ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: ಹರ್ಷಲ್–ಚಾಹಲ್ ಮೋಡಿ; ಪಂತ್‌ ಬಳಗಕ್ಕೆ ಜಯದ ಸಿಹಿ

Last Updated 14 ಜೂನ್ 2022, 17:16 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಯಜುವೇಂದ್ರ ಚಾಹಲ್ ಸ್ಪಿನ್ ಮೋಡಿ ಮತ್ತು ಹರ್ಷಲ್ ಪಟೇಲ್ ಸ್ವಿಂಗ್ ಮುಂದೆ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ಗಳ ಆಟ ನಡೆಯಲಿಲ್ಲ.

ಇದರಿಂದಾಗಿ ರಿಷಭ್ ಪಂತ್ ನಾಯಕತ್ವದ ಭಾರತ ತಂಡವು ಇಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 48 ರನ್‌ಗಳ ಜಯ ಸಾಧಿಸಿತು. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಆತಿಥೇಯ ತಂಡವು ಈ ಗೆಲುವಿನೊಂದಿಗೆ ಸರಣಿ ಜಯದ ಕನಸನ್ನೂ ಜೀವಂತವಾಗುಳಿಸಿಕೊಂಡಿತು. ಮೊದಲ ಪಂದ್ಯದಲ್ಲಿ ಬೌಲಿಂಗ್ ಮತ್ತು ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ತಂಡವು ದಂಡ ಕಟ್ಟಿತ್ತು. ಆದರೆ ಇಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಮಿಂಚಿತು.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕವಾಡ್ (57; 35ಎಸೆತ, 4X7, 6X2) ಮತ್ತು ಇಶಾನ್ ಕಿಶನ್ (54; 35ಎ, 4X5, 6X2) ಮೊದಲ ವಿಕೆಟ್ ಜತೆಯಾಟದಲ್ಲಿ 97 ರನ್ ಸೇರಿಸಿದರು. ಬರೋಬ್ಬರಿ ಹತ್ತು ಓವರ್ ಆಡಿದ ಈ ಜೋಡಿಯು ಪ್ರವಾಸಿ ತಂಡದ ಬೌಲರ್‌ಗಳ ಬೆವರಿಳಿಯುವಂತೆ ಮಾಡಿದರು. ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 179 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಪ್ರವಾಸಿ ತಂಡವು 19.1 ಓವರ್‌ಗಳಲ್ಲಿ 131 ರನ್ ಗಳಿಸಿ ಆಲೌಟ್ ಆಯಿತು. ಚಾಹಲ್ ಮೂರು ಮತ್ತು ಪಟೇಲ್ ನಾಲ್ಕು ವಿಕೆಟ್ ಗಳಿಸಿದರು.

ಮೊದಲ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಋತುರಾಜ್ ಇಲ್ಲಿ ಆತ್ಮವಿಶ್ವಾಸಭರಿತ ಆಟವ ಪ್ರದರ್ಶಿಸಿದರು. ಅವರ ಚುರುಕಾದ ಪಾದಚಲನೆ ಮತ್ತು ನಿಖರವಾದ ಡ್ರೈವ್‌ಗಳ ಮುಂದೆ ಕಗಿಸೊ ರಬಾಡ ಮತ್ತುಳಿದ ಬೌಲರ್‌ಗಳ ತಂತ್ರಗಳು ನಡೆಯಲಿಲ್ಲ. ಇನ್ನೊಂದೆಡೆ ಎಡಗೈ ಬ್ಯಾಟರ್ ಇಶಾನ್ ಕೂಡ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. ಆಕರ್ಷಕವಾದ ರಿವರ್ಸ್ ಸ್ವೀಪ್ ಮತ್ತು ಸ್ಕೂಪ್‌ ಹೊಡೆತಗಳಿಂದ ಬೌಂಡರಿ ಗಳಿಸಿದರು.

ಹತ್ತನೇ ಓವರ್‌ನ ಕೊನೆಯ ಎಸೆತವನ್ನು ಹೊಡೆಯುವ ಯತ್ನದಲ್ಲಿ ಬೌಲರ್‌ ಕೇಶವ್ ಮಹಾರಾಜ್ ಅವರಿಗೇ ಕ್ಯಾಚಿತ್ತ ಋತುರಾಜ್ ಇನಿಂಗ್ಸ್‌ಗೆ ತೆರೆ ಬಿತ್ತು. ಶ್ರೇಯಸ್ ಅಯ್ಯರ್ (14 ರನ್) ಬೇಗನೆ ನಿರ್ಗಮಿಸಿದರು. 14ನೇ ಓವರ್‌ನಲ್ಲಿ ಪ್ರಿಟೊರಿಯಸ್ ಹಾಕಿದ ವೈಡ್ ಎಸೆತವನ್ನು ಸಿಕ್ಸರ್‌ಗೆತ್ತುವ ಸಾಹಸಕ್ಕೆ ಕೈಹಾಕಿದ ಇಶಾನ್ ದಂಡ ತೆತ್ತರು. ಹೆನ್ರಿಕ್ಸ್‌ ಕ್ಯಾಚ್ ಪಡೆದು ಸಂಭ್ರಮಿಸಿದರು.

ನಂತರದ ಇನಿಂಗ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ (ಅಜೇಯ 31; 21ಎ) ಬಿಟ್ಟರೆ ಉಳಿದ ಬ್ಯಾಟರ್‌ಗಳು ರನ್‌ ಗಳಿಕೆ ಹೆಚ್ಚಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT