ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌ನಲ್ಲಿ ಮೂರನೇ ಶತಕ ಸಿಡಿಸಿದ ಸೂರ್ಯ; ಶ್ರೀಲಂಕಾಗೆ 229 ರನ್ ಗುರಿ

Last Updated 7 ಜನವರಿ 2023, 16:00 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಟಿ20 ಕ್ರಿಕೆಟ್‌ನ ನಂಬರ್‌ 1 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅವರ ಅಬ್ಬರದ ಶತಕದ ನೆರವಿನಿಂದ ಭಾರತ ತಂಡವು ಶ್ರೀಲಂಕಾ ಪಡೆಗೆ 229 ರನ್‌ಗಳ ಕಠಿಣ ಗುರಿ ನೀಡಿದೆ.

ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ನಾಯಕ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡರು. ಶುಭಮನ್‌ ಗಿಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಇಶಾನ್‌ ಕಿಶನ್‌ ಕೇವಲ 1 ರನ್‌ ಗಳಿಸಿ ಔಟಾದರು. ಆದರೆ, ಬಳಿಕ ಬಂದ ರಾಹುಲ್‌ ತ್ರಿಪಾಠಿ (35) ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 49 ರನ್ ಕಲೆಹಾಕಿದರು.

ತ್ರಿಪಾಠಿ ಔಟಾದ ನಂತರ ಜೊತೆಯಾದ ಗಿಲ್‌ ಮತ್ತು ಸೂರ್ಯ ಮೂರನೇ ವಿಕೆಟ್‌ಗೆ ಶತಕದ (111 ರನ್‌) ಜೊತೆಯಾಟವಾಡಿದರು. ಗಿಲ್‌ 46 ರನ್‌ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್‌ ಕೈ ಚೆಲ್ಲಿದರೆ, ಬಳಿಕ ಬಂದ ನಾಯಕ ಪಾಂಡ್ಯ ಮತ್ತು ದೀಪಕ್ ಹೂಡ ಆಟ ತಲಾ ನಾಲ್ಕು ರನ್‌ಗಳಿಗೆ ಕೊನೆಯಾಯಿತು.

ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದ ಸೂರ್ಯ ಕೇವಲ 45 ಎಸೆತಗಳಲ್ಲೇ ಮೂರಂಕಿ ರನ್ ಸಿಡಿಸಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಅವರ ಬ್ಯಾಟ್‌ನಿಂದ ಬಂದ ಮೂರನೇ ಶತಕ. ಉಳಿದೆರಡು ಶತಕಗಳನ್ನು ಕಳೆದ ವರ್ಷ ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಗಳಿಸಿಕೊಂಡಿದ್ದರು.

ಈ ಪಂದ್ಯದಲ್ಲಿ ಒಟ್ಟಾರೆ 51 ಎಸೆತಗಳನ್ನು ಎದುರಿಸಿದ ಸೂರ್ಯ 7 ಬೌಂಡರಿ ಮತ್ತು 9 ಸಿಕ್ಸರ್ ಸಹಿತ 112 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ಕೊನೆಯಲ್ಲಿ ಗುಡುಗಿದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್ ಕೇವಲ 9 ಎಸೆತಗಳಲ್ಲಿ 21 ರನ್ ಚಚ್ಚಿದರು. ಹೀಗಾಗಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್ ಕಲೆಹಾಕಿದೆ.

ಗುರಿ ಬೆನ್ನತ್ತಿರುವ ಲಂಕಾ ತಂಡ 6 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 51 ರನ್ ಕಲೆಹಾಕಿದೆ. ಆರಂಭಿಕರಾದ ಪಾಥುಮ್‌ ನಿಸಾಂಕ (15) ಮತ್ತು ಕುಶಾಲ್ ಮೆಂಡಿಸ್‌ (23) ಔಟಾಗಿದ್ದು, ಅವಿಷ್ಕ ಫೆರ್ನಾಂಡೊ (1) ಮತ್ತು ಧನಂಜಯ ಡಿ ಸಿಲ್ವ (5) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT