ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 1st T20I: ಭಾರತಕ್ಕೆ ಹೀನಾಯ ಸೋಲು; ಇಂಗ್ಲೆಂಡ್‌‌ಗೆ 1-0 ಮುನ್ನಡೆ

Last Updated 12 ಮಾರ್ಚ್ 2021, 16:52 IST
ಅಕ್ಷರ ಗಾತ್ರ

ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಅಂತರ ರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವು ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಅಲ್ಲದೆ ಟ್ವೆಂಟಿ-20 ವಿಶ್ವಕಪ್ ಗುರಿಯಾಗಿಸಿಕೊಂಡು ಭರ್ಜರಿ ಪೂರ್ವ ತಯಾರಿಯನ್ನು ನಡೆಸಿದೆ.

ಭಾರತ ಒಡ್ಡಿದ 125 ರನ್‌‌ಗಳ ಸುಲಭ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 15.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ವಿಜಯ ದಾಖಲಿಸಿತು.

ಓಪನರ್‌ಗಳಾದ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲೇ 72 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನು ಸುಲಭಗೊಳಿಸಿದರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೇಸನ್ ರಾಯ್ ಕೇವಲ ಒಂದು ರನ್ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. 32 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಬಟ್ಲರ್ 28 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.

ಇನ್ನುಳಿದಂತೆ ಡೇವಿಡ್ ಮಲಾನ್ (24*) ಹಾಗೂ ಜಾನಿ ಬೆಸ್ಟೊ (26*) ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು. ಈ ಮೂಲಕ ಇನ್ನು 27 ಎಸೆತಗಳು ಬಾಕಿ ಉಳಿದಿರುವಂತೆಯೇ ಎರಡು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು. ಭಾರತದ ಪರ ಎಲ್ಲ ಬೌಲರ್‌ಗಳು ದುಬಾರಿಯೆನಿಸಿದರು.

ಅಯ್ಯರ್ ಫಿಫ್ಟಿ; ಭಾರತ 124/7...
ಈ ಮೊದಲು ಶ್ರೇಯಸ್ ಅಯ್ಯರ್ ಅರ್ಧಶತಕದ (67) ಹೊರತಾಗಿಯೂ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡವು 20 ರನ್ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಜೋಫ್ರಾ ಆರ್ಚರ್ ದಾಳಿಯಲ್ಲಿ (1) ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ (0) ಖಾತೆ ತೆರೆಯಲಾಗಲಿಲ್ಲ. ಶಿಖರ್ ಧವನ್ 12 ಎಸೆತಗಳಲ್ಲಿ ಬರಿ 4 ರನ್ ಗಳಿಸಿ ನಿರಾಸೆ ಮೂಡಿಸಿದರು.

ಇನ್ನೊಂದೆಡೆ ರಿಷಭ್ ಪಂತ್ (21) ಟೆಸ್ಟ್ ಸರಣಿಯಲ್ಲಿನ ಉತ್ತಮ ಫಾರ್ಮ್ ಮುಂದುವರಿಸುವ ಪ್ರಯತ್ನ ಮಾಡಿದರು. ಆದರೆ ಬೆನ್ ಸ್ಟೋಕ್ಸ್ ಬಲೆಗೆ ಬೀಳುವುದರೊಂದಿಗೆ 10 ಓವರ್‌ಗಳಲ್ಲಿ 48 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ಹಾಗೂ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದರು. ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಅಯ್ಯರ್ ಭಾರತವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು.

ಶ್ರೇಯಸ್ ಹಾಗೂ ಪಾಂಡ್ಯ ಐದನೇ ವಿಕೆಟ್‌ಗೆ 54 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಅಯ್ಯರ್ ಅರ್ಧಶತಕ ಸಾಧನೆ ಮಾಡಿದರು.

ಕೊನೆಯ ಹಂತದಲ್ಲಿ ರನ್ ಏರಿಸುವ ಭರದಲ್ಲಿ ಹಾರ್ದಿಕ್ ಪಾಂಡ್ಯ (19) ವಿಕೆಟ್ ಒಪ್ಪಿಸಿದರು. ಶಾರ್ದೂಲ್ ಠಾಕೂರ್ (0) ನಿರಾಸೆ ಮೂಡಿಸಿದರು.

ಅಂತಿಮವಾಗಿ ಭಾರತಕ್ಕೆ 124 ರನ್ ಗಳಿಸಲಷ್ಟೇ ಸಾಧ್ಯವಾಯಿತು. 48 ಎಸೆತಗಳನ್ನು ಎದುರಿಸಿದ ಅಯ್ಯರ್ ಎಂಟು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು. ಇನ್ನುಳಿದಂತೆ ಅಕ್ಷರ್ ಪಟೇಲ್ (7*) ಹಾಗೂ ವಾಷಿಂಗ್ಟನ್ ಸುಂದರ್ (3*) ರನ್ ಗಳಿಸಿದರು.

ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT