ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂದ್ಯ ಗೆದ್ದದ್ದು ನಾನು ಹೊಡೆದ ಸಿಕ್ಸರ್‌ಗಳಿಂದಲ್ಲ, ಶಮಿ ಬೌಲಿಂಗ್‌ನಿಂದ: ರೋಹಿತ್

Last Updated 30 ಜನವರಿ 2020, 13:23 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್: ಸೂಪರ್ ಓವರ್‌ನಲ್ಲಿ ಎರಡು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಉಪನಾಯಕ ರೋಹಿತ್‌ ಶರ್ಮಾ ಪಂದ್ಯದ ಗೆಲುವಿಗೆಮೊಹಮದ್‌ ಶಮಿ ಬೌಲಿಂಗ್ ಕಾರಣಎಂದು ಹೇಳಿದ್ದಾರೆ.

ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್‌ ಕೊಹ್ಲಿ ಬಳಗ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 179 ರನ್‌ ಕಲೆಹಾಕಿತ್ತು. ಈ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್‌ ತಂಡವೂ ಇಷ್ಟೇ ರನ್‌ ಕಲೆಹಾಕಿತು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಸೂಪರ್‌ ಓವರ್‌ ಮೊರೆಹೋಗಲಾಗಿತ್ತು.

ಜಸ್‌ಪ್ರೀತ್‌ ಬೂಮ್ರಾ ಎಸೆದ ಸೂಪರ್‌ಓವರ್‌ನಲ್ಲಿ ಆತಿಥೇಯ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಮಾರ್ಟಿನ್‌ ಗಪ್ಟಿಲ್ 17 ರನ್ ಚಚ್ಚಿದರು.

ಇದರೆದುರು ರೋಹಿತ್‌ ಶರ್ಮಾ ಮತ್ತು ಕೆ.ಎಲ್‌. ರಾಹುಲ್‌ ಬ್ಯಾಟ್‌ ಬೀಸಿದರು.ಟಿಮ್‌ ಸೌಥಿ ಹಾಕಿದ ಓವರ್‌ನಮೊದಲ ನಾಲ್ಕು ಎಸೆತಗಳಲ್ಲಿ ಈ ಜೋಡಿ 8 ರನ್‌ ಕಲೆಹಾಕಿತು. ಉಳಿದೆರಡು ಎಸೆತಗಳಲ್ಲಿ 10 ರನ್ ಬೇಕಿತ್ತು. ಈ ವೇಳೆ ಎರಡು ಭರ್ಜರಿ ಸಿಕ್ಸರ್‌ ಸಿಡಿಸಿದ ರೋಹಿತ್‌ ಭಾರತಕ್ಕೆ ಗೆಲುವು ತಂದುಕೊಟ್ಟರು.

ಪಂದ್ಯದ ಬಳಿಕ ಮಾತನಾಡಿರುವ ರೋಹಿತ್‌, ‘ನನ್ನ ಪ್ರಕಾರ ಮೊಹಮದ್‌ ಶಮಿ ಎಸೆದ ಕೊನೆಯ ಓವರ್‌ ಪ್ರಮುಖವಾದದ್ದು. ನಿಜವಾಗಿಯೂ ನಮಗೆ ಗೆಲುವು ತಂದುಕೊಟ್ಟದ್ದೂ ಅದೇ ಓವರ್‌. ನನ್ನ ಸಿಕ್ಸರ್‌ಗಳಲ್ಲ. ಕೊನೆಯ ಓವರ್‌ನಲ್ಲಿ 9 ರನ್‌ಗಳನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸ್ಪರ್ಧಾತ್ಮಕ ಮೊತ್ತಹಿಂಬಾಲಿಸಿದ್ದ ನ್ಯೂಜಿಲೆಂಡ್‌ 19 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. ಕೊನೆಯ ಓವರ್‌ನಲ್ಲಿ ಗೆಲ್ಲಲು 9 ರನ್‌ ಬೇಕಿತ್ತು. 95 ರನ್‌ ಗಳಿಸಿದ್ದ ಕೇನ್‌ ವಿಲಿಯಮ್ಸನ್‌ ಮತ್ತು ದೊಡ್ಡ ಹೊಡೆತಗಾರ ರಾಸ್ ಟೇಲರ್‌ ಕ್ರೀಸ್‌ನಲ್ಲಿದ್ದರು. ಈ ಇಬ್ಬರನ್ನೂ ಔಟ್ ಮಾಡಿದ ಶಮಿ ಕೇವಲ 8 ರನ್ ನೀಡಿ ಪಂದ್ಯ ಟೈ ಆಗಲು ಕಾರಣರಾಗಿದ್ದರು.

‘ಉತ್ತಮವಾಗಿ ಆಡುತ್ತಿದ್ದಇಬ್ಬರು ಕ್ರೀಸ್‌ನಲ್ಲಿದ್ದರು. ಒಬ್ಬರು 95 ರನ್‌ ಬಾರಿಸಿದ್ದರು. ಇನ್ನೊಂದು ತುದಿಯಲ್ಲಿ ಇದ್ದದ್ದುಅನುಭವಿ ಆಟಗಾರನೇ. ಅಂತಹ ಸಂದರ್ಭದಲ್ಲಿ ಬೌಲ್‌ ಮಾಡಿದ್ದಕ್ಕೆ ಮತ್ತು ಪಂದ್ಯವನ್ನು ಕೈಯಿಂದ ಜಾರದಂತೆ ನೋಡಿಕೊಂಡಿದ್ದಕ್ಕೆಶಮಿಗೆ ಹ್ಯಾಟ್ಸ್‌ ಆಫ್‌’ ಎಂದು ಹೇಳಿದ್ದಾರೆ.

ಈ ಜಯದೊಂದಿಗೆ ಭಾರತ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಸರಣಿಯ ನಾಲ್ಕು ಮತ್ತು ಐದನೇ ಪಂದ್ಯಗಳು ಜನವರಿ 31 ಮತ್ತು ಫೆಬ್ರವರಿ 02 ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT