7
ಏಕದಿನ ಸರಣಿಯ ಮೊದಲ ಪಂದ್ಯ

ಭಾರತ ತಂಡಕ್ಕೆ ಶರಣಾದ ಇಂಗ್ಲೆಂಡ್‌

Published:
Updated:

ನಾಟಿಂಗ್‌ ಹ್ಯಾಮ್: ಸ್ಪಿನ್ನರ್‌ ಕುಲದೀಪ್ ಯಾದವ್ (25ಕ್ಕೆ6) ಮತ್ತು ರೋಹಿತ್‌ ಶರ್ಮಾ ಅವರು ಗಳಿಸಿದ ಶತಕದ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಜಯಿಸಿತು.

ಗುರುವಾರ ಇಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ತನ್ನ ಯೋಜನೆಯಲ್ಲಿ ಬಹುತೇಕ ಸಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವು 49.5 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡು 268 ರನ್‌ ಗಳಿಸಿತು.

ಗುರಿ ಬೆನ್ನತ್ತಿದ ಭಾರತ ತಂಡವು 40.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 269 ರನ್‌ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರು 137 (114 ಎಸೆತ, 4 ಸಿಕ್ಸರ್‌, 15 ಬೌಂಡರಿ) ರನ್‌ ಗಳಿಸಿದರು.

ಹೋದ ವಾರ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿಯನ್ನು ಗೆದ್ದುಕೊಂಡಿದ್ದ ವಿರಾಟ್ ಕೊಹ್ಲಿ ಬಳಗವು ಇಲ್ಲಿಯೂ ಆತ್ಮವಿಶ್ವಾಸದಿಂದ ಆಡಿತು.  ಆ ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ್ದ ಕಾನ್ಪುರದ ಹುಡುಗ ಇಲ್ಲಿಯೂ ಮಿಂಚಿದರು. 21ನೇ ಏಕದಿನ ಪಂದ್ಯ ಆಡಿದ ಅವರು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ಈ ಹಿಂದೆ 23ಕ್ಕೆ4 ವಿಕೆಟ್‌ ಗಳಿಸಿದ್ದು ಅವರ ಉತ್ತಮ ಸಾಧನೆಯಾಗಿತ್ತು.

ಮೊದಲ ವಿಕೆಟ್‌ಗೆ 73 ರನ್‌ ಸೇರಿಸಿದ್ದ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಅವರ ಜೊತೆಯಾಟ ಮುರಿಯುವದರೊಂದಿಗೆ ಕುಲದೀಪ್ ತಮ್ಮ ಬೇಟೆ ಆರಂಭಿಸಿದರು. ಅವರಿಬ್ಬರ ನಂತರ ಜೋ ರೂಟ್, ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್ ಮತ್ತು ಡೇವಿಡ್ ವಿಲ್ಲಿ ಅವರ ವಿಕೆಟ್‌ಗಳನ್ನೂ ಕಬಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಎಚ್ಚರಿಕೆಯಿಂದ ಆಟವಾಡಿದ ಬೆನ್ ಸ್ಟೋಕ್ಸ್‌ (50 ರನ್) ಮತ್ತು ಜೋಸ್ ಬಟ್ಲರ್ (53 ರನ್) ಅವರ ಅರ್ಧಶತಕಗಳ ಕಾಣಿಕೆಯಿಂದ ತಂಡವು ಗೌರವಾರ್ಹ ಮೊತ್ತ ಗಳಿಸಲು ಸಾಧ್ಯವಾಯಿತು. 

ವೇಗಿ ಉಮೇಶ್ ಯಾದವ್ ಕೂಡ ಕುಲದೀಪ್‌ಗೆ ಉತ್ತಮ ಜೊತೆ ನೀಡಿದರು. ಎರಡು ವಿಕೆಟ್ ಗಳಿಸಿದರು. ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 49.5 ಓವರ್‌ಗಳಲ್ಲಿ 268 (ಜೇಸನ್ ರಾಯ್ 38, ಜಾನಿ ಬೆಸ್ಟೊ 38, ಇಯಾನ್ ಮಾರ್ಗನ್ 19, ಬೆನ್ ಸ್ಟೋಕ್ಸ್‌ 50, ಜೋಸ್ ಬಟ್ಲರ್ 53, ಮೋಯಿನ್ ಅಲಿ 24, ಆದಿಲ್ ರಶೀದ್ 22, ಲಿಯಾಮ್ ಪ್ಲಂಕೆಟ್ 10, ಉಮೇಶ್ ಯಾದವ್ 70ಕ್ಕೆ2, ಯಜುವೇಂದ್ರ ಚಾಹಲ್ 51ಕ್ಕೆ1, ಕುಲದೀಪ್ ಯಾದವ್ 25ಕ್ಕೆ6) 

ಬರಹ ಇಷ್ಟವಾಯಿತೆ?

 • 26

  Happy
 • 5

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !