ಭಾನುವಾರ, ಮೇ 9, 2021
25 °C

IND vs ENG: ಪದಾರ್ಪಣೆ ಪಂದ್ಯದಲ್ಲೇ ದಾಖಲೆ; ತಂದೆ ನೆನೆದು ಕೃಣಾಲ್ ಕಣ್ಣೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಏಕದಿನ ಕ್ರಿಕೆಟ್‌ನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ವೇಗವಾಗಿ ಅರ್ಧಶತಕ ಸಿಡಿಸಿ ದಾಖಲೆ ಬರೆದ ಕೃಣಾಲ್‌ ಪಾಂಡ್ಯ, ಮೊದಲ ಇನಿಂಗ್ಸ್‌ ಮುಗಿದ ಬಳಿಕ ತಮ್ಮ ತಂದೆಯನ್ನು ನೆನೆದು ಕಣ್ಣೀರು ಹಾಕಿದರು.

ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 317 ರನ್‌ ಕಲೆಹಾಕಿದೆ. ಈ ಪಂದ್ಯದಲ್ಲಿ ಶಿಖರ್‌ ಧವನ್‌ (98), ವಿರಾಟ್‌ ಕೊಹ್ಲಿ (56), ಕೆ.ಎಲ್‌. ರಾಹುಲ್‌ (ಅಜೇಯ 62) ಮತ್ತು ಕೃಣಾಲ್‌ ಪಾಂಡ್ಯ (ಅಜೇಯ 58) ಅರ್ಧಶತಕ ಸಿಡಿಸಿದರು.

ಈ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ ಸದ್ಯ 30 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 199 ರನ್‌ ಗಳಿಸಿದೆ. ಬಿರುಸಿನ ಬ್ಯಾಟಿಂಗ್‌ ನಡೆಸಿದ ಜಾನಿ ಬೈರ್ಸ್ಟ್ರೋವ್‌ ಮತ್ತು ಜೇಸನ್‌ ರಾಯ್‌ ಜೋಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 135 ರನ್‌ ಕೂಡಿಸಿದ್ದರು. ಈ ವೇಳೆ ಜೇಸನ್‌ ರಾಯಲ್‌ (46), ಬೆನ್‌ ಸ್ಟೋಕ್ಸ್‌ (1) ವಿಕೆಟ್‌ಗಳನ್ನು ಕಬಳಿಸಿದ ಕನ್ನಡಿಗ ಪ್ರಸಿದ್ಧ ಕೃಷ್ಣ, ಇಂಗ್ಲೆಂಡ್ ನಾಗಾಲೋಟಕ್ಕೆ ಬ್ರೇಕ್‌ ಹಾಕಿದರು.

94 ರನ್‌ ಗಳಿಸಿದ್ದ ಬೈರ್ಸ್ಟ್ರೋವ್‌. ನಾಯಕ ಮಾರ್ಗನ್‌ (22) ಮತ್ತು ಜಾಸ್‌ ಬಟ್ಲರ್‌ಗೆ‌ (2) ಶಾರ್ದೂಲ್‌ ಠಾಕೂರ್‌ ಪೆವಿಲಿಯನ್‌ ದಾರಿ ತೋರಿದರು.

ಸದ್ಯ ಸ್ಯಾಮ್‌ ಬಿಲ್ಲಿಂಗ್ಸ್‌ (15) ಮತ್ತು ಮೋಯಿನ್‌ ಅಲಿ (8)‌ ಕ್ರೀಸ್‌ನಲ್ಲಿದ್ದು, ಗೆಲ್ಲಲು ಇನ್ನು 120 ಎಸೆತಗಳಲ್ಲಿ 119 ರನ್‌ ಗಳಿಸಬೇಕಿದೆ.

ವೇಗದ ಅರ್ಧಶತಕ
ಭಾರತ ತಂಡದ ಮೊತ್ತ 5 ವಿಕೆಟ್‌ ನಷ್ಟಕ್ಕೆ 205 ರನ್ ಆಗಿದ್ದಾಗ ರಾಹುಲ್‌ಗೆ ಜೊತೆಯಾದ ಕೃಣಾಲ್‌ ಕೇವಲ 26 ಎಸೆತಗಳಲ್ಲಿಯೇ ಅರ್ಧಶತಕ ಸಿಡಿಸಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಪದಾರ್ಪಣೆ ಪಂದ್ಯದಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಒಟ್ಟಾರೆ 31 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ ಬರೋಬ್ಬರಿ 56 ರನ್‌ ಸಿಡಿಸಿ ಅಜೇಯವಾಗಿ ಉಳಿದರು. ಕೃಣಾಲ್ ಜೊತೆ ಸೇರಿ ಇನ್ನೊಂದು ತುದಿಯಲ್ಲಿ ಗುಡುಗಿದ ರಾಹುಲ್‌, 43 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್‌ ಮತ್ತು ಬೌಂಡರಿ ಸಹಿತ 62 ರನ್‌ ಚಚ್ಚಿದರು. ಹೀಗಾಗಿ ಭಾರತ ಬೃಹತ್‌ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಇದನ್ನೂ ಓದಿ: ಕ್ರಿಕೆಟರ್‌ ಹಾರ್ದಿಕ್‌ ಪಾಂಡ್ಯ ತಂದೆ ಹೃದಯಾಘಾತದಿಂದ ನಿಧನ

ತಂದೆ ನೆನೆದು ಕಣ್ಣೀರು ಹಾಕಿದ ಕೃಣಾಲ್
ಮೊದಲ ಇನಿಂಗ್ಸ್‌ ಮುಕ್ತಾಯದ ಬಳಿಕ ಮುರುಳಿ ಕಾರ್ತಿಕ್‌ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಲು ಬಂದ ಕೃಣಾಲ್‌, ʼಇದು ನನ್ನ ತಂದೆಗಾಗಿ. ಇದು ತುಂಬಾ ಭಾವುಕವಾದದುʼ ಎಂದು ಹೇಳಿದರು. ಅಷ್ಟರಲ್ಲಿ ಗದ್ಗದಿತರಾದ ಅವರು ಮರು ಮಾತನಾಡಲು ಸಾಧ್ಯವಾಗದೆ ಬಿಕ್ಕಳಿಸಿದರು.

ಮುರುಳಿ ಅವರು, ಸ್ವಲ್ಪ ಸಾವರಿಕೊಂಡು ಬಳಿಕ ಮಾತನಾಡುವಂತೆ ತಿಳಿಸಿದರಾದರೂ ಕೃಣಾಲ್‌ಗೆ ಮಾತನಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಸೆರೆಯಾದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಅಗಿವೆ. ಕೃಣಾಲ್‌ ಬ್ಯಾಟಿಂಗ್‌ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿರುವ ಅಭಿಮಾನಿಗಳು, ಧೈರ್ಯ ತುಂಬಿದ್ದಾರೆ.‌

ಸಹೋದರ ಹಾರ್ದಿಕ್‌ ಪಾಂಡ್ಯ ಅವರೂ ಭಾರತ ತಂಡದ ಪರ ಈ ಪಂದ್ಯದಲ್ಲಿ ಆಡುತ್ತಿದ್ದು, ತಂದೆ ಹಿಮಾಂಶು ಪಾಂಡೆ ಅವರು ಇದೇ ವರ್ಷ ಜನವರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.

 

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು