ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಏಷ್ಯಾ ಕಪ್ ಟಿ20: ಭಾರತ– ಶ್ರೀಲಂಕಾ ಫೈನಲ್‌ ಹಣಾಹಣಿ

ಥಾಯ್ಲೆಂಡ್‌ ಮಣಿಸಿದ ಹರ್ಮನ್‌ಪ್ರೀತ್ ಬಳಗ
Last Updated 14 ಅಕ್ಟೋಬರ್ 2022, 1:41 IST
ಅಕ್ಷರ ಗಾತ್ರ

ಸಿಲೆಟ್: ಭಾರತ ಮತ್ತು ಶ್ರೀಲಂಕಾ ತಂಡಗಳು ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಗುರುವಾರ ನಡೆದ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಮೊದಲೇ ನಿರೀಕ್ಷಿಸಿದಂತೆ ಭಾರತ ತಂಡವು ಥಾಯ್ಲೆಂಡ್ ವಿರುದ್ಧ ಸುಲಭ ಜಯ ದಾಖಲಿಸಿತು. ಪಾಕಿಸ್ತಾನದ ಎದುರು ಶ್ರೀಲಂಕಾ ಕೇವಲ 1 ರನ್‌ ಅಂತರದ ರೋಚಕ ಗೆಲುವು ಸಾಧಿಸಿತು. ಬಿಸ್ಮಾ ಮರೂಫ್ ಬಳಗದ ಫೈನಲ್ ಕನಸು ಕಮರಿತು.

ನಾಲ್ಕರ ಘಟ್ಟದ ಮೊದಲ ಪಂದ್ಯದಲ್ಲಿ; ಟಾಸ್ ಗೆದ್ದ ಥಾಯ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ಶಫಾಲಿ ವರ್ಮಾ (42; 28ಎ, 4X5, 6X1) ಹಾಗೂ ಹರ್ಮನ್‌ಪ್ರೀತ್ ಕೌರ್ (36; 30ಎ, 4X4) ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 148 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಥಾಯ್ಲೆಂಡ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 74 ರನ್‌ ಗಳಿಸಿತು.74 ರನ್‌ಗಳಿಂದ ಭಾರತ ಗೆದ್ದಿತು.

ಇದೇ ಮೊದಲ ಬಾರಿಗೆ ನಾಲ್ಕರ ಘಟ್ಟ ಪ್ರವೇಶಿಸಿದ್ದ ಥಾಯ್ಲೆಂಡ್ ತಂಡವು ಪೂರ್ಣ ಇನಿಂಗ್ಸ್ ಆಡಿತು. ಆಲೌಟ್ ಕೂಡ ಆಗದಿರುವುದು ವಿಶೇಷ. ನೆರುಮೊಳ್ ಚೈವೈ ಹಾಗೂ ನತಾಯಾ ಬೂಚಾತಮ್ ತಲಾ 21 ರನ್‌ ಗಳಿಸಿದರು. ಅವರಿಬ್ಬರೇ ಎರಡಂಕಿ ತಲುಪಿದವರು.

ರೋಚಕ ಹಣಾಹಣಿ:ಲಂಕೆ ಜಯಭೇರಿ: ಮಧ್ಯಾಹ್ನ ನಡೆದ ರೋಚಕವಾದ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವು ಪಾಕ್ ವಿರುದ್ಧ ಗೆದ್ದಿತು. ಕೊನೆಯ ಓವರ್‌ನಲ್ಲಿ ಪಾಕ್ ತಂಡದ ಗೆಲುವಿಗೆ 9 ರನ್‌ಗಳ ಅವಶ್ಯಕತೆ ಇತ್ತು. ಲಂಕಾ ತಂಡದ ಬಲಗೈ ಬೌಲರ್ ಅಚಿನಿ ಕೌಸಲ್ಯಾ ಅವರು ಕೇವಲ ಏಳು ರನ್‌ ಬಿಟ್ಟುಕೊಟ್ಟು ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಬ್ಯಾಟರ್ ನಿದಾ ದಾರ್ ಹಾಗೂ ಅಲಿಯಾ ರಿಯಾಜ್ ಅವರ ಪ್ರಯತ್ನಕ್ಕೆ ಫಲ ಲಭಿಸಲಿಲ್ಲ.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 148 (ಶಫಾಲಿ ವರ್ಮಾ 42, ಜಿಮಿಮಾ ರಾಡ್ರಿಗಸ್ 27, ಹರ್ಮನ್‌ಪ್ರೀತ್ ಕೌರ್ 36, ಸಾರ್‌ನಾರಾಯನ್ ತಿಪೊಚ್ 24ಕ್ಕೆ3) ಥಾಯ್ಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 74 (ನಾರುಮೊಳ್ ಚೈವೈ 21, ನತಾಯಾ ಬೂಚತಾಮ್ 21, ದೀಪ್ತಿ ಶರ್ಮಾ 7ಕ್ಕೆ3, ರಾಜೇಶ್ವರಿ ಗಾಯಕವಾಡ 10ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 74 ರನ್‌ಗಳ ಜಯ.

ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 122 (ಅನುಷ್ಕಾ ಸಂಜೀವಿನಿ 26, ಮಾದವಿ 35, ನೀಲಾಕ್ಷಿ ಡಿಸಿಲ್ವಾ 14, ಹಸಿನಿ ಪೆರೆರಾ 13, ನಷ್ರಾ ಸಂಧು 17ಕ್ಕೆ3), ಪಾಕಿಸ್ತಾನ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 121 (ಬಿಸ್ಮಾ ಮರೂಫ್ 42, ನಿದಾ ದಾರ್ 26, ಇನೊಕಾ ರಣವೀರಾ 17ಕ್ಕೆ2) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 1 ರನ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT