ಸೋಮವಾರ, ಜುಲೈ 4, 2022
21 °C

ಭಾರತದ ಆರಂಭಿಕರಿಗೆ ಅನುಭವದ ಕೊರತೆ ಇದ್ದರೂ, ಶ್ರೇಷ್ಠ ಸಾಮರ್ಥ್ಯವಿದೆ: ಟಿಮ್ ಸೌಥಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್: ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಪರ ಇನಿಂಗ್ಸ್‌ ಆರಂಭಿಸಲಿರುವ ಮಯಂಕ್ ಅಗರವಾಲ್ ಮತ್ತು ಪೃಥ್ವಿ ಶಾ ಜೋಡಿಗೆ ಅನುಭವದ ಕೊರತೆಯಿದ್ದರೂ, ಶ್ರೇಷ್ಠ ಸಾಮರ್ಥ್ಯವಿದೆ ಎಂದು ನ್ಯೂಜಿಲೆಂಡ್‌ ವೇಗಿ ಟಿಮ್‌ ಸೌಥಿ ಹೇಳಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಗಾಯಾಳಾಗಿರುವುದರಿಂದ ಅವರ ಬದಲು ಪೃಥ್ವಿಗೆ ಅವಕಾಶ ನೀಡಲಾಗಿದೆ. ಮಯಂಕ್‌ ಇದುವರೆಗೆ 9 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದರೆ, ಪೃಥ್ವಿ ಆಡಿರುವುದು ಕೇವಲ 2 ಟೆಸ್ಟ್‌. ಈ ಕುರಿತು ಮಾತನಾಡಿರುವ ಸೌಥಿ, ‘ಗಾಯದ ಸಮಸ್ಯೆಯಿಂದಾಗಿ ಒಂದಿಬ್ಬರು ಭಾರತ ತಂಡದಿಂದ ಹೊರಗುಳಿದಿದ್ದಾರೆ. ಆದರೆ, ತಂಡದ ಅಗತ್ಯಕ್ಕೆ ತಕ್ಕಂತೆ ಆಡಬಲ್ಲ ಸಾಕಷ್ಟು ಪ್ರತಿಭಾವಂತ ಮತ್ತು ಸಮರ್ಥ ಆಟಗಾರರು ಆ ತಂಡದಲ್ಲಿದ್ದಾರೆ. ಭಾರತದ ಆರಂಭಿಕರು ಅನನುಭವಿಗಳಾಗಿರಬಹುದು. ಆದರೆ, ಅವರು ಶ್ರೇಷ್ಠ ಆಟಗಾರರು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಹೀಗಾಗಿ ಅದನ್ನು ಗಮನದಲ್ಲಿರಿಸಿಯೇ ಆತಿಥೇಯ ತಂಡ ಕಣಕ್ಕಿಳಿಯಬೇಕಿದೆ. ಇಲ್ಲಿನ ಬೇಸಿನ್ ರಿಸರ್ವ್‌ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.

ಪಿಚ್‌ ಹಾಗೂ ಪ್ರವಾಸಿ ತಂಡದ ಕುರಿತು ಸೌಥಿ, ‘ಖಂಡಿತವಾಗಿಯೂ ಇಲ್ಲಿನ ಪಿಚ್‌ ತವರಿನ ತಂಡಕ್ಕೆ ನೆರವಾಗುವ ಸಾಧ್ಯತೆ ಇದೆ. ಆದರೆ, ನಾವು ಇಲ್ಲಿ ತುಂಬಾ ಚೆನ್ನಾಗಿ ಆಡಲೇಬೇಕು ಎನ್ನಲು ಸಾಕಷ್ಟು ಅಂಶಗಳಿವೆ. ಭಾರತ ತಂಡವು ಇನ್ನೂ ಎರಡು ಮೂರುದಿನ ಇಲ್ಲಿ ಅಭ್ಯಾಸ ನಡೆಸಲಿದ್ದು, ವಾತಾವರಣಕ್ಕೆ ಹೊಂದಿಕೊಳ್ಳಲಿದೆ’ ಎನ್ನುತ್ತಾ ತಮ್ಮ ತಂಡಕ್ಕೆ ಕಿವಿಮಾತು ಹೇಳಿದ್ದಾರೆ.

‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡವು ಕಳೆದ ಕೆಲ ಸಮಯದಿಂದ ಶ್ರೇಷ್ಠ ಸಾಮರ್ಥ್ಯ ತೋರುತ್ತಿದೆ. ಹಾಗಾಗಿ ಇದು ಸಮತೋಲಿತ ಪೈಪೋಟಿಯ ಸರಣಿಯಾಗಲಿದೆ’ ಎಂದೂ ನುಡಿದಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಟಿ20 ಮತ್ತು ಏಕದಿನ ಕ್ರಿಕೆಟ್ ಸರಣಿಯಿಂದ ದೂರ ಉಳಿದಿದ್ದ ಪ್ರಮುಖ ವೇಗಿ ಟ್ರೆಂಟ್‌ ಬೌಲ್ಟ್‌ ಟೆಸ್ಟ್‌ ಸರಣಿಗೆ ತಂಡ ಕೂಡಿಕೊಳ್ಳಲಿದ್ದಾರೆ. ಬೌಲ್ಟ್‌ ಜೊತೆಗಿನ ಬೌಲಿಂಗ್ ಸಂಯೋಜನೆ ಕುರಿತು ಟಿಮ್‌, ‘ಎಡಗೈ ಮತ್ತು ಬಲಗೈ ವೇಗಿಗಳಾಗಿ ಬಹುಕಾಲದಿಂದ ತಂಡದಲ್ಲಿ ಜೊತೆಯಾಗಿ ಆಡಿದ್ದೇವೆ. ನಾವೂ ಚೆಂಡನ್ನು ಚೆನ್ನಾಗಿ ಸ್ವಿಂಗ್ ಮಾಡಬಲ್ಲೆವು. ಪರಸ್ಪರರ ಬೌಲಿಂಗ್ ಕೌಶಲದ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದೇವೆ. ನಾವಿಬ್ಬರೂ ಉತ್ತಮ ಸ್ನೇಹವನ್ನೂ ಹೊಂದಿದ್ದೇವೆ. ಅದನ್ನು ಈ ಸರಣಿಯಲ್ಲೂ ಮುಂದುವರಿಸಲಿದ್ದೇವೆ’ ಎಂದಿದ್ದಾರೆ.

ಮೊದಲ ಪಂದ್ಯ ಇದೇ ತಿಂಗಳು 21ರಿಂದ ಮತ್ತು ಎರಡನೇ ಪಂದ್ಯ 29 ರಿಂದ ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು