ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India A vs New Zealand A| ಜಯದ ಕಾಣಿಕೆ ನೀಡಿದ ಸೌರಭ್ ಕುಮಾರ್‌

ನ್ಯೂಜಿಲೆಂಡ್ ಎ ವಿರುದ್ಧ ಭಾರತ ಎ ತಂಡಕ್ಕೆ ಸರಣಿ ಜಯ; ಜೋ ಕಾರ್ಟರ್ ಶತಕ
Last Updated 18 ಸೆಪ್ಟೆಂಬರ್ 2022, 14:20 IST
ಅಕ್ಷರ ಗಾತ್ರ

ಬೆಂಗಳೂರು: ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮೋಡಿಯ ಮುಂದೆ ನ್ಯೂಜಿಲೆಂಡ್ ಎ ತಂಡದ ಬ್ಯಾಟರ್‌ಗಳ ಆಟ ನಡೆಯಲಿಲ್ಲ. ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ‘ಟೆಸ್ಟ್‌’ನಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ ಸೌರಭ್‌ ಆತಿಥೇಯ ಬಳಗಕ್ಕೆ 113 ರನ್‌ಗಳ ಜಯದ ಕಾಣಿಕೆ ನೀಡಿದರು. ಜೊತೆಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಗೆಲುವೂ ಒಲಿಯಿತು.

ಗೆಲುವಿಗಾಗಿ 416 ರನ್‌ಗಳ ಗುರಿ ಬೆನ್ನಟ್ಟಿದ್ದ ಪ್ರವಾಸಿ ಬಳಗದ ಜೋ ಕಾರ್ಟರ್ (111; 230ಎ, 4X12, 6X1) ಜಿಗುಟುತನದ ಹೋರಾಟ ತೋರಿದರು. ಶನಿವಾರ ದಿನದಾಟದ ಅಂತ್ಯಕ್ಕೆ14 ಓವರ್‌ಗಳಲ್ಲಿ 1 ವಿಕೆಟ್‌ಗೆ 20 ರನ್ ಗಳಿಸಿತ್ತು. ಕೊನೆಯ ದಿನ ಬೆಳಿಗ್ಗೆ ಜೋ ವಾಕರ್ ಅವರನ್ನು ಬೌಲ್ಡ್‌ ಮಾಡುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದರು. ಈ ಹಂತದಲ್ಲಿ ಕಾರ್ಟರ್ ಜೊತೆಗೂಡಿ ಡೇನ್ ಲ್ಕೀವರ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು. ಡೇನ್ ವಿಕೆಟ್ ಗಳಿಸಿದ ಸೌರಭ್ ಜೊತೆಯಾಟ ಮುರಿದರು.

ಆದರೂ ಛಲ ಬಿಡದ ಕಾರ್ಟರ್ ಮಾರ್ಕ್ ಚಾಪಮನ್ (45 ರನ್) ಜೊತೆಗೂಡಿ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 82 ರನ್‌ ಸೇರಿಸಿದರು. ತಂಡವನ್ನು ಸೋಲಿನಿಂದ ಪಾರು ಮಾಡಲು ಪ್ರಯತ್ನಿಸಿದರು. ಮಾರ್ಕ್ ವಿಕೆಟ್ ಗಳಿಸಿದ ಸರ್ಫರಾಜ್ ಖಾನ್ ಜೊತೆಯಾಟ ಮುರಿದರು. ಆದರೂ ಚಹಾ ವಿರಾಮಕ್ಕೆ 4 ವಿಕೆಟ್‌ಗಳಿಗೆ 221 ರನ್‌ ಗಳಿಸಿದ್ದ ತಂಡವು ಇನ್ನೊಂದು ಅವಧಿಯಲ್ಲಿ ಕನಿಷ್ಟ ಡ್ರಾ ಮಾಡಿಕೊಳ್ಳುವ ಭರವಸೆಯಲ್ಲಿತ್ತು.

ಮುಂದಿನ 81 ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳು ಪತನವಾದವು. ಅದರಲ್ಲಿ ಮೂರು ಸೌರಭ್ ಖಾನ್ ಖಾತೆ ಸೇರಿದವು. ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದ ಕಾರ್ಟರ್ ವಿಕೆಟ್‌ ಮುಖೇಶ್ ಕುಮಾರ್ ಪಾಲಾಯಿತು.

ವೇಗಿ ಉಮ್ರಾನ್ ಮಲಿಕ್ ಕೂಡ ಒಂದು ವಿಕೆಟ್ ಗಳಿಸಿದರು. ಸರ್ಫರಾಜ್ ಮತ್ತೊಂದು ವಿಕೆಟ್ ಕಬಳಿಸಿದರು. ಸರಣಿಯ ಮೊದಲ ಎರಡೂ ಪಂದ್ಯಗಳು ಡ್ರಾ ಆಗಿದ್ದವು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 86.4 ಓವರ್‌ಗಳಲ್ಲಿ 293, ನ್ಯೂಜಿಲೆಂಡ್ ಎ: 71.2 ಓವರ್‌ಗಳಲ್ಲಿ 237. ಎರಡನೇ ಇನಿಂಗ್ಸ್: ಭಾರತ ಎ: 85 ಓವರ್‌ಗಳಲ್ಲಿ 7ಕ್ಕೆ359 ಡಿಕ್ಲೆರ್ಡ್. ನ್ಯೂಜಿಲೆಂಡ್ ಎ: 85.2 ಓವರ್‌ಗಳಲ್ಲಿ 302 (ಜೋ ಕಾರ್ಟರ್ 111, ಡೇನ್ ಕ್ಲೀವರ್ 44, ಮಾರ್ಕ್ ಚಾಪಮನ್ 45, ಸೌರಭ್ ಕುಮಾರ್ 103ಕ್ಕೆ5, ಸರ್ಫರಾಜ್ ಖಾನ್ 48ಕ್ಕೆ2) ಫಲಿತಾಂಶ: ಭಾರತ ಎ ತಂಡಕ್ಕೆ 113 ರನ್‌ಗಳ ಜಯ. ಸರಣಿಯಲ್ಲಿ 1–0 ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT