ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಏಕದಿನ ಪಂದ್ಯ: ಮೆಲ್ಬರ್ನ್‌ನಲ್ಲಿ ಚಾಹಲ್‌ ‘ಮಹಿ’ಮೆ

ಆಸ್ಟ್ರೇಲಿಯಾ ಎದುರು ಧೋನಿ–ಜಾಧವ್ ಶತಕದ ಜೊತೆಯಾಟ
Last Updated 18 ಜನವರಿ 2019, 18:39 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಹತ್ತೇ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡ ಮತ್ತೊಂದು ಇತಿಹಾಸ ರಚಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಶುಕ್ರವಾರ ಆಸ್ಟ್ರೇಲಿಯಾವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ವಿರಾಟ್ ಕೊಹ್ಲಿ ಬಳಗ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಈ ಮೂಲಕ ಕಾಂಗರೂಗಳ ನೆಲದಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಚೊಚ್ಚಲ ಜಯ ಸಾಧಿಸಿದ ಸಾಧನೆ ಮಾಡಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾದಲ್ಲಿ ಎಲ್ಲ ಮಾದರಿಗಳ ಸರಣಿಯನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಯೂ ಭಾರತದ್ದಾಯಿತು.

ಶುಕ್ರವಾರ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆತಿಥೇಯರನ್ನು ಯಜುವೇಂದ್ರ ಚಾಹಲ್ ಸ್ಪಿನ್ ಬಲೆಯಲ್ಲಿ ಸಿಲುಕಿಸಿದರು. ಹೀಗಾಗಿ ತಂಡ 230 ರನ್‌ಗಳಿಗೆ ಪತನ ಕಂಡಿತು. ಗುರಿ ಬೆನ್ನತ್ತಿದ ಭಾರತದ ಸವಾಲನ್ನು ‘ಫಿನಿಷರ್’ ಮಹೇಂದ್ರ ಸಿಂಗ್ ಧೋನಿ ಸುಲಭಗೊಳಿಸಿದರು. ವಿರಾಟ್ ಕೊಹ್ಲಿ ಜೊತೆ ಮೂರನೇ ವಿಕೆಟ್‌ಗೆ 54 ರನ್‌ ಸೇರಿಸಿದ ಧೋನಿ ಮುರಿಯದ ನಾಲ್ಕನೇ ವಿಕೆಟ್‌ಗೆ ಕೇದಾರ್ ಜಾಧವ್ ಜೊತೆಗೂಡಿ 121 ರನ್ ಸೇರಿಸಿದರು. ನಾಲ್ಕು ಎಸೆತಗಳು ಬಾಕಿ ಇರುವಾಗಲೇ ಭಾರತ ವಿಜಯ ಪತಾಕೆ ಹಾರಿಸಿತು.

ಕಳೆದ ಪಂದ್ಯದಲ್ಲಿ ಮಿಂಚಿದ್ದ ರೋಹಿತ್ ಶರ್ಮಾ ಶುಕ್ರವಾರ ನಿರಾಸೆ ಕಂಡರು. ತಂಡದ ಮೊತ್ತ 15 ರನ್‌ ಆಗಿದ್ದಾಗ ಅವರು ವಿಕೆಟ್ ಕಳೆದುಕೊಂಡರು. ನಂತರ ಶಿಖರ್ ಧವನ್‌ ಮತ್ತು ವಿರಾಟ್ ಕೊಹ್ಲಿ ತಾಳ್ಮೆಯಿಂದ ಆಡಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಸ್ಟೊಯಿನಿಸ್‌ಗೆ ಸುಲಭ ರಿಟರ್ನ್ ಕ್ಯಾಚ್ ಧವನ್ ಮರಳಿದಾಗ ತಂಡದ ಪಾಳಯದಲ್ಲಿ ಆತಂಕ ಮೂಡಿತು.

ಧೋನಿ–ಜಾಧವ್ ಮೋಹಕ ಆಟ: ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಬಂದ ನಂತರ ಪಂದ್ಯದ ಗತಿ ಬದಲಾಯಿತು. ಆಕ್ರಮಣಕಾರಿಯಾಗಿಯೇ ಆಡಿದ ಕೊಹ್ಲಿ ಅರ್ಧಶತಕ ವಂಚಿತರಾದರೂ ತಂಡಕ್ಕೆ ಉತ್ತಮ ಕಾಣಿಕೆ ನೀಡಿ ಮರಳಿದರು. ನಂತರ ಧೋನಿ ಮತ್ತು ಜಾಧವ್ ಆಟ ರಂಗೇರಿತು. ತಾಳ್ಮೆಯಿಂದ ಆಡಿದ ಧೋನಿ ಕೆಟ್ಟ ಎಸೆತಗಳನ್ನು ಬೌಂಡರಿಗೆ ಅಟ್ಟಿದರು. ಜಾಧವ್‌ ಆಕ್ರಮಣಕಾರಿ ಆಟದ ಮೂಲಕ ಉತ್ತಮ ಸಹಕಾರ ನೀಡಿದರು.

ಚಾಹಲ್‌ ಸ್ಪಿನ್ ಮೋಡಿ: ಆಸ್ಟ್ರೇಲಿಯಾವನ್ನು ಕಟ್ಟಿಹಾಕುವಲ್ಲಿ ಯಜುವೇಂದ್ರ ಚಾಹಲ್ ಪ್ರಮುಖ ಪಾತ್ರ ವಹಿಸಿದರು. ಆರು ವಿಕೆಟ್ ಕಬಳಿಸಿದ ಅವರು ಆಸ್ಟ್ರೇಲಿಯಾದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸಾಧನೆಯ ದಾಕಲೆಯನ್ನು ಸಮಗಟ್ಟಿದರು. ಭಾರತದ ಅಜಿತ್ ಅಗರ್ಕರ್ ಮೆಲ್ಬರ್ನ್‌ನಲ್ಲಿ 2004ರಲ್ಲಿ 42ಕ್ಕೆ6 ವಿಕೆಟ್ ಉರುಳಿಸಿದ್ದರು.

ಆಸ್ಟ್ರೇಲಿಯಾದ ಆರಂಭಿಕ ಜೋಡಿ ಮತ್ತೊಮ್ಮೆ ವೈಫಲ್ಯ ಕಂಡಿತು. ಅಲೆಕ್ಸ್ ಕ್ಯಾರಿ ಮೂರನೇ ಓವರ್‌ನಲ್ಲಿ ಮತ್ತು ಆ್ಯರನ್ ಫಿಂಚ್‌ ಒಂಬತ್ತನೇ ಓವರ್‌ನಲ್ಲಿ ಮರಳಿದರು. ಶಾನ್ ಮಾರ್ಷ್ ಮತ್ತು ಉಸ್ಮಾನ್ ಖ್ವಾಜಾ ಸ್ವಲ್ಪ ಪ್ರತಿರೋಧ ತೋರಿದರು. ಆದರೆ ಇವರಿಬ್ಬರೂ ಚಾಹಲ್‌ಗೆ ಬಲಿಯಾದರು. ಭಾರತದ ದಾಳಿಯನ್ನು ಪೀಟರ್‌ ಹ್ಯಾಂಡ್ಸ್‌ಕಂಬ್ ಒಬ್ಬರೇ ಸಮರ್ಥವಾಗಿ ಮೆಟ್ಟಿ ನಿಂತರು. ಅವರು 63 ಎಸೆತಗಳಲ್ಲಿ 58 ರನ್‌ ಗಳಿಸಿದರು. ಅವರನ್ನು ಕೂಡ ಚಾಹಲ್ ಔಟ್ ಮಾಡಿದರು. ಇತರ ಯಾವ ಬ್ಯಾಟ್ಸ್‌ಮನ್‌ಗೂ ನಿರೀಕ್ಷಿತ ಆಟವಾಡಲು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT