ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಸಿಕ್ಕಾಗಲೆಲ್ಲ ನಾವು ಪುಟಿದೇಳುತ್ತೇವೆ: ವಿರಾಟ್ ಕೊಹ್ಲಿ

Last Updated 31 ಡಿಸೆಂಬರ್ 2021, 7:45 IST
ಅಕ್ಷರ ಗಾತ್ರ

ಸೆಂಚುರಿಯನ್: ದಕ್ಷಿಣಾ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 113ರನ್ ಅಂತರದ ಗೆಲುವು ಸಾಧಿಸಿರುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸದ್ಯ 1–0 ಮುನ್ನಡೆ ಪಡೆದುಕೊಂಡಿದೆ. ತಮ್ಮ ತಂಡವು ಮುಂದಿನ ಪಂದ್ಯದಲ್ಲಿಯೂ ಜಯ ಸಾಧಿಸಲಿದೆ ಎಂದುಕೊಹ್ಲಿ ವಿಶ್ವಾಸದಿಂದ ಹೇಳಿದ್ದಾರೆ.

ಗೆಲುವಿನ ಬಳಿಕ ಬಿಸಿಸಿಐ ಟಿವಿಯಲ್ಲಿ ಮಾತನಾಡಿರುವ ಅವರು, 'ದಕ್ಷಿಣ ಆಫ್ರಿಕಾದಲ್ಲಿನ ಈ ಸರಣಿಯು ಯಾವುದೇ ಸ್ಥಳದಲ್ಲಿ ಆಡಿದರೂ ಸುಲಭವಾಗಿರುವುದಿಲ್ಲ. ಸೆಂಚುರಿಯನ್‌ನಲ್ಲಿ ಆಡುವುದಂತೂ ಖಂಡಿತ ಕಠಿಣ. ಆದಾಗ್ಯೂ, ನಾಲ್ಕು ದಿನಗಳಲ್ಲಿಯೇ ಫಲಿತಾಂಶ ಕಂಡುಕೊಳ್ಳುವುದರೊಂದಿಗೆ ಬೌಲಿಂಗ್‌, ಬ್ಯಾಟಿಂಗ್, ಫೀಲ್ಡಿಂಗ್‌ ವಿಭಾಗದಲ್ಲಿ ನಾವು ಅಂದುಕೊಂಡಿದ್ದಂತೆಯೇ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೇವೆ. ನಾವೀಗ ಕೇವಲ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇವೆ ಮತ್ತು ನಮ್ಮ ಆಟವನ್ನು ಹೀಗೆಯೇ ಮುಂದುವರಿಸುತ್ತೇವೆ. ಯಾವುದೇ ಹಂತದಲ್ಲಿ ಅವಕಾಶ ಕೊಟ್ಟರೂ, ಪುಟಿದೇಳುತ್ತೇವೆ' ಎಂದು ಹೇಳಿಕೊಂಡಿದ್ದಾರೆ.

ಮುಂದುವರಿದು, 'ದೇಶದಿಂದ ಹೊರಗೆ 1–0 ಮುನ್ನಡೆ ಪಡೆದಿರುವುದು ಉತ್ತಮವಾದ ಸ್ಥಾನವಾಗಿದೆ. ಎದುರಾಳಿ ತಂಡವನ್ನು ಎರಡನೇ ಪಂದ್ಯದಲ್ಲಿಯೂ ಒತ್ತಡಕ್ಕೆ ಸಿಲುಕಿಸುವುದು ನಮ್ಮ ಪಾಲಿಗೆ ಸುವರ್ಣಾವಕಾಶ. ತಂಡದ ಪ್ರತಿಯೊಬ್ಬರೂ ಮುನ್ನುಗ್ಗಲು ಕಾತರದಿಂದ ಕಾಯುತ್ತಿದ್ದಾರೆ. ಜೋಹಾನ್ಸ್‌ಬರ್ಗ್‌ ಪಂದ್ಯದವರೆಗೆ ಕಾಯಲಾರೆ' ಎಂದು ತಿಳಿಸಿದ್ದಾರೆ.

ಹಾಗೆಯೇ, 'ನಿಮ್ಮ ಆಟವನ್ನು ನೀವು ಹೇಗೆ ಆಡಿದ್ದೀರೆಂಬುದನ್ನು ವಿಶ್ಲೇಷಿಸಿಕೊಳ್ಳಲು ಹೊಸವರ್ಷವು ಖಂಡಿತ ಉತ್ತಮ ಘಟ್ಟವಾಗಿದೆ. ನನ್ನ ಪ್ರಕಾರ, ನಾವುಅಸಾಧಾರಣವಾಗಿ ಆಡಿದ್ದೇವೆ. ಅದು ಈ ವರ್ಷ ಮಾತ್ರವಲ್ಲ. ಕಳೆದ 2–3 ವರ್ಷಗಳಿಂದ, ಮುಖ್ಯವಾಗಿ ವಿದೇಶಗಳಲ್ಲಿ ಅಮೋಘವಾಗಿ ಆಡಿದ್ದೇವೆ. ನಮ್ಮದು ಆತ್ಮ ವಿಶ್ವಾಸದಿಂದ ಕೂಡಿದ ಮತ್ತು ಉತ್ತಮ ಪ್ರದರ್ಶನ ನೀಡಿರುವ ತಂಡವಾಗಿದೆ' ಎಂದಿದ್ದಾರೆ.

ಸರಣಿಯ ಎರಡನೇ ಪಂದ್ಯವು ಜೋಹಾನ್ಸ್‌ಬರ್ಗ್‌ನಲ್ಲಿ ಜನವರಿ 03 ರಂದು ಆರಂಭವಾಗಲಿದ್ದು,07ರ ವರೆಗೆ ನಡೆಯಲಿದೆ. ಅಂತಿಮ ಪಂದ್ಯ ಜನವರಿ 11–15ರವರೆಗೆ ಕೇಪ್‌ಟೌನ್‌ನಲ್ಲಿ ಆಯೋಜನೆಗೊಳ್ಳಲಿದೆ.

ಬಳಿಕ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ, ಕ್ರಮವಾಗಿ ಜನವರಿ 19, 21 ಮತ್ತು 23 ರಂದು ಸೆಣಸಾಟ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT