ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ವೇಗಿಗಳಿಗೆ ಶಾರ್ದೂಲ್ ದಿಟ್ಟ ಉತ್ತರ, ಇಂಗ್ಲೆಂಡ್‌ಗೆ ಆರಂಭಿಕ ಆಘಾತ

ಭಾರತ–ಇಂಗ್ಲೆಂಡ್ ನಾಲ್ಕನೇ ಟೆಸ್ಟ್: ಕ್ರಿಸ್ ವೋಕ್ಸ್‌ಗೆ ನಾಲ್ಕು ವಿಕೆಟ್: ವಿರಾಟ್ ಕೊಹ್ಲಿ ಅರ್ಧಶತಕ
Last Updated 2 ಸೆಪ್ಟೆಂಬರ್ 2021, 22:15 IST
ಅಕ್ಷರ ಗಾತ್ರ

ಲಂಡನ್: ಕ್ರಿಸ್ ವೋಕ್ಸ್‌ ಮತ್ತು ಒಲಿ ರಾಬಿನ್ಸನ್ ಅವರ ಸ್ವಿಂಗ್ ದಾಳಿಗೆ ಭಾರತದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿದರು. ಆದರೆ ಅದೇ ಬಿರುಗಾಳಿಗೆ ಎದೆಯೊಡ್ಡಿ ನಿಂತ ಶಾರ್ದೂಲ್ ಠಾಕೂರ್ ಮಿಂಚಿನ ಬ್ಯಾಟಿಂಗ್ ಮಾಡಿದರು.

ದ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ನಾಲ್ಕನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ತಮ್ಮ ನಾಯಕ ಜೋ ರೂಟ್ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಪ್ರವಾಸಿ ಬಳಗವು ಮೊದಲ ದಿನವೇ ಆಲೌಟ್ ಆಯಿತು. ಆದರೆ ಕೊನೆಯ ಹಂತದಲ್ಲಿ ಅಬ್ಬರಿಸಿದ ಶಾರ್ದೂಲ್ ಠಾಕೂರ್‌ (57; 36ಎ, 7ಬೌಂ, 3ಸಿ) ಅವರಿಂದಾಗಿ ತಂಡಕ್ಕೆ 61.3 ಓವರ್‌ಗಳಲ್ಲಿ 191 ರನ್‌ಗಳಿಸಲು ಸಾಧ್ಯವಾಯಿತು.

ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ 53ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡಿತ್ತು. ಡೇವಿಡ್‌ ಮಲಾನ್ (ಬ್ಯಾಟಿಂಗ್ 26) ಮತ್ತು ಕ್ರೇಗ್ ಓವರ್ಟನ್ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದರು.

ಇಂಗ್ಲೆಂಡ್‌ ಬೌಲರ್‌ಗಳಾದ ಆ್ಯಂಡರ್ಸನ್, ರಾಬಿನ್ಸನ್ ಮತ್ತು ವೋಕ್ಸ್‌ ದಾಳಿಗೆ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ಚೇತೇಶ್ವರ್ ಪೂಜಾರ ಪೆವಿಲಿಯನ್‌ಗೆ ಮರಳಿದರು. ಆಗ ತಂಡದ ಮೊತ್ತ 39 ರನ್‌ಗಳಾಗಿದ್ದವು. ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ ಆಟ ಮತ್ತೆ ಮರುಕಳಿಸುವ ಭೀತಿ ಎದುರಾಗಿತ್ತು. ಈ ಹಂತದಲ್ಲಿ ವಿರಾಟ್ ಕೊಹ್ಲಿ (50; 96ಎಸೆತ) ವಿಕೆಟ್ ಪತನ ತಡೆಯಲು ಪ್ರಯತ್ನಿಸಿದರು. ಸರಣಿಯಲ್ಲಿ ಸತತ ಎರಡನೇ ಅರ್ಧಶತಕ ಬಾರಿಸಿದರು.

ಆದರೆ, ಕ್ರಮಾಂಕ ಬದಲಿಸಿ ಬಂದ ರವೀಂದ್ರ ಜಡೇಜ, ಮತ್ತೊಂದು ಅವಕಾಶ ಗಿಟ್ಟಿಸಿರುವ ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ಅವರು ಮತ್ತೆ ವಿಫಲರಾದರು. ತಂಡವು ಚಹಾ ವಿರಾಮಕ್ಕೆ 122 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು.

ನಂತರದ ಅವಧಿಯಲ್ಲಿ ಬೌಲರ್‌ಗಳ ಲೆಕ್ಕಾಚಾರವನ್ನು ಹುಸಿಗೊಳಿಸಿದ ‘ಮುಂಬೈಕರ್’ ಠಾಕೂರ್ ತಾವು ಆಲ್‌ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಅನುಭವಿ ವೇಗಿ ಇಶಾಂತ್ ಶರ್ಮಾ ಬದಲು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡರು. ಲಭಿಸಿದ ಒಂದು ಜೀವದಾನವನ್ನೂ ಉಪಯೋಗಿಸಿಕೊಂಡ ಅವರು ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಮೂರು ಸಿಕ್ಸರ್‌ ಬಾರಿಸಿ ಮಿಂಚಿದರು. ಟಿ20 ಮಾದರಿಯ ಬ್ಯಾಟಿಂಗ್ ಮಾಡಿದ ಶಾರ್ದೂಲ್ ತಂಡದಲ್ಲಿ ಭರವಸೆ ಮಿಂಚು ಹರಿಸಿದರು.

ಮೊಹಮ್ಮದ್ ಶಮಿ ಬದಲು ಸ್ಥಾನ ಪಡೆದಿರುವ ಉಮೇಶ್ ಯಾದವ್ ಅವರು ಠಾಕೂರ್‌ ಜೊತೆ ಇನಿಂಗ್ಸ್ ಕಟ್ಟಲು ನೆರವಾದರು. ಎಂಟನೇ ವಿಕೆಟ್‌ ಜೊತೆಯಾಟದಲ್ಲಿ 63 ರನ್‌ಗಳು ಸೇರಿದವು.ಆದರೆ 61ನೇ ಓವರ್‌ನಲ್ಲಿ ವೋಕ್ಸ್‌ ಬೀಸಿದ ಎಲ್‌ಬಿ ಬಲೆಗೆ ಶಾರ್ದೂಲ್ ಬಿದ್ದರು. ಅದರೊಂದಿಗೆ ತಂಡವು 200 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿಯೂ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಕಣಕ್ಕಿಳಿಯವ ಅವಕಾಶ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT