ಬುಧವಾರ, ಏಪ್ರಿಲ್ 14, 2021
31 °C
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡದ ಆಯ್ಕೆ; ಮಿಥಾಲಿ ರಾಜ್ ನಾಯಕಿ

ಮಹಿಳಾ ಕ್ರಿಕೆಟ್: ಬೆಂಗಳೂರಿನ ಪ್ರತ್ಯೂಷಾ, ಮೋನಿಕಾಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಸಿ. ಪ್ರತ್ಯೂಷಾ ಮತ್ತು ಮೋನಿಕಾ ಪಟೇಲ್ ಅವರು ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಮಾರ್ಚ್ ಏಳರಿಂದ ಲಖನೌನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗಳಲ್ಲಿ ಅವರು ಆಡಲಿದ್ಧಾರೆ.

ಏಕದಿನ ಕ್ರಿಕೆಟ್ ತಂಡಕ್ಕೆ ಮಿಥಾಲಿ ರಾಜ್ ಮತ್ತು ಟಿ20 ಬಳಗಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ವಹಿಸಲಿದ್ದಾರೆ.

ಅನುಭವಿ ಮಧ್ಯಮವೇಗಿ ಶಿಖಾ ಪಾಂಡೆ ಮತ್ತು ವಿಕೆಟ್‌ಕೀಪರ್ ತಾನ್ಯಾ ಭಾಟಿಯಾ ಅವರನ್ನು ಆಯ್ಕೆ ಮಾಡಿಲ್ಲ. ಕೀಪರ್ ಶ್ವೇತಾ ವರ್ಮಾ, ಸುಷ್ಮಾ ವರ್ಮಾ ಅವರಿಗೆ ಸ್ಥಾನ ನೀಡಲಾಗಿದೆ.

ಶೆಫಾಲಿ ವರ್ಮಾ ಅವರನ್ನು ಏಕದಿನ ತಂಡದಲ್ಲಿ ಆಯ್ಕೆ ಮಾಡಿಲ್ಲ. ಆದರೆ ಟಿ20 ತಂಡದಲ್ಲಿದ್ದಾರೆ.

ವಿಜಯಪುರದ ರಾಜೇಶ್ವರಿ ಎರಡೂ ತಂಡಗಳಲ್ಲಿ ಸ್ಥಾನ ಗಳಿಸಿದ್ದಾರೆ.

ಹೆರಾನ್ಸ್‌ ಹುಡುಗಿಯರು: ಎಡಗೈ ಮಧ್ಯಮವೇಗಿ ಮೋನಿಕಾ ಮತ್ತು ಆಲ್‌ರೌಂಡರ್ ಪ್ರತ್ಯೂಷಾ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇವರಿಬ್ಬರು ಮತ್ತು ರಾಜೇಶ್ವರಿ ಅವರು ಬೆಂಗಳೂರಿನ ಹೆರಾನ್ಸ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

’ನಮ್ಮ ರಾಜ್ಯದಿಂದ ಭಾರತ ಮಹಿಳಾ ತಂಡದಲ್ಲಿ ಮೂವರು ಅಟಗಾರ್ತಿಯರು ಆಡುತ್ತಾರೆ ಎನ್ನುವುದೇ ದೊಡ್ಡ ಗೌರವದ ವಿಷಯ. ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶವು ಇದೇ ಮೊದಲ ಬಾರಿಗೆ ಪ್ರತ್ಯೂಷಾ ಹಾಗೂ ಮೋನಿಕಾಗೆ ಲಭಿಸಿದೆ. ಅವರ ಶ್ರಮ ಮತ್ತು ಪ್ರತಿಭೆಗೆ ಸಂದ ಫಲ ಇದು. ರಾಜೇಶ್ವರಿ ಕೂಡ ಈಗಾಗಲೇ ಉತ್ತಮ ಆಟದಿಂದ ಗಮನ ಸೆಳೆದಿದ್ದಾರೆ. ಅವರು ಇನ್ನೂ ಉತ್ತಮ ಸಾಧನೆ ಮಾಡುವುದರಲ್ಲಿ ಸಂದೇಹವೇ ಇಲ್ಲ. ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ಸಿಗಬೇಕು. ಈ ರೀತಿ ಅವಕಾಶಗಳು ಸಿಕ್ಕಾಗ ಉಳಿದವರಿಗೂ ಪ್ರೇರಣೆಯಾಗುತ್ತದೆ‘ ಎಂದು ಹೆರಾನ್ಸ್‌ ಕ್ಲಬ್‌ನ ಹಿರಿಯ ಕೋಚ್ ಕೆ. ಮುರಳೀಧರ ’ಪ್ರಜಾವಾಣಿ‘ಗೆ ಹೇಳಿದರು.


ರಾಜೇಶ್ವರಿ ಗಾಯಕವಾಡ್

ತಂಡಗಳು
ಏಕದಿನ ಕ್ರಿಕೆಟ್:
ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂದಾನಾ, ಜೆಮಿಮಾ ರಾಡ್ರಿಗಸ್, ಪೂನಮ್ ರಾವತ್, ಪ್ರಿಯಾ ಪೂನಿಯಾ, ಯಷ್ಟಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಸುಷ್ಮಾ ವರ್ಮಾ (ವಿಕೆಟ್‌ಕೀಪರ್), ಶ್ವೇತಾ ವರ್ಮಾ (ವಿಕೆಟ್‌ಕೀಪರ್), ರಾಧಾ ಯಾದವ್, ರಾಜೇಶ್ವರಿ ಗಾಯಕವಾಡ್, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಪೂನಂ ಯಾದವ್, ಸಿ. ಪ್ರತ್ಯೂಷಾ, ಮೋನಿಕಾ ಪಟೇಲ್.

ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನಾ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಹರ್ಲಿನ್ ಡಿಯೋಲ್, ಸುಷ್ಮಾ ವರ್ಮಾ (ವಿಕೆಟ್‌ಕೀಪರ್), ನುಝಾತ್ ಪರ್ವೀನ್ (ವಿಕೆಟ್‌ಕೀಪರ್), ಆಯುಷಿ ಸೋನಿ, ಅರುಂಧತಿ ರೆಡ್ಡಿ, ರಾಧಾ ಯಾದವ್, ರಾಜೇಶ್ವರಿ ಗಾಯಕವಾಡ್, ಪೂನಂ ಯಾದವ್, ಮಾನಸಿ ಜೋಶಿ, ಮೋನಿಕಾ ಪಟೇಲ್, ಸಿ. ಪ್ರತ್ಯೂಷಾ, ಸಿಮ್ರನ್ ದಿಲ್ ಬಹಾದ್ದೂರ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು