ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ | ಜೋ ರೂಟ್ ಶತಕದ ಸೊಬಗು: ಮೊಹಮ್ಮದ್ ಸಿರಾಜ್‌ಗೆ ನಾಲ್ಕು ವಿಕೆಟ್

Last Updated 14 ಆಗಸ್ಟ್ 2021, 20:31 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮಾ ಅವರ ಪರಿಣಾಮಕಾರಿ ದಾಳಿಯನ್ನು ಎದುರಿಸಿ ನಿಂತ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಸುಂದರ ಶತಕ ದಾಖಲಿಸಿದರು.

ಲಾರ್ಡ್ಸ್‌ ಅಂಗಳದಲ್ಲಿ ಶನಿವಾರ ರೂಟ್ (ಔಟಾಗದೆ 180; 321ಎ, 18 ಬೌಂ) ದಿಟ್ಟ ಹೋರಾಟದ ಫಲವಾಗಿ ಆತಿಥೇಯ ತಂಡವು 128 ಓವರ್‌ಗಳಲ್ಲಿ 391 ರನ್ ಗಳಿಸಿ 27 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು. ಕೆ.ಎಲ್. ರಾಹುಲ್ ಶತಕದ ಬಲದಿಂದ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 364 ರನ್‌ ಗಳಿಸಿತ್ತು.

ಶುಕ್ರವಾರ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಮೂರನೇ ದಿನದಾಟದ ಮೊದಲೆರಡು ಅವಧಿಗಳಲ್ಲಿ ರೂಟ್ ಮತ್ತು ಜಾನಿ ಬೆಸ್ಟೊ ಜೊತೆಯಾಟದಿಂದ ರನ್‌ಗಳು ಹರಿದುಬಂದವು.

ಬೌಲರ್‌ಗಳನ್ನು ಇಬ್ಬರೂ ಬ್ಯಾಟ್ಸ್‌ ಮನ್‌ಗಳು ಸರಾಗವಾಗಿ ಎದುರಿಸಿದರು. ಶಾರ್ಟ್‌ ಎಸೆತಗಳನ್ನು ಪ್ರಯೋಗಿಸಿದ ಸಿರಾಜ್ ಪಶ್ಚಾತ್ತಾಪ ಪಡಬೇಕಾಯಿತು.

ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 121 ರನ್‌ಗಳನ್ನು ಸೇರಿಸಿದರು. ಇವರಿಬ್ಬರ ಜೊತೆಯಾಟಕ್ಕೆ ಸಿರಾಜ್ ಅವರೇ ಕಡಿವಾಣ ಹಾಕಿದರು. 79ನೇ ಓವರ್‌ನಲ್ಲಿ ಜಾನಿ ಬೆಸ್ಟೊ (57; 107ಎ) ವಿಕೆಟ್ ಪಡೆದ ಸಿರಾಜ್ ಸಂಭ್ರಮಿಸಿದರು.

ಆದರೆ, ರೂಟ್ ಆಟಕ್ಕೆ ತಡೆ ಯೊಡ್ಡಲು ಸಾಧ್ಯವಾಗಲಿಲ್ಲ. ಅವರು 200 ಎಸೆತಗಳಲ್ಲಿ ಶತಕ ಪೂರೈಸಿದರು. ಅದರಲ್ಲಿ ಒಂಬತ್ತು ಬೌಂಡರಿಗಳು ಇದ್ದವು.

ಮೊದಲ ಪಂದ್ಯದಲ್ಲಿಯೂ ಅವರು ಶತಕ ಬಾರಿಸಿದ್ದರು. 30 ವರ್ಷದ ರೂಟ್‌ ಅವರಿಗೆ ಇದು 23ನೇ ಶತಕವಾಗಿದೆ. ಶನಿವಾರ ಅವರು ಒಂಬತ್ತು ಸಾವಿರ ರನ್ ಪೂರೈಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಅತಿ ಕಿರಿಯ ವಯಸ್ಸಿನ ಬ್ಯಾಟ್ಸ್‌ಮನ್ ಎನಿ ಸಿಕೊಂಡರು.

ಬೆಸ್ಟೊ ಔಟಾದ ನಂತರ ಕ್ರೀಸ್‌ಗೆ ಬಂದ ಜೊಸ್ ಬಟ್ಲರ್ (23 ರನ್) ಮತ್ತು ಮೋಯಿನ್ ಅಲಿ (27 ರನ್) ಅವರು ಹೆಚ್ಚು ಹೊತ್ತು ಆಡಲು ಇಶಾಂತ್ ಶರ್ಮಾ ಅವಕಾಶ ನೀಡಲಿಲ್ಲ. ಸ್ಯಾಮ್‌ ಕರನ್‌ಗೂ ಇಶಾಂತ್ ತಡೆಯೊಡ್ಡಿದರು.ಒಲಿ ರಾಬಿನ್ಸನ್ ವಿಕೆಟ್ ಗಳಿಸಿದ ಸಿರಾಜ್ ಸಂಭ್ರಮಿಸಿದರು. ಕೊನೆಯ ನಾಲ್ವರು ಎರಡಂಕಿ ಮೊತ್ತ ದಾಟಲಾಗದೆ ಔಟಾಗಿ ಮರಳಿದರು.

ಸ್ಕೋರ್ ಕಾರ್ಡ್‌

ಭಾರತ (ಮೊದಲ ಇನಿಂಗ್ಸ್‌) 364 ಇಂಗ್ಲೆಂಡ್‌ (ಮೊದಲ ಇನಿಂಗ್ಸ್‌) 128 ಓವರ್‌ಗಳಲ್ಲಿ 391
(ಶುಕ್ರವಾರ 3 ವಿಕೆಟ್‌ಗಳಿಗೆ 119)ರೂಟ್‌ ಔಟಾಗದೆ 180 (321ಎ, 4X18), ಬೇಸ್ಟೊ ಸಿ ಕೊಹ್ಲಿ ಸಿರಾಜ್‌ 57(107 ಎ, 4X7), ಬಟ್ಲರ್‌ ಬಿ ಇಶಾಂತ್‌ 23 (42ಎ, 4X4), ಮೊಯಿನ್ ಸಿ ಕೊಹ್ಲಿ ಬಿ ಇಶಾಂತ್‌ 27 (72ಎ, 4X4), ಸ್ಯಾಮ್‌ ಸಿ ರೋಹಿತ್ ಬಿ ಇಶಾಂತ್‌ 0 (1ಎ), ರಾಬಿನ್ಸನ್‌ ಎಲ್‌ಬಿಡಬ್ಲ್ಯು ಸಿರಾಜ್‌ 6 (22ಎ), ವುಡ್‌ ರನೌಟ್ (ಜಡೇಜ/ಪಂತ್) 5 (23ಎ), ಆ್ಯಂಡರ್ಸನ್ ಬಿ ಶಮಿ 0 (16 ಎ)

ಇತರೆ (ಬೈ 5, ಲೆಗ್‌ಬೈ 6, ನೋಬಾಲ್ 17, ವೈಡ್ 5) 33

ವಿಕೆಟ್ ಪತನ: 4–229 (ಜಾನಿ ಬೆಸ್ಟೊ, 78.4), 5–283, ಜೋಸ್ ಬಟ್ಲರ್‌, 90.6), 6–341 (ಮೊಯಿನ್ ಅಲಿ, 110.5), 7–341 (ಸ್ಯಾಮ್ ಕರನ್‌, 110.6), 8–357 (ಒಲಿ ರಾಬಿನ್ಸನ್‌, 116.6), 9–371 (ಮಾರ್ಕ್ ವುಡ್‌, 124.3), 10–391 (ಜೇಮ್ಸ್ ಆ್ಯಂಡರ್ಸನ್, 127.6)

ಬೌಲಿಂಗ್‌: ಇಶಾಂತ್ ಶರ್ಮಾ 24–4–69–3, ಜಸ್‌ಪ್ರೀತ್ ಬೂಮ್ರಾ 26–6–79–0, ಮೊಹಮ್ಮದ್ ಶಮಿ 26–3–95–2, ಮೊಹಮ್ಮದ್ ಸಿರಾಜ್‌ 30–7–94–4, ರವೀಂದ್ರ ಜಡೇಜ 22–1–43–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT