ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ ಸಮಬಲದ ಕಾದಾಟ

ಪರ್ತ್‌ನ ಹೊಸ ಅಂಗಣ ಆಪ್ಟಸ್‌ನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯ
Last Updated 14 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಪರ್ತ್‌: ಆರಂಭಿಕ ಜೋಡಿಯ ಶತಕದ ಜೊತೆಯಾಟದಿಂದ ಆತಂಕಗೊಂಡರೂ ತಿರುಗೇಟು ನೀಡಿದ ಭಾರತ ತಂಡ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನ ಸಮಬಲದ ಹೋರಾಟದ ಮೂಲಕ ನಿಟ್ಟುಸಿರು ಬಿಟ್ಟಿತು.

ಇಲ್ಲಿನ ಹೊಸ ಕ್ರೀಡಾಂಗಣ, ಆಪ್ಟಸ್‌ನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯರು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಸೋತ ತಂಡಕ್ಕೆ ಆರಂಭಿಕ ಜೋಡಿ ಮಾರ್ಕಸ್ ಹ್ಯಾರಿಸ್ (70; 141 ಎಸೆತ, 10 ಬೌಂಡರಿ) ಮತ್ತು ಆ್ಯರನ್ ಫಿಂಚ್‌ (50; 105 ಎ, 6 ಬೌಂ) ಶತಕದ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು.

36ನೇ ಓವರ್‌ ವರೆಗೆ ಬ್ಯಾಟಿಂಗ್ ಮಾಡಿದ ಈ ಜೋಡಿಯನ್ನು ಮುರಿಯಲು ಭಾರತದ ವೇಗಿಗಳು ಮತ್ತು ಸ್ಪಿನ್ನರ್‌ಗಳು ಭಾರಿ ಬೆವರು ಸುರಿಸಿದರು. ಜಸ್‌ಪ್ರೀತ್ ಬೂಮ್ರಾ ಎಸೆತದಲ್ಲಿ ಫಿಂಚ್ ಎಲ್‌ಬಿಡಬ್ಲ್ಯು ಆಗುವುದರೊಂದಿಗೆ 112 ರನ್‌ಗಳ ಜೊತೆಯಾಟ ಮುಕ್ತಾಯಗೊಂಡಿತು.

ಈ ಅವಕಾಶಕ್ಕಾಗಿ ಕಾಯುತ್ತಿದ್ದ ಭಾರತದ ಬೌಲರ್‌ಗಳು ನಂತರ ಆಧಿಪತ್ಯ ಸ್ಥಾಪಿಸಿದರು. 36 ರನ್ ಸೇರಿಸುವಷ್ಟರಲ್ಲಿ ಉಸ್ಮಾನ್ ಖ್ವಾಜಾ, ಮಾರ್ಕಸ್ ಹ್ಯಾರಿಸ್ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್‌ ವಾಪಸಾದರು.

ಆದರೆ ಬೌಲರ್‌ಗಳು ಮತ್ತೊಮ್ಮೆ ನಿರಾಸೆಗೆ ಒಳಗಾದರು. ಶಾನ್ ಮಾರ್ಷ್‌ ಮತ್ತು ಟ್ರಾವಿಸ್‌ ಹೆಡ್‌ ಐದನೇ ವಿಕೆಟ್‌ಗೆ 84 ರನ್‌ ಸೇರಿಸಿ ಭಾರಿ ಮೊತ್ತ ಪೇರಿಸುವತ್ತ ಹೆಜ್ಜೆ ಹಾಕಿದರು. ಅಪಾಯಕಾರಿ ಹ್ಯಾರಿಸ್ ಅವರನ್ನು ಔಟ್‌ ಮಾಡಿದ್ದ ಹನುಮ ವಿಹಾರಿ ಮತ್ತೊಮ್ಮೆ ಆಫ್‌ಬ್ರೇಕ್ ಜಾದೂ ಮೂಲಕ ಭಾರತ ಪಾಳಯದಲ್ಲಿ ಸಂತಸ ಮೂಡಿಸಿದರು. ಅರ್ಧಶತಕ ಗಳಿಸಿದ ಹೆಡ್‌ (58;80 ಎ, 6 ಬೌಂ) ಕೂಡ ಸ್ವಲ್ಪ ಹೊತ್ತಿನಲ್ಲಿ ಮರಳಿದರು.

16 ರನ್‌ ಗಳಿಸಿದ ನಾಯಕ ಟಿಮ್ ಪೇನ್‌ ಮತ್ತು 11 ರನ್‌ಗಳೊಂದಿಗೆ ಪ್ಯಾಟ್ ಕುಮಿನ್ಸ್‌ ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT