ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ – ಆಸ್ಟ್ರೇಲಿಯಾ ಹಣಾಹಣಿ; ಹರ್ಮನ್‌, ಮಿಥಾಲಿ ಮೇಲೆ ಕಣ್ಣು

ಸೆಮಿಫೈನಲ್‌ ಹಂತಕ್ಕೇರಿರುವ ತಂಡಗಳ ನಡುವೆ ಪಂದ್ಯ
Last Updated 16 ನವೆಂಬರ್ 2018, 18:14 IST
ಅಕ್ಷರ ಗಾತ್ರ

ಪ್ರಾವಿಡೆನ್ಸ್‌, ಗಯಾನ: ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಎರಡೂ ತಂಡಗಳು ನಾಲ್ಕರ ಘಟ್ಟ ಪ್ರವೇಶಿಸಿರುವುದರಿಂದ ಈ ಪಂದ್ಯದ ಫಲಿತಾಂಶಕ್ಕೆ ಮಹತ್ವವಿಲ್ಲ. ಆದರೆ ಬಲಿಷ್ಠ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಸಿದ್ಧವಾಗಲು ಭಾರತ ಪ್ರಯತ್ನಿಸಲಿದೆ.

ಮೊದಲ ಪಂದ್ಯದಲ್ಲೇ ಶತಕ ಗಳಿಸಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಭಾರತಕ್ಕೆ ಟೂರ್ನಿಯಲ್ಲಿ ಉತ್ತಮ ಆರಂಭ ಒದಗಿಸಿದ್ದರು. ನಂತರದ ಎರಡು ಪಂದ್ಯಗಳಲ್ಲಿ ಮಿಥಾಲಿ ರಾಜ್ ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದರು. ಹರ್ಮನ್‌ಪ್ರೀತ್ ಕೌರ್ ಸಿಕ್ಸರ್‌ಗಳ ಮೂಲಕ ತಮ್ಮ ಬ್ಯಾಟಿಂಗ್‌ಗೆ ಸೊಬಗು ತುಂಬಿದ್ದರೆ, ಮಿಥಾಲಿ ರಾಜ್‌ ತಾಳ್ಮೆಯಿಂದ ಆಡಿ ಎದುರಾಳಿ ಬೌಲರ್‌ಗಳನ್ನು ಕಾಡಿದ್ದರು.

ಐರ್ಲೆಂಡ್ ಎದುರಿನ ಪಂದ್ಯಕ್ಕೂ ಮೊದಲು ಮಳೆ ಸುರಿದಿತ್ತು. ಹೀಗಾಗಿ ಬ್ಯಾಟಿಂಗ್ ಮಾಡುವುದು ಕಷ್ಟವಾಗಿತ್ತು. ಇಂಥ ಸಂದರ್ಭದಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಸುಲಭವಾಗಿ ಬ್ಯಾಟ್‌ ಬೀಸಿದ್ದರು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್‌ ತಂಡದವರು ಭಾರತದ ಸ್ಪಿನ್ನರ್‌ಗಳಿಗೆ ಉತ್ತರಿಸಲಾಗದೆ ಸುಲಭವಾಗಿ ಸೋಲೊಪ್ಪಿಕೊಂಡಿದ್ದರು.

ಸುಲಭ ಜಯ ಸಾಧಿಸಿದ್ದ ಆಸ್ಟ್ರೇಲಿಯಾ: ಮೂರೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಕೂಡ ಉತ್ತಮ ಸಾಮರ್ಥ್ಯ ತೋರಿದೆ. ಪಾಕಿಸ್ತಾನವನ್ನು 52 ರನ್‌ಗಳಿಂದ ಮಣಿಸಿದ್ದ ತಂಡ ಐರ್ಲೆಂಡ್ ಮತ್ತು ನ್ಯೂಜಿಲೆಂಡ್‌ ವಿರುದ್ಧ ಕ್ರಮವಾಗಿ ಒಂಬತ್ತು ವಿಕೆಟ್‌ ಮತ್ತು 33 ರನ್‌ಗಳಿಂದ ಜಯಿಸಿತ್ತು.

ಪಂದ್ಯ ಆರಂಭ: ರಾತ್ರಿ 8.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT