ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ

Last Updated 13 ಜೂನ್ 2022, 20:15 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ವಿಶಾಖಪಟ್ಟಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲೂ ಮುಗ್ಗರಿಸಿದರೆ ಭಾರತಕ್ಕೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಎದುರಾಗಲಿದೆ. ಅದರಿಂದ ಪಾರಾಗಲು ಜಯದ ಹಾದಿಗೆ ಮರಳುವುದು ಅನಿವಾರ್ಯ.

ರಿಷಭ್‌ ಪಂತ್‌ ಅವರಿಗೆ ಆಕಸ್ಮಿಕವಾಗಿ ನಾಯಕತ್ವದ ಹೊಣೆ ದೊರೆತಿದೆಯಾದರೂ, ಅದನ್ನು ಸದುಪಯೋಗ‍ಪಡಿಸಿಕೊಳ್ಳಲು ವಿಫಲರಾಗಿದ್ದಾರೆ. ಭಾರತ ತಂಡದ ಭವಿಷ್ಯದ ನಾಯಕನೆಂದೇ ಹೇಳಲಾಗುತ್ತಿರುವ ಈ ವಿಕೆಟ್‌ಕೀಪರ್ –ಬ್ಯಾಟರ್ ಅತಿಯಾದ ಒತ್ತಡದಲ್ಲಿದ್ದಾರೆ. ತಾವು ಫಾರ್ಮ್‌ಗೆ ಮರಳುವ ಜತೆಯಲ್ಲೇ, ತಂಡವನ್ನು ಗೆಲುವಿನತ್ತ ಮುನ್ನಡೆಸುವ ಹೊಣೆ ಅವರ ಮೇಲಿದೆ.

ಮೊದಲ ಪಂದ್ಯದಲ್ಲಿ ಭಾರತ ಬೌಲಿಂಗ್‌ನಲ್ಲಿ ಎಡವಿದ್ದರೆ, ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತ್ತು. ಆದ್ದರಿಂದ ಜಯ ಪಡೆಯಬೇಕಾದರೆ ಎರಡೂ ವಿಭಾಗಗಳಲ್ಲಿ ಸಾಕಷ್ಟು ಸುಧಾರಣೆ ಅಗತ್ಯ.

ಇಶಾನ್‌ ಕಿಶನ್ ಉತ್ತಮವಾಗಿ ಆಡುತ್ತಿ ದ್ದರೂ, ಇನ್ನೊಬ್ಬ ಆರಂಭಿಕ ಬ್ಯಾಟರ್‌ ಋತುರಾಜ್‌ ಗಾಯಕವಾಡ್ (23 ಮತ್ತು 1) ನಿರಾಸೆ ಉಂಟುಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್‌ ದಾಳಿಯನ್ನು ಎದುರಿಸುವ ಕೆಚ್ಚು ಅವರು ತೋರಿಸಿಲ್ಲ. ಶ್ರೇಯಸ್‌ ಅಯ್ಯರ್, ಹಾರ್ದಿಕ್‌ ಪಾಂಡ್ಯ ಅವರಿಂದಲೂ ನಿರೀಕ್ಷಿತ ಆಟ ಮೂಡಿಬಂದಿಲ್ಲ.

ಕೈಕೊಟ್ಟ ಸ್ಪಿನ್ನರ್‌ಗಳು: ಭಾರತ ತಂಡದ ಸ್ಪಿನ್ನರ್‌ಗಳು ಪ್ರಭಾವಿ ಎನಿಸಿಲ್ಲ. ಯಜುವೇಂದ್ರ ಚಾಹಲ್‌ ಮತ್ತು ಅಕ್ಷರ್‌ ಪಟೇಲ್‌ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 75 (6 ಓವರ್‌ಗಳಲ್ಲಿ) ಹಾಗೂ 59 (5 ಓವರ್) ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇವರಲ್ಲಿ ಒಬ್ಬರನ್ನು ಕೈಬಿಟ್ಟು, ಲೆಗ್ ಸ್ಪಿನ್ನರ್‌ ರವಿ ಬಿಷ್ಣೋಯಿ ಅಥವಾ ಆಲ್‌ರೌಂಡರ್‌ ವೆಂಕಟೇಶ್ ಅಯ್ಯರ್‌ಗೆ ಅವಕಾಶ ನೀಡಲಾಗುವುದೇ ಎಂಬುದನ್ನು ಕಾದುನೋಡಬೇಕು.

ಆತ್ಮವಿಶ್ವಾಸದಲ್ಲಿ ಪ್ರವಾಸಿ ತಂಡ: ಭಾರತ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಮತ್ತೊಂದೆಡೆ ಪ್ರವಾಸಿ ತಂಡ ಯಾವುದೇ ಒತ್ತಡವಿಲ್ಲದೆ ಕಣಕ್ಕಿಳಿಯಲಿದೆ.

ಈಗಾಗಲೇ ತಮ್ಮ ತಾಕತ್ತು ತೋರಿಸಿರುವ ಡೇವಿಡ್‌ ಮಿಲ್ಲರ್‌, ರಸಿ ವ್ಯಾನ್ ಡರ್ ಡಸೆ ಮತ್ತು ಹೆನ್ರಿಚ್‌ ಕ್ಲಾಸೆನ್ ಉತ್ತಮ ಫಾರ್ಮ್‌ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಕ್ಲಾಸೆನ್‌ 81 ರನ್‌ ಗಳಿಸಿ, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ನವದೆಹಲಿಯಲ್ಲಿ 200 ರನ್‌ಗಳಿಗೂ ಅಧಿಕ ಗುರಿ ಬೆನ್ನಟ್ಟಿ ಗೆದ್ದಿದ್ದ ಪ್ರವಾಸಿ ತಂಡ, ಎರಡನೇ ಪಂದ್ಯದಲ್ಲೂ ಚೇಸಿಂಗ್‌ನಲ್ಲಿ ಯಶ ಕಂಡಿತ್ತು.‌

ತಂಡಗಳ ವಿವರ

ಭಾರತ: ರಿಷಭ್ ಪಂತ್ (ನಾಯಕ–ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಆರ್ಷದೀಪ್ ಸಿಮಗ್, ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ರೀಜಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಎನ್ರಿಚ್ ನಾರ್ಕಿಯಾ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೆಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್, ರಸಿ ವ್ಯಾನ್ ಡರ್ ಡಸೆ, ಮಾರ್ಕೊ ಜಾನ್ಸೆನ್.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT