ಭಾರತಕ್ಕೆ ‘ಬಾಂಗ್ಲಾ ಹುಲಿ’ಗಳ ಸವಾಲು

ಗುರುವಾರ , ಜೂಲೈ 18, 2019
22 °C
ಸೋತ ಅಂಗಳದಲ್ಲಿ ಗೆಲುವಿನ ಮಹಲು ಕಟ್ಟಲು ತಯಾರಾಗಿರುವ ಭಾರತ: ಮಷ್ರಫೆ ಬಳಗಕ್ಕೆ ‘ಮಾಡು ಇಲ್ಲವೇ ಮಡಿ’ ಹೋರಾಟ: ಏಷ್ಯಾ ರಾಷ್ಟ್ರಗಳ ಪೈಪೋಟಿ

ಭಾರತಕ್ಕೆ ‘ಬಾಂಗ್ಲಾ ಹುಲಿ’ಗಳ ಸವಾಲು

Published:
Updated:
Prajavani

ಬರ್ಮಿಂಗಂ: ಈ ಸಲದ ವಿಶ್ವಕಪ್‌ನಲ್ಲಿ ಅಜೇಯವಾಗಿ ನಾಲ್ಕರ ಘಟ್ಟ ‍ಪ್ರವೇಶಿಸುವ ಕನಸು ಕೈಚೆಲ್ಲಿರುವ ಭಾರತ ತಂಡ, ಈಗ ಸೋತ ಅಂಗಳದಲ್ಲಿ ಗೆಲುವಿನ ಮಹಲು ಕಟ್ಟಲು ಸನ್ನದ್ಧವಾಗಿದೆ.

ಎಜ್‌ಬಾಸ್ಟನ್‌ ಮೈದಾನದಲ್ಲಿ ಮಂಗಳವಾರ ನಡೆಯುವ ಹಣಾಹಣಿಯಲ್ಲಿ ವಿರಾಟ್‌ ಕೊಹ್ಲಿ ಬಳಗವು ಬಾಂಗ್ಲಾದೇಶದ ಸವಾಲು ಎದುರಿಸಲಿದ್ದು, ‘ಬಾಂಗ್ಲಾ ಹುಲಿಗಳ’ ಬೇಟೆಯಾಡಿ ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಳ್ಳಲು ಕಾತರವಾಗಿದೆ.

ಭಾನುವಾರ ಇದೇ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ತಂಡವು ಆತಿಥೇಯ ಇಂಗ್ಲೆಂಡ್‌ಗೆ ಶರಣಾಗಿತ್ತು. 

ಬಾಂಗ್ಲಾ ತಂಡವು ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿ ಹೊಸ ಮೈಲುಗಲ್ಲು ಸ್ಥಾಪಿಸುವತ್ತ ಚಿತ್ತ ನೆಟ್ಟಿದೆ. ಭಾರತದ ಎದುರಿನ ಪಂದ್ಯದಲ್ಲಿ ಗೆದ್ದರಷ್ಟೇ ತಂಡದ ಈ ಕನಸಿಗೆ ಬಲ ಸಿಗಲಿದೆ. ಒಂದೊಮ್ಮೆ ಸೋತರೆ ಮೊರ್ತಜಾ ಬಳಗವು ಟೂರ್ನಿಯಿಂದಲೇ ಹೊರ ಬೀಳಲಿದೆ. ಈ ದೃಷ್ಟಿಯಿಂದ ಬಾಂಗ್ಲಾಕ್ಕೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟ.

ಇಂಗ್ಲೆಂಡ್‌ ಎದುರಿನ ಪಂದ್ಯದ ನಂತರ ಕ್ರಿಕೆಟ್‌ ಪಂಡಿತರು ಕೊಹ್ಲಿ ಪಡೆಯ ಮೇಲೆ ವಾಗ್ಬಾಣ ಬಿಟ್ಟಿದ್ದರು. ಗೆಲ್ಲುವ ಅವಕಾಶ ಇದ್ದರೂ ತಂಡ ಹೋರಾಟ ಮನೋಭಾವ ಪ್ರದರ್ಶಿಸಲಿಲ್ಲ ಎಂದು ಕುಟುಕಿದ್ದರು.

ವಿಶ್ವದ ಅತ್ಯುತ್ತಮ ‘ಫಿನಿಷರ್‌’ ಎಂದೇ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್‌ ಧೋನಿ, ನಿರ್ಣಾಯಕ ಘಟ್ಟದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದರು. ಕೇದಾರ್‌ ಜಾಧವ್‌ ಕೂಡಾ ರಟ್ಟೆ ಅರಳಿಸಿ ಆಡಿರಲಿಲ್ಲ. ಇದರಿಂದಾಗಿಯೇ ತಂಡ ಸೋಲುವಂತಾಯಿತು ಎಂದು ಅಭಿಮಾನಿಗಳೂ ಆಕ್ರೋಶ ವ್ಯಕ್ತಪಡಿಸಿದ್ದರು. ಧೋನಿ ಮತ್ತು ಕೇದಾರ್‌, ಅಂತಿಮ ಐದು ಓವರ್‌ಗಳಲ್ಲಿ ಕೇವಲ 39ರನ್‌ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಂಡ ಸತತವಾಗಿ ವೈಫಲ್ಯ ಕಾಣುತ್ತಿರುವುದಕ್ಕೆ ಇದು ಸಾಕ್ಷಿಯಂತಿತ್ತು.

ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಅವರು ದುಬಾರಿಯಾಗಿದ್ದೂ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ನಾಯಕ ಕೊಹ್ಲಿ, ಆಡುವ ಬಳಗದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ಜಾಧವ್‌ ಮತ್ತು ಚಾಹಲ್‌ ಅವರನ್ನು ಕೈಬಿಟ್ಟು ಗಾಯದಿಂದ ಗುಣಮುಖರಾಗಿರುವ ಭುವನೇಶ್ವರ್‌ ಕುಮಾರ್‌ ಮತ್ತು ರವೀಂದ್ರ ಜಡೇಜಗೆ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.

ಚುರುಕಿನ ಫೀಲ್ಡಿಂಗ್‌ ಮಾಡುವ ಜಡೇಜ, ಸ್ಪಿನ್‌ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲರು. ಆರನೇ ಕ್ರಮಾಂಕದಲ್ಲಿ ಜಾಧವ್‌ಗಿಂತಲೂ ಪರಿಣಾಮಕಾರಿಯಾಗಿ ಬ್ಯಾಟಿಂಗ್‌ ಕೂಡಾ ಮಾಡಬಲ್ಲರು.

ಭುವನೇಶ್ವರ್‌ ಸೇರ್ಪಡೆಯಿಂದ ತಂಡದ ವೇಗದ ವಿಭಾಗದ ಶಕ್ತಿ ಇನ್ನಷ್ಟು ಹೆಚ್ಚಲಿದೆ. ಅವರು, ತಮೀಮ್‌ ಇಕ್ಬಾಲ್‌, ಶಕೀಬ್‌ ಅಲ್‌ ಹಸನ್‌, ಮುಷ್ಫಿಕರ್‌ ರಹೀಮ್‌, ಮಹಮದುಲ್ಲಾ ಮತ್ತು ಲಿಟನ್‌ ದಾಸ್‌ ಅವರಂತಹ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳ ರನ್‌ ಗಳಿಕೆಗೆ ಕಡಿವಾಣ ಹಾಕಬಲ್ಲರು.

ರೋಹಿತ್‌ ಶರ್ಮಾ ಮತ್ತು ಕೊಹ್ಲಿ, ತಂಡದ ‘ಟ್ರಂಪ್‌ ಕಾರ್ಡ್‌’ಗಳಾಗಿದ್ದಾರೆ. ರೋಹಿತ್‌ ಅವರು ಟೂರ್ನಿಯಲ್ಲಿ ಮೂರು ಶತಕ ಸಿಡಿಸಿದ್ದಾರೆ. ಕೊಹ್ಲಿ, ಸತತ ಐದು ಅರ್ಧಶತಕಗಳನ್ನು ದಾಖಲಿಸಿ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ನಾಯಕ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಬಾಂಗ್ಲಾದ ಬೌಲಿಂಗ್‌ ದಾಳಿ ಇಂಗ್ಲೆಂಡ್‌ನಷ್ಟು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಎಜ್‌ಬಾಸ್ಟನ್‌ನಲ್ಲಿ ಕೊಹ್ಲಿ ಮತ್ತು ರೋಹಿತ್‌ ಮತ್ತೊಮ್ಮೆ ರನ್‌ ಮಳೆ ಸುರಿಸುವ ನಿರೀಕ್ಷೆ ಇದೆ.

ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್‌ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದಿರುವ ರಿಷಭ್‌ ಪಂತ್‌ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ.

ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್‌, ಬಾಂಗ್ಲಾ ಎದುರು ಘರ್ಜಿಸಬೇಕಿದೆ. ರಿಷಭ್‌ ಕೂಡಾ ಗುಡುಗಬೇಕಿದೆ. ಹಾರ್ದಿಕ್‌ ಪಾಂಡ್ಯ ಕೂಡಾ ರನ್‌ ಬೇಟೆ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಮೊಹಮ್ಮದ್‌ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ ವೇಗದ ವಿಭಾಗದ ಬೆನ್ನೆಲುಬಾಗಿದ್ದಾರೆ. ಮೂರು ಪಂದ್ಯಗಳಿಂದ 13 ವಿಕೆಟ್‌ ಉರುಳಿಸಿರುವ ಶಮಿ, ಮತ್ತಷ್ಟು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ತಯಾರಾಗಿದ್ದಾರೆ. ಬೂಮ್ರಾ ಕೂಡಾ ಶರವೇಗದ ಎಸೆತಗಳ ಮೂಲಕ ಬಾಂಗ್ಲಾ ಬ್ಯಾಟಿಂಗ್‌ ಪಡೆಯ ಬೆನ್ನೆಲೆಬು ಮುರಿಯುವ ಉತ್ಸಾಹದಲ್ಲಿದ್ದಾರೆ.

ಬಾಂಗ್ಲಾ ತಂಡವು ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ತನ್ನ ಅಂತಿಮ ಹೋರಾಟದಲ್ಲಿ ಈ ತಂಡವು ಪಾಕಿಸ್ತಾನದ ಎದುರು ಆಡಲಿದೆ.

ಮಷ್ರಫೆ ಪಡೆಯಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೀಗಾಗಿ ಕೊಹ್ಲಿ ಬಳಗ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. 2007ರ ಟೂರ್ನಿಯಲ್ಲಿ ಬಾಂಗ್ಲಾ ಎದುರು ಆಘಾತ ಕಂಡಿದ್ದನ್ನೂ ಮರೆಯುವಂತಿಲ್ಲ.

ಶಕೀಬ್‌ ಅಲ್‌ ಹಸನ್‌, ಈ ಬಾರಿಯ ಟೂರ್ನಿಯಲ್ಲಿ ಆಲ್‌ರೌಂಡ್‌ ಸಾಮರ್ಥ್ಯದ ಮೂಲಕ ಗಮನ ಸೆಳೆದಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 10 ವಿಕೆಟ್‌ಗಳು ಅವರ ಖಾತೆಯಲ್ಲಿವೆ.

ಅನುಭವಿ ಮುಷ್ಫಿಕರ್‌, ತಮೀಮ್‌ ಅವರ ಮೇಲೂ ವಿಶ್ವಾಸ ಇಡಬಹುದಾಗಿದೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮೂರು ಸಲ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಎರಡರಲ್ಲಿ ಗೆದ್ದಿದೆ. ಈ ಅಂಕಿ ಅಂಶದ ಆಧಾರದಲ್ಲಿ ಹೇಳುವುದಾದರೆ ಕೊಹ್ಲಿ ಪಡೆಯೇ ಪಂದ್ಯ ಗೆಲ್ಲುವ ಫೇವರಿಟ್‌.

ರನ್‌ ಹೊಳೆ ಹರಿಯುವ ನಿರೀಕ್ಷೆ
ಎಜ್‌ಬಾಸ್ಟನ್‌ ಅಂಗಳದಲ್ಲಿ ಭಾನುವಾರ ನಡೆದಿದ್ದ ಇಂಗ್ಲೆಂಡ್‌ ಮತ್ತು ಭಾರತ ನಡುವಣ ಪಂದ್ಯದಲ್ಲಿ ಒಟ್ಟು 643ರನ್‌ಗಳು ದಾಖಲಾಗಿದ್ದವು.

ಈ ಮೈದಾನ ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗವೆಂಬುದು ಇದರಿಂದ ಸಾಬೀತಾಗಿದ್ದು, ಭಾರತ ಹಾಗೂ ಬಾಂಗ್ಲಾ ನಡುವಣ ಹಣಾಹಣಿಯಲ್ಲೂ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ. ಹೀಗಾಗಿ ಟಾಸ್‌ ಗೆದ್ದವರು ಮೊದಲು ಬ್ಯಾಟ್‌ ಮಾಡುವುದು ನಿಶ್ಚಿತ.


ಮುಷ್ಫಿಕರ್‌

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !