ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 5th Test: ಭಾರಿ ಮುನ್ನಡೆಯತ್ತ ಭಾರತ ಹೆಜ್ಜೆ

ಇಂಗ್ಲೆಂಡ್‌ ವಿರುದ್ಧ ಕ್ರಿಕೆಟ್‌ ಟೆಸ್ಟ್‌: ಸಿರಾಜ್‌ಗೆ ನಾಲ್ಕು ವಿಕೆಟ್; ಜಾನಿ ಬೆಸ್ಟೋ ಶತಕ
Last Updated 3 ಜುಲೈ 2022, 18:53 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ: ಜಾನಿ ಬೆಸ್ಟೋ ಸೊಗಸಾದ ಶತಕದ ಮೂಲಕ ಇಂಗ್ಲೆಂಡ್‌ಗೆ ಆಸರೆಯಾದರೆ, ಮೊನಚಿನ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್‌ ಭಾರತ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ತಂದುಕೊಡಲು ನೆರವಾದರು.

ಬರ್ಮಿಂಗ್‌ಹ್ಯಾಂನಲ್ಲಿ ನಡೆ ಯುತ್ತಿರುವ ಐದನೇ ಹಾಗೂ ಕೊನೆಯ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಭಾನುವಾರ ಭಾರತ ಮತ್ತು ಇಂಗ್ಲೆಂಡ್‌ ಸಮಬಲದ ಪೈಪೋಟಿ ನಡೆಸಿದವು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು 284 ರನ್‌ಗಳಿಗೆ ಆಲೌಟ್‌ ಮಾಡಿದ ಜಸ್‌ಪ್ರೀತ್‌ ಬೂಮ್ರಾ ಬಳಗ, ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 125 ರನ್‌ ಗಳಿಸಿದೆ. ಒಟ್ಟಾರೆ 257 ರನ್‌ಗಳ ಮುನ್ನಡೆಯಲ್ಲಿದೆ.

ಮೊದಲ ಇನಿಂಗ್ಸ್‌ನಲ್ಲಿ ಲಭಿಸಿದ 132 ರನ್‌ಗಳ ಮುನ್ನಡೆಯ ಬಲದೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ ಶುಭಮನ್‌ ಗಿಲ್‌ (4) ಅವರನ್ನು ಬೇಗನೇ ಕಳೆದುಕೊಂಡಿತು. ಆ್ಯಂಡರ್ಸನ್‌ ಬೌಲಿಂಗ್‌ನಲ್ಲಿ ಕ್ರಾಲಿಗೆ ಕ್ಯಾಚಿತ್ತು ಅವರು ನಿರ್ಗಮಿಸಿದರು. ಅಲ್ಪ ಸಮಯದ ಬಳಿಕ ಹನುಮ ವಿಹಾರಿ (11), ಬ್ರಾಡ್‌ಗೆ ವಿಕೆಟ್‌ ಒಪ್ಪಿಸಿದರು. ವಿರಾಟ್‌ ಕೊಹ್ಲಿ (20) ಮತ್ತೊಮ್ಮೆ
ವಿಫಲರಾದರು.

ಚೇತೇಶ್ವರ ಪೂಜಾರ (ಬ್ಯಾಟಿಂಗ್ 50, 139 ಎ) ಮತ್ತು ರಿಷಭ್ ಪಂತ್‌( ಬ್ಯಾಟಿಂಗ್ 30, 46 ಎ) ಅವರು ಕ್ರೀಸ್‌ನಲ್ಲಿದ್ದರು. ನಾಲ್ಕನೇ ದಿನ ವೇಗವಾಗಿ ರನ್‌ ಪೇರಿಸಿ ಇಂಗ್ಲೆಂಡ್‌ಗೆ ಕಠಿಣ ಗುರಿ ನೀಡುವ ಲೆಕ್ಕಚಾರವನ್ನು ಬೂಮ್ರಾ ಬಳಗ ಹಾಕಿಕೊಂಡಿದೆ.

ಬೆಸ್ಟೋ ಶತಕ: 5 ವಿಕೆಟ್‌ಗೆ 84 ರನ್‌ಗಳಿಂದ ಭಾನುವಾರ ಬೆಳಿಗ್ಗೆ ಆಟ ಮುಂದುವರಿಸಿದ ಇಂಗ್ಲೆಂಡ್‌ಗೆ ಬೆಸ್ಟೋ ಆಸರೆಯಾದರು. ಮೊದಲ ಇನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಗಳಿಸಬೇಕೆಂಬ ಭಾರತದ ಕನಸಿಗೆ ಅವರು ಅಡ್ಡಿಯಾದರು.

ಒಂದು ಬದಿಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಛಲದಿಂದ ಬ್ಯಾಟ್‌ ಬೀಸಿದ ಬೆಸ್ಟೋ (106, 140 ಎಸೆತ)ಸತತ ಮೂರನೇ ಟೆಸ್ಟ್‌ನಲ್ಲಿ ಹಾಗೂ ಈ ಋತುವಿನ ಐದನೇ ಶತಕ ಸಾಧನೆ ಮಾಡಿದರು.

ಬೆಳಿಗ್ಗೆ ಬೇಗನೇ ವಿಕೆಟ್‌ ಪಡೆದು, ಇಂಗ್ಲೆಂಡ್‌ ಮೇಲೆ ಒತ್ತಡ ಹೇರಬೇಕೆಂಬ ಭಾರತದ ತಂತ್ರ ಫಲಿಸಲಿಲ್ಲ. ಬೆಸ್ಟೋ ಅವರು ಬೆನ್‌ ಸ್ಟೋಕ್ಸ್‌ (25) ಜತೆ ಆರನೇ ವಿಕೆಟ್‌ಗೆ 66 ರನ್‌ ಸೇರಿಸಿದರು. ಎರಡನೇ ದಿನ ಮಿಂಚಿದ್ದ ಜಸ್‌ಪ್ರೀತ್‌ ಬೂಮ್ರಾ ಅವರ ಕರಾರುವಾಕ್‌ ದಾಳಿಯನ್ನು ಬೆಸ್ಟೋ ದಿಟ್ಟವಾಗಿ ಎದುರಿಸಿದರು.

ಸ್ಟೋಕ್ಸ್‌ ವಿಕೆಟ್‌ ಪಡೆದ ಶಾರ್ದೂಲ್‌ ಠಾಕೂರ್‌, ಭಾರತಕ್ಕೆ ದಿನದ ಮೊದಲ ಯಶಸ್ಸು ತಂದಿತ್ತರು. ಆದರೆ ಬೆಸ್ಟೋ ಅವರು ಸ್ಯಾಮ್‌ ಬಿಲಿಂಗ್ಸ್‌ (36, 57ನೇ ಎ) ಜತೆ ಏಳನೇ ವಿಕೆಟ್‌ಗೆ 92 ರನ್‌ ಸೇರಿಸಿದರು. ಇದರಿಂದ ಇಂಗ್ಲೆಂಡ್‌ ತಂಡದ ಮೊತ್ತ 250ರ ಗಡಿ
ದಾಟಿತು.

ಶತಕದ ಪೂರೈಸಿದ ಬಳಿಕ ಬೆಸ್ಟೋ ಹೆಚ್ಚುಹೊತ್ತು ನಿಲ್ಲಲಿಲ್ಲ. ಮೊಹಮ್ಮದ್‌ ಶಮಿ ಅವರ ಬೌಲಿಂಗ್‌ನಲ್ಲಿ ವಿರಾಟ್‌ ಕೊಹ್ಲಿಗೆ ಕ್ಯಾಚ್‌ನೀಡಿ ಪೆವಿಲಿಯನ್‌ಗೆ ಹೆಜ್ಜೆಯಿಟ್ಟರು.

ಸಿರಾಜ್‌ ಮಿಂಚು: ಇಂಗ್ಲೆಂಡ್‌ನ ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ರಟ್ಟೆಯರಳಿಸಲು ಮೊಹಮ್ಮದ್‌ ಸಿರಾಜ್ (66ಕ್ಕೆ 4) ಅವಕಾಶ ನೀಡಲಿಲ್ಲ. 36 ರನ್‌ ಸೇರಿಸುವಷ್ಟರಲ್ಲಿ ಕೊನೆಯ ಮೂರು ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್‌ ಇನಿಂಗ್ಸ್‌ಗೆ ಅಂತ್ಯಹಾಡಿದರು. ಬೂಮ್ರಾ (68ಕ್ಕೆ 3) ಶಿಸ್ತಿನ ದಾಳಿ ನಡೆಸಿದರೂ ಭಾನುವಾರ ಯಾವುದೇ ವಿಕೆಟ್‌ ಪಡೆಯಲಿಲ್ಲ. ಶಮಿ 78 ರನ್‌ ನೀಡಿ ಎರಡು ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT