ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs BAN 3rd ODI | ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ

Last Updated 11 ಡಿಸೆಂಬರ್ 2022, 2:20 IST
ಅಕ್ಷರ ಗಾತ್ರ

ಚಿತ್ತಗಾಂಗ್: ಅಂತರರಾಷ್ಟ್ರೀಯಏಕದಿನ ಕ್ರಿಕೆಟ್‌ ಇತಿಹಾಸದಲ್ಲಿಯೇ ‘ಶರವೇಗದ ದ್ವಿಶತಕ’ ಬಾರಿಸಿದ ಇಶಾನ್ ಕಿಶನ್ ಅಬ್ಬರಕ್ಕೆ ಬಾಂಗ್ಲಾದೇಶ ತಂಡ ಬೆಚ್ಚಿಬಿದ್ದಿತು.

ಸರಣಿಯ ಮೊದಲೆರಡು ಪಂದ್ಯಗ ಳಲ್ಲಿ ಜಯಿಸಿ, ಮೂರನೇಯದ್ದರಲ್ಲಿ ಗೆದ್ದು ಕ್ಲೀನ್‌ಸ್ವೀಪ್ ಮಾಡುವ ಆತಿಥೇ ಯರ ಆಸೆಯು ರನ್‌ಗಳ ಹೊಳೆಯಲ್ಲಿ ಕೊಚ್ಚಿಹೋಯಿತು. ಭಾರತ 227 ರನ್‌ಗಳ ಅಂತರದಿಂದ ಗೆದ್ದಿತು.

ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಹೊಡೆದಿರುವ ಬ್ಯಾಟರ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದರಿಂದ ತವರಿಗೆ ಮರಳಿದ್ದಾರೆ. ಅದರಿಂದಾಗಿ ತೆರವಾದ ಸ್ಥಾನದಲ್ಲಿ ಆಡಲು ಅವಕಾಶ ಪಡೆದ 24 ವರ್ಷದ, ಎಡಗೈ ಬ್ಯಾಟರ್ ಇಶಾನ್ ‘ವಿಶ್ವದಾಖಲೆ’ ಬರೆದರು.

ಇಶಾನ್ (210; 131ಎಸೆತ) ಮತ್ತು ವಿರಾಟ್ ಕೊಹ್ಲಿ (113; 91ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 290 ರನ್‌ಗಳಿಂದಾಗಿ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 409 ರನ್ ಗಳಿಸಿತು. ಅದಕ್ಕುತ್ತರವಾಗಿ ಬಾಂಗ್ಲಾದೇಶ ತಂಡವು 34 ಓವರ್‌ಗಳಲ್ಲಿ 182 ರನ್ ಗಳಿಸಿ ಶರಣಾಯಿತು. ಆದರೆ ಬಾಂಗ್ಲಾ ತಂಡವು 2–1ರಿಂದ ಸರಣಿ ಜಯ ದಾಖಲಿಸಿತು.

ಬೌಂಡರಿ, ಸಿಕ್ಸರ್‌ಗಳಿಂದ 156!: ಬಾಂಗ್ಲಾದೇಶ ಎದುರಿನ ಕಳೆದ ಎರಡೂ ಪಂದ್ಯಗಳಲ್ಲಿ ಭಾರತ ತಂಡದ ಸೋಲನ್ನು ಬೆಂಚ್‌ನಲ್ಲಿ ಕುಳಿತು ನೋಡಿದ್ದ ಇಶಾನ್ ತಮಗೆ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡರು.ಶಿಖರ್ ಧವನ್ ಜೊತೆ ಇನಿಂಗ್ಸ್‌ ಆರಂಭಿಸಿದರು. ಆದರೆ ಶಿಖರ್ ಬೇಗನೇ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿಯೊಂದಿಗೆ ಇನಿಂಗ್ಸ್‌ಗೆ ಬಲ ತುಂಬಿದರು. ಕೇವಲ 85 ಎಸೆತಗಳಲ್ಲಿ ವೃತ್ತಿಜೀವನದ ಚೊಚ್ಚಲ ಶತಕ ಪೂರೈಸಿದರು.ನಂತರ ಎದುರಿಸಿದ 41 ಎಸೆತಗಳಲ್ಲಿ ನೂರು ರನ್‌ ಗಳಿಸಿದರು.

ಕೇವಲ 126 ಎಸೆತಗಳಲ್ಲಿ 200 ರನ್‌ಗಳ ಗಡಿ ಮುಟ್ಟಿದ ಅವರು, ಕ್ರಿಸ್‌ಗೇಲ್ (138ಎಸೆತ) ದಾಖಲೆಯನ್ನು ಮುರಿದರು. 10 ಸಿಕ್ಸರ್ ಮತ್ತು 24 ಬೌಂಡರಿಗಳ ಮೂಲಕವೇ 156 ರನ್‌ಗಳನ್ನು ಗಳಿಸಿದರು.

ಇಶಾನ್ ಆಡಿದ 10ನೇ ಏಕದಿನ ಪಂದ್ಯ ಇದು. ಈ ಮಾದರಿಯಲ್ಲಿತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದ ಏಕೈಕ ಬ್ಯಾಟರ್ ಎಂಬ ಶ್ರೇಯವೂ ಅವರದ್ದಾಗಿದೆ. ಇನಿಂಗ್ಸ್‌ನ 36ನೇ ಓವರ್‌ನಲ್ಲಿ ತಸ್ಕಿನ್ ಅಹಮದ್ ಎಸೆತದಲ್ಲಿ ಲಿಟನ್ ದಾಸ್ ಪಡೆದ ಕ್ಯಾಚ್‌ನಿಂದಾಗಿ ಇಶಾನ್ ಆಟಕ್ಕೆ ತೆರೆಬಿತ್ತು.ಆಗ ವಿರಾಟ್ ಕೊಹ್ಲಿ 85 ರನ್‌ ಗಳಿಸಿಕ್ರೀಸ್‌ನಲ್ಲಿದ್ದರು.

ವಿರಾಟ್ ಚೆಂದದ ಶತಕ: ಇಶಾನ್ 200ರ ಗಡಿ ಮುಟ್ಟಿದಾಗ ಜಿಗಿದು ಸಂಭ್ರಮಿಸಿದ ವಿರಾಟ್ ಕೊಹ್ಲಿ ಕೂಡ ಚೆಂದದ ಶತಕ ದಾಖಲಿಸಿದರು. 264ನೇ ಏಕದಿನ ಪಂದ್ಯವಾಡಿದವಿರಾಟ್ 43ನೇ ಶತಕ ದಾಖಲಿಸಿದರು. ಒಟ್ಟಾರೆ ಇದು ಅವರ 72ನೇ ಶತಕ.

ಇಶಾನ್ ಕಿಶನ್‌ಗೆ ಹೆಚ್ಚು ಸಮಯ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ ವಿರಾಟ್ ಅವಕಾಶ ಸಿಕ್ಕಾಗ ಬೌಂಡರಿ ಮತ್ತು ಸಿಕ್ಸರ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ:
50 ಓವರ್‌ಗಳಲ್ಲಿ 8 ವಿಕೆಟ್‌ಗೆ 409 (ಇಶಾನ್‌ ಕಿಶನ್‌ 210, ವಿರಾಟ್‌ ಕೊಹ್ಲಿ 113, ವಾಷಿಂಗ್ಟನ್‌ ಸುಂದರ್‌ 37, ಅಕ್ಷರ್‌ ಪಟೇಲ್‌ 20, ಶಕೀಬ್‌ ಅಲ್‌ ಹಸನ್‌ 68ಕ್ಕೆ 2, ಇಬಾದತ್‌ ಹೊಸೇನ್‌ 80ಕ್ಕೆ 2, ತಸ್ಕಿನ್‌ ಅಹಮದ್‌ 89ಕ್ಕೆ 2)

ಬಾಂಗ್ಲಾದೇಶ:34 ಓವರ್‌ಗಳಲ್ಲಿ 182 (ಲಿಟನ್‌ ದಾಸ್‌ 29, ಶಕೀಬ್‌ ಅಲ್‌ ಹಸನ್‌ 43, ಯಾಸಿರ್‌ ಅಲಿ 25, ಮಹಮೂದುಲ್ಲಾ 20, ಶಾರ್ದೂಲ್‌ ಠಾಕೂರ್‌ 30ಕ್ಕೆ 3, ಅಕ್ಷರ್‌ ಪಟೇಲ್‌ 22ಕ್ಕೆ 2, ಉಮ್ರನ್ ಮಲಿಕ್‌ 43ಕ್ಕೆ 2)

ಫಲಿತಾಂಶ: ಭಾರತಕ್ಕೆ 227 ರನ್‌ ಗೆಲುವು

ಪಂದ್ಯಶ್ರೇಷ್ಠ: ಇಶಾನ್‌ ಕಿಶನ್‌

ಸರಣಿಶ್ರೇಷ್ಠ: ಮೆಹ್ದಿ ಹಸನ್‌ಮಿರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT