ಭಾನುವಾರ, ಆಗಸ್ಟ್ 18, 2019
23 °C
‘ಎ’ ತಂಡಗಳ ನಡುವಣ ಮೂರನೇ ‘ಟೆಸ್ಟ್‌’: ಭಾರತದ ಬ್ಯಾಟ್ಸ್‌ಮನ್‌ಗಳ ಪರದಾಟ

ಅಲ್ಪ ಮೊತ್ತಕ್ಕೆ ಕುಸಿದ ಹನುಮ ಬಳಗ

Published:
Updated:
Prajavani

ಟರೌಬಾ, ಟ್ರಿನಿಡಾಡ್‌: ಚೆಮರ್‌ ಹೋಲ್ಡರ್‌ (47ಕ್ಕೆ3) ಮತ್ತು ಅಕಿಮ್‌ ಫ್ರೇಜರ್‌ (53ಕ್ಕೆ3) ಅವರ ದಾಳಿಗೆ ಬೆದರಿದ ಭಾರತ ‘ಎ’ ತಂಡವು ವೆಸ್ಟ್‌ ಇಂಡೀಸ್‌ ‘ಎ’ ಎದುರಿನ ಮೂರನೇ ‘ಟೆಸ್ಟ್‌’ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ.

ಬ್ರಯಾನ್‌ ಲಾರಾ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಮೊದಲು ಬ್ಯಾಟ್‌ ಮಾಡಿದ ಹನುಮ ವಿಹಾರಿ ಮುಂದಾಳತ್ವದ ಭಾರತ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 67.5 ಓವರ್‌ಗಳಲ್ಲಿ 201ರನ್‌ಗಳಿಗೆ ಆಲೌಟ್‌ ಆಯಿತು.

ಪ್ರಥಮ ಇನಿಂಗ್ಸ್‌ ಶುರು ಮಾಡಿರುವ ವಿಂಡೀಸ್‌ ತಂಡ ದಿನದಾಟದ ಅಂತ್ಯಕ್ಕೆ 15 ಓವರ್‌ಗಳಲ್ಲಿ 1 ವಿಕೆಟ್‌ಗೆ 23ರನ್‌ ಪೇರಿಸಿದೆ.

ಬ್ಯಾಟಿಂಗ್‌ ಆರಂಭಿಸಿದ ಪ್ರವಾಸಿ ಬಳಗ ಏಳನೇ ಓವರ್‌ನಲ್ಲಿ ಅಭಿಮನ್ಯು ಈಶ್ವರನ್‌ (0) ವಿಕೆಟ್‌ ಕಳೆದುಕೊಂಡಿತು. ಮಯಂಕ್‌ ಅಗರವಾಲ್‌ (33; 60ಎ, 5ಬೌಂ), ಪ್ರಿಯಾಂಕ್‌ ಪಾಂಚಾಲ್‌ (11) ಹಾಗೂ ಶುಭಮನ್‌ ಗಿಲ್‌ (0) ಅವರ ವಿಕೆಟ್‌ ಉರುಳಿಸಿದ ಅಕಿಮ್‌ ಫ್ರೇಜರ್‌, ಆತಿಥೇಯರು ಮೇಲುಗೈ ಸಾಧಿಸಲು ನೆರವಾದರು.

48 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ‘ಎ’ ತಂಡಕ್ಕೆ ನಾಯಕ ಹನುಮ (55; 140ಎ, 5ಬೌಂ) ಮತ್ತು ಅನುಭವಿ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ (62; 65ಎ, 9ಬೌಂ, 1ಸಿ) ಆಸರೆಯಾದರು. ಹನುಮ ತಾಳ್ಮೆಯ ಆಟಕ್ಕೆ ಮೊರೆ ಹೋದರೆ, ಸಹಾ ಅಬ್ಬರಿಸಿದರು. ಹೀಗಾಗಿ ತಂಡದ ಖಾತೆಗೆ ವೇಗವಾಗಿ ರನ್‌ ಸೇರ್ಪಡೆಯಾಯಿತು.

ಅತಿಥೇಯ ಬೌಲರ್‌ಗಳನ್ನು ಕಾಡಿದ ಈ ಜೋಡಿ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 86ರನ್‌ ಸೇರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತು.

44ನೇ ಓವರ್‌ನಲ್ಲಿ ಸಹಾ, ಯಾನಿಕ್‌ ಕ್ಯಾರಿಹ್‌ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಬಳಿಕ ಪ್ರವಾಸಿ ಬಳಗ ಕುಸಿತದ ಹಾದಿ ಹಿಡಿಯಿತು. ಶಿವಂ ದುಬೆ (26; 45ಎ, 3ಬೌಂ) ಮತ್ತು ಕನ್ನಡಿಗ ಕೃಷ್ಣಪ್ಪ ಗೌತಮ್‌ (0) ವಿಕೆಟ್‌ ನೀಡಲು ಅವಸರಿಸಿದರು!

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: ಪ್ರಥಮ ಇನಿಂಗ್ಸ್‌; 67.5 ಓವರ್‌ಗಳಲ್ಲಿ 201 (ಮಯಂಕ್‌ ಅಗರವಾಲ್‌ 33, ಪ್ರಿಯಾಂಕ್‌ ಪಾಂಚಾಲ್‌ 11, ಹನುಮ ವಿಹಾರಿ 55, ವೃದ್ಧಿಮಾನ್‌ ಸಹಾ 62, ಶಿವಂ ದುಬೆ 26; ಮಿಗುಯೆಲ್‌ ಕಮಿನ್ಸ್‌ 22ಕ್ಕೆ1, ಚೆಮರ್‌ ಹೋಲ್ಡರ್‌ 47ಕ್ಕೆ3, ರೇಮನ್‌ ರೀಫರ್‌ 32ಕ್ಕೆ1, ಅಕಿಂ ಫ್ರೇಜರ್‌ 53ಕ್ಕೆ3, ಯಾನಿಕ್‌ ಕ್ಯಾರಿಹ್‌ 45ಕ್ಕೆ2).

ವೆಸ್ಟ್‌ ಇಂಡೀಸ್‌ ‘ಎ’: ಪ್ರಥಮ ಇನಿಂಗ್ಸ್‌; 15 ಓವರ್‌ಗಳಲ್ಲಿ 1 ವಿಕೆಟ್‌ಗೆ 23 (ಮೊಂಟ್ಸಿನ್‌ ಹಾಡ್ಜ್‌ 15, ಜೆರೆಮಿ ಸೊಲೊಜನೊ ಔಟಾಗದೆ 7).

Post Comments (+)