ಮಂಗಳವಾರ, ಮಾರ್ಚ್ 9, 2021
18 °C
ಕೊಹ್ಲಿ, ಬೂಮ್ರಾ ಸ್ಥಾನ ಅಬಾಧಿತ; ಮಹೇಂದ್ರ ಸಿಂಗ್ ಧೋನಿಗೆ ಬಡ್ತಿ

ಐಸಿಸಿ ಏಕದಿನ ರ‍್ಯಾಂಕಿಂಗ್‌: ಎಡರನೇ ಸ್ಥಾನಕ್ಕೇರಿದ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಏಕದಿನ ಸರಣಿಗಳನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಅಗ್ರ ಸ್ಥಾನ ಅಬಾಧಿತವಾಗಿದೆ.

ಸೋಮವಾರ ಬಿಡುಗಡೆಗೊಂಡ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ 122 ಪಾಯಿಂಟ್‌ಗಳನ್ನು ಗಳಿಸಿದ್ದು ನಾಲ್ಕು ಪಾಯಿಂಟ್ ಹೆಚ್ಚು ಇರುವ ಇಂಗ್ಲೆಂಡ್‌ ಮೊದಲ ಸ್ಥಾನದಲ್ಲಿದೆ.

ನ್ಯೂಜಿಲೆಂಡ್‌ ಒಂದು ಸ್ಥಾನ ಕಳೆದುಕೊಂಡು ನಾಲ್ಕಕ್ಕೆ ಕುಸಿದಿದ್ದು ಈ ತಂಡವನ್ನು ಹಿಂದಿಕ್ಕಿರುವ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನಕ್ಕೇರಿದೆ. ಯುಎಇ ಜೊತೆ 15 ಪಾಯಿಂಟ್‌ಗಳನ್ನು ಹಂಚಿಕೊಂಡಿರುವ ನೇಪಾಳ, ರ‍್ಯಾಂಕಿಂಗ್ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದೆ.

ಮಹೇಂದ್ರ ಸಿಂಗ್ ಧೋನಿಗೆ ಬಡ್ತಿ: ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ ಮಹೇಂದ್ರ ಸಿಂಗ್ ಧೋನಿ ಮೂರು ಸ್ಥಾನಗಳ ಏರಿಕೆ ಕಂಡಿದ್ದು 17ನೇ ಸ್ಥಾನ ತಲುಪಿದ್ದಾರೆ.

ಭಾರತ ಎದುರಿನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಸರಣಿಯಲ್ಲಿ ನ್ಯೂಜಿಲೆಂಡ್ ನಾಲ್ಕನೇ ಪಂದ್ಯವನ್ನು ಗೆದ್ದಿತ್ತು. ಎಡಗೈ ಮಧ್ಯಮ ವೇಗಿ ಬೌಲ್ಟ್‌ ಆ ಪಂದ್ಯದಲ್ಲಿ 21ಕ್ಕೆ 5 ವಿಕೆಟ್ ಕಬಳಿಸಿದ್ದರು. ಪಟ್ಟಿಯಲ್ಲಿ ಜಸ್‌ಪ್ರೀತ್ ಬೂಮ್ರಾ ಮೊದಲ ಸ್ಥಾನದಲ್ಲಿದ್ದರೆ, ಅಫ್ಗಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್‌ ಎರಡನೆಯವರಾಗಿದ್ದಾರೆ.

ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಒಂದು ಸ್ಥಾನದ ಏರಿಕೆಯೊಂದಿಗೆ ಐದನೇ ಸ್ಥಾನಕ್ಕೆ ತಲುಪಿದ್ದು ಮಧ್ಯಮ ವೇಗಿ ಭುವನೇಶ್ವರ್ ಕುಮಾರ್‌ ಆರು ಸ್ಥಾನಗಳ ಏರಿಕೆಯೊಂದಿಗೆ 17ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ‌

ಭಾರತದ ಕೇದಾರ್ ಜಾಧವ್ ಕೂಡ ಉತ್ತಮ ಸಾಧನೆ ಮಾಡಿದ್ದು ಎಂಟು ಸ್ಥಾನಗಳ ಏರಿಕೆಯೊಂದಿಗೆ 35ನೇ ರ‍್ಯಾಂಕ್‌ ಗಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು