ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ 2011ರ ವಿಶ್ವಕಪ್‌ ಫೈನಲ್‌ಗೇರಿದ್ದು ಇದೇ ದಿನ

Last Updated 30 ಮಾರ್ಚ್ 2021, 4:33 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡವು ಹತ್ತು ವರ್ಷಗಳ ಹಿಂದೆ ಇದೇ ದಿನ ಕ್ರಿಕೆಟ್‌ ಲೋಕದಲ್ಲಿ ತನ್ನ ಪ್ರಮುಖ ಎದುರಾಳಿಯಾಗಿರುವ ಪಾಕಿಸ್ತಾನವನ್ನು ಮಣಿಸಿ 2011ರ ವಿಶ್ವಕಪ್‌ ಫೈನಲ್‌ಗೆ ಪ್ರವೇಶ ಪಡೆದಿತ್ತು. ಇದರೊಂದಿಗೆ ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧದ ಅಜೇಯ ಓಟವನ್ನೂ ಮುಂದುವರಿಸಿತ್ತು.

ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯವು2011ಮಾರ್ಚ್‌ 30ರಂದುಆಯೋಜನೆಗೊಂಡಿತ್ತು. ಮೊಹಾಲಿಯಲ್ಲಿರುವಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು260 ರನ್‌ ಗಳಿಸಿತ್ತು. ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ 85 ರನ್‌ ಗಳಿಸಿ ನೆರವಾಗಿದ್ದರು. ಅವರಿಗೆನಾಲ್ಕು ಸಲ ಜೀವದಾನ ನೀಡಿದ್ದಕ್ಕೆ ಪಾಕ್‌ ತಂಡ ತಕ್ಕಬೆಲೆ ತೆತ್ತಿತು. ಆರಂಭಿಕ ವೀರೇಂದ್ರ ಸೆಹ್ವಾಗ್‌ (38), ಗೌತಮ್‌ ಗಂಭೀರ್‌ (27), ಸುರೇಶ್‌ ರೈನಾ (ಅಜೇಯ 36) ಮತ್ತು ನಾಯಕ ಎಂಎಸ್‌ ಧೋನಿ (25)ಕೂಡ ಅಲ್ಪ ಕಾಣಿಕೆ ನೀಡಿದ್ದರು. ಆ ಟೂರ್ನಿಯ ಶ್ರೇಷ್ಠ ಆಟಗಾರ ಎನಿಸಿದ್ದ ಯುವರಾಜ್‌ ಸಿಂಗ್‌ ಸೊನ್ನೆ ಸುತ್ತಿದ್ದರು.

ಹತ್ತು ಓವರ್‌ಗಳಲ್ಲಿ 46 ರನ್‌ ಬಿಟ್ಟುಕೊಟ್ಟಿದ್ದಪಾಕ್‌ ಪ್ರಮುಖ ವೇಗಿ ವಹಾಬ್‌ ರಿಯಾಜ್‌ ಐದು ವಿಕೆಟ್‌ ಗೊಂಚಲು ಸಾಧನೆ ಮಾಡಿದ್ದರು. ಶಾಯೀದ್‌ ಅಜ್ಮಲ್‌2 ಮತ್ತು ಮೊಹಮದ್‌ ಹಫೀಜ್‌ 1ವಿಕೆಟ್‌ ಉರುಳಿಸಿದ್ದರು.

261ಗುರಿ ಬೆನ್ನಟ್ಟಿದ ಪಾಕ್‌ಗೆ ಆರಂಭಿಕರಾದ ಕಮ್ರಾನ್‌ ಅಕ್ಮಲ್‌ (19) ಮತ್ತು ಮೊಹಮದ್‌ ಹಫೀಜ್‌ ಮೊದಲ ವಿಕೆಟ್‌ಗೆ44 ರನ್‌ ಸೇರಿಸಿದ್ದರು. 9ನೇ ಓವರ್‌ನಲ್ಲಿ ಅಕ್ಮಲ್‌ ವಿಕೆಟ್‌ ಪಡೆಯುವ ಮೂಲಕ ಜಹೀರ್‌ ಖಾನ್‌ ಭಾರತಕ್ಕೆ ಮೊದಲ ಯಶ ತಂದು ಕೊಟ್ಟರು. ಅದಾದ ಬಳಿಕ ಪಾಕ್‌ ಪರ ಯಾವುದೇ ವಿಕೆಟ್‌ಗೆ ಉತ್ತಮ ಜೊತೆಯಾಟ ಮೂಡಿ ಬರದಂತೆ ಭಾರತ ನೋಡಿಕೊಂಡಿತು. ಇದು ನೆರೆಯ ರಾಷ್ಟ್ರದ ಫೈನಲ್‌ ಕನಸಿಗೆ ಅಡ್ಡಿಯಾಯಿತು. ಮಿಶ್ಬಾ ಉಲ್‌-ಹಕ್ (56)‌, ಹಫೀಜ್‌ (43) ಅಲ್ಪ ಪ್ರತಿರೋಧ ತೋರಿದರೂ ಸಾಕಾಗಲಿಲ್ಲ.

ಅಂತಿಮವಾಗಿ 231 ರನ್‌ ಗಳಿಸಿದ ಪಾಕ್‌ ಪಡೆ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 29 ರನ್‌ ಅಂತರದ ಸೋಲೊಪ್ಪಿಕೊಂಡಿತು.

ಭಾರತ ಪರ ಬೌಲಿಂಗ್‌ ಮಾಡಿದ ಜಹೀರ್‌, ಮುನಾಫ್‌ ಪಟೇಲ್‌, ಆಶಿಸ್‌ ನೆಹ್ರಾ, ಹರ್ಭಜನ್‌ ಸಿಂಗ್‌, ಯುವರಾಜ್‌ ಸಿಂಗ್‌ ತಲಾ ಎರೆಡು ವಿಕೆಟ್‌ಗಳನ್ನು ಹಂಚಿಕೊಂಡರು.

ಮಾರ್ಚ್‌ 29ರಂದು ನಡೆದಿದ್ದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ್ದ ಶ್ರೀಲಂಕಾ ತಂಡ ಫೈನಲ್‌ನಲ್ಲಿ ಭಾರತಕ್ಕೆ ಸವಾಲೊಡ್ಡಿತ್ತು.ಏಪ್ರಿಲ್‌ 2 ರಂದು ನಡೆದ ಫೈನಲ್‌ ಪಂದ್ಯವನ್ನು 6 ವಿಕೆಟ್‌ ಅಂತರದಿಂದಗೆದ್ದ ಧೋನಿ ಪಡೆ ಚಾಂಪಿಯನ್‌ ಎನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT