಟಾರೆ 15ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಮಾದರಿಯಲ್ಲಿ ಇಷ್ಟು ಬಾರಿ ಪ್ರಶಸ್ತಿ ಗೆದ್ದ ಮತ್ತೊಬ್ಬ ಆಟಗಾರ ಇಲ್ಲ.

ಅಷ್ಟೇ ಅಲ್ಲ ಮೂರೂ ಮಾದರಿಗಳಲ್ಲಿ ಕೊಹ್ಲಿ ಗೆದ್ದ ಪಂದ್ಯ ಶ್ರೇಷ್ಠ ಪ್ರಶಸ್ತಿಗಳ ಸಂಖ್ಯೆ ಇದೀಗ 60ಕ್ಕೆ ಏರಿಕೆಯಾಗಿದೆ. ಅವರು ಏಕದಿನ ಮಾದರಿಯಲ್ಲಿ 36, ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಬಾರಿ ಈ ಸಾಧನೆ ಮಾಡಿದ್ದಾರೆ.

ಸದ್ಯ ಆಡುತ್ತಿರುವ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿರುವ ಶಕಿಬ್‌ ಅಲ್‌ ಹಸನ್‌ ಅವರಿಗೂ ಕೊಹ್ಲಿಗೂ 21 ಪ್ರಶಸ್ತಿಗಳ ಅಂತರವಿದೆ. ಹಸನ್‌ 39 ಪ್ರಶಸ್ತಿ ಜಯಿಸಿದ್ದಾರೆ.

ಒಟ್ಟಾರೆ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಎನಿಸಿದ ಖ್ಯಾತಿ ಇರುವುದು ಸಚಿನ್‌ ತೆಂಡೂಲ್ಕರ್ ಹೆಸರಿನಲ್ಲಿ. ಅವರು ಮೂರೂ ಮಾದರಿಯಲ್ಲಿ ಒಟ್ಟು 76 ಸಲ ಈ ಸಾಧನೆ ಮಾಡಿದ್ದಾರೆ.

ಶ್ರೇಷ್ಠ ಬ್ಯಾಟಿಂಗ್ ಸರಾಸರಿ
ಚುಟುಕು ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ ಕೊಹ್ಲಿಯ ರನ್ ಗಳಿಕೆ ಸರಾಸರಿ 88.75 ರಷ್ಟಿದೆ. ಕೊಹ್ಲಿಯನ್ನು ಹೊರತುಪಡಿಸಿ 10ಕ್ಕಿಂತ ಹೆಚ್ಚು ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಮಾಡಿರುವ ಯಾವೊಬ್ಬ ಬ್ಯಾಟರ್‌ ಸಹ 60ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಗಳಿಸಿಲ್ಲ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೈಕಲ್‌ ಹಸ್ಸಿ ಅವರಿದ್ದು, ಅವರ ಸರಾಸರಿ 54.62 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT