ಏಕದಿನ ಕ್ರಿಕೆಟ್‌: ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ಭಾರತದ ಚಿತ್ತ

7
ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ರೋಚಕ ಹಣಾಹಣಿಯ ನಿರೀಕ್ಷೆ

ಏಕದಿನ ಕ್ರಿಕೆಟ್‌: ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ಭಾರತದ ಚಿತ್ತ

Published:
Updated:
Prajavani

ಮೆಲ್ಬರ್ನ್‌: ಏಳು ದಶಕಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದು ದಾಖಲೆ ಬರೆದಿರುವ ಭಾರತ ತಂಡ ಈಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ಚಿತ್ತ ನೆಟ್ಟಿದೆ.

ವಿರಾಟ್‌ ಕೊಹ್ಲಿ ಬಳಗ ಕಾಂಗರೂಗಳ ನಾಡಿನಲ್ಲಿ ಚೊಚ್ಚಲ ಏಕದಿನ ಸರಣಿ ಗೆಲ್ಲುವ ಛಲದಲ್ಲಿದೆ. ಈ ಕನಸು ಸಾಕಾರಗೊಳ್ಳಬೇಕಾದರೆ ಶುಕ್ರವಾರ ನಡೆಯುವ ಮೂರನೇ ಹಣಾಹಣಿಯಲ್ಲಿ ಆತಿಥೇಯರನ್ನು ಮಣಿಸುವುದು ಅಗತ್ಯ. ‌ಹೀಗಾಗಿ ಮೆಲ್ಬರ್ನ್‌ ಮೈದಾನದಲ್ಲಿ ನಡೆಯುವ ಅಂತಿಮ ಹೋರಾಟ ಕೊಹ್ಲಿ ಬಳಗಕ್ಕೆ ಮಹತ್ವದ್ದೆನಿಸಿದೆ.

ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ ಆಫ್‌ ಕ್ರಿಕೆಟ್‌ (1985) ಮತ್ತು ಸಿ.ಬಿ.ಸರಣಿ (2008) ಗಳಲ್ಲಿ ಟ್ರೋಫಿ ಜಯಿಸಿತ್ತು. ಆದರೆ ಆತಿಥೇಯರ ವಿರುದ್ಧದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿಲ್ಲ. 2016ರಲ್ಲಿ ನಡೆದಿದ್ದ ಮೊದಲ ದ್ವಿಪಕ್ಷೀಯ ಸರಣಿಯನ್ನು ಆಸ್ಟ್ರೇಲಿಯಾ 4–1ರಿಂದ ಕೈವಶ ಮಾಡಿಕೊಂಡಿತ್ತು.

ಪ್ರಸ್ತುತ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆದ್ದಿವೆ. ಮೊದಲ ಹೋರಾಟದಲ್ಲಿ ಸೋತಿದ್ದ ಕೊಹ್ಲಿ ಪಡೆ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದೆ.

ಅಡಿಲೇಡ್‌ ಓವಲ್‌ ಅಂಗಳದಲ್ಲಿ ಮೋಡಿ ಮಾಡಿದ್ದ ಕೊಹ್ಲಿ ಮತ್ತು ಮಹೇಂದ್ರ ಸಿಂಗ್‌ ಧೋನಿ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್‌, ತಾವು ವಿಶ್ವದ ಅತ್ಯುತ್ತಮ ರನ್‌ ‘ಚೇಸರ್‌’ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದರು. ಅರ್ಧಶತಕ ಗಳಿಸಿದ್ದ ಧೋನಿ ‘ಬೆಸ್ಟ್‌ ಫಿನಿಷರ್‌’ ಎಂಬುದನ್ನು ಸಾಬೀತುಮಾಡಿದ್ದರು. ಇವರ ‘ಜುಗಲ್‌ಬಂದಿ’ ಮೆಲ್ಬರ್ನ್‌ ಮೈದಾನದಲ್ಲೂ ನಡೆಯುವ ನಿರೀಕ್ಷೆ ಇದೆ.

ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮಾ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿನ ಪಂದ್ಯದಲ್ಲಿ ಇವರು ಕ್ರಮವಾಗಿ 32 ಮತ್ತು 43ರನ್‌ ಗಳಿಸಿದ್ದರು.

ಮಧ್ಯಮಕ್ರಮಾಂಕದ ಆಟಗಾರರಾದ ಅಂಬಟಿ ರಾಯುಡು ಮತ್ತು ದಿನೇಶ್‌ ಕಾರ್ತಿಕ್‌ ಕೂಡಾ ರನ್ ಕಾಣಿಕೆ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ಅಂತಿಮ ಪಂದ್ಯದಲ್ಲೂ ಅಬ್ಬರಿಸಬೇಕಿದೆ.

ಬೌಲಿಂಗ್‌ ವಿಭಾಗದಲ್ಲಿ ಭಾರತ ಅಲ್ಪ ಸೊರಗಿದಂತಿದೆ. ಅನುಭವಿಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಮೊಹಮ್ಮದ್‌ ಶಮಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಆದರೆ ಖಲೀಲ್‌ ಅಹ್ಮದ್‌ ಮತ್ತು ಮೊಹಮ್ಮದ್‌ ಸಿರಾಜ್‌ ದುಬಾರಿಯಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಇವರು ಹಿಂದಿನ ಪಂದ್ಯದಲ್ಲಿ ಕ್ರಮವಾಗಿ 55 ಮತ್ತು 76ರನ್‌ ಬಿಟ್ಟುಕೊಟ್ಟಿದ್ದರು. ಹೀಗಾಗಿ ಇವರ ಪೈಕಿ ಒಬ್ಬರನ್ನು ಕೈಬಿಟ್ಟು ಆಲ್‌ರೌಂಡರ್‌ ವಿಜಯ್‌ ಶಂಕರ್‌ಗೆ ಸ್ಥಾನ ನೀಡುವ ಸಾಧ್ಯತೆ ಇದೆ.

ರವೀಂದ್ರ ಜಡೇಜ ಮತ್ತು ಕುಲದೀಪ್‌ ಯಾದವ್‌ ತಂಡದ ಸ್ಪಿನ್‌ ಶಕ್ತಿಯಾಗಿದ್ದು, ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಪ್ರಯೋಗಿಸಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಸಜ್ಜಾಗಿದ್ದಾರೆ.

ವಿಶ್ವಾಸದಲ್ಲಿ ಆತಿಥೇಯರು: ಆಸ್ಟ್ರೇಲಿಯಾ ಕೂಡಾ ಸರಣಿ ಜಯದ ಮೇಲೆ ಕಣ್ಣಿಟ್ಟಿದೆ. ಆರಂಭಿಕರಾದ ಅಲೆಕ್ಸ್‌ ಕೇರಿ ಮತ್ತು ನಾಯಕ ಆ್ಯರನ್‌ ಫಿಂಚ್‌ ಅವರ ವೈಫಲ್ಯ ತಂಡಕ್ಕೆ ಮುಳುವಾಗಿದೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶಾನ್‌ ಮಾರ್ಷ್‌, ಉಸ್ಮಾನ್‌ ಖ್ವಾಜಾ, ಪೀಟರ್‌ ಹ್ಯಾಂಡ್ಸ್‌ಕಂಬ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಉತ್ತಮ ಲಯದಲ್ಲಿರುವುದು ತಂಡಕ್ಕೆ ವರವಾಗಿ ಪರಿಣಮಿಸಿದೆ.

ಈ ತಂಡದ ಬೌಲಿಂಗ್‌ ವಿಭಾಗ ಶಕ್ತಿಯುತವಾಗಿದೆ.ಜೈ ರಿಚರ್ಡ್ಸನ್‌ ಮತ್ತು ಪೀಟರ್‌ ಸಿಡ್ಲ್‌ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು. ಹಿಂದಿನ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಜೇಸನ್‌ ಬೆಹ್ರನ್‌ಡ್ರಾಫ್‌ ಮತ್ತು ನೇಥನ್‌ ಲಯನ್‌ ಅವರನ್ನು ಕೈಬಿಡಲಾಗಿದೆ. ಇವರ ಬದಲು ಬಿಲ್ಲಿ ಸ್ಟಾನ್‌ಲೇಕ್‌ ಮತ್ತು ಲೆಗ್‌ ಸ್ಪಿನ್ನರ್‌ ಆ್ಯಡಮ್‌ ಜಂಪಾಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಗಿದೆ. ಇವರ ಸೇರ್ಪಡೆಯಿಂದ ತಂಡದ ಶಕ್ತಿ ಇನ್ನಷ್ಟು ಹೆಚ್ಚಿದಂತಾಗಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !