ಭಾರತ ನಿರಾಳ; ಆತಂಕದಲ್ಲಿ ಆತಿಥೇಯರು

7
ನಾಳೆಯಿಂದ ಸಿಡ್ನಿಯಲ್ಲಿ ನಿರ್ಣಾಯಕ ಟೆಸ್ಟ್ ಪಂದ್ಯ; ಆತಿಥೇಯರಿಗೆ ಗೆಲ್ಲಲೇಬೇಕಾದ ಒತ್ತಡ

ಭಾರತ ನಿರಾಳ; ಆತಂಕದಲ್ಲಿ ಆತಿಥೇಯರು

Published:
Updated:

ಸಿಡ್ನಿ: ಭಾರತ ಕ್ರಿಕೆಟ್ ತಂಡದ ಆಟಗಾರರು ಮಂಗಳವಾರ ನಿರಾಳವಾಗಿ ಹೊಸವರ್ಷವನ್ನು ಆಚರಿಸಿಕೊಂಡರೆ, ಆಸ್ಟ್ರೇಲಿಯಾ ತಂಡದ ಏಳು ಮಂದಿ ಆಟಗಾರರು ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದರು.

ಗುರುವಾರ ಆರಂಭವಾಗಲಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಸವಾಲು ಮೆಟ್ಟಿನಿಲ್ಲಲು ಸಾಧ್ಯವೇ ಎಂಬ ಆತಂಕ ಆತಿಥೇಯ ಆಟಗಾರರ ಮುಖದಲ್ಲಿ ಎದ್ದುಕಾಣುತ್ತಿತ್ತು. ಅತ್ತ, ಹೊಸ ವರ್ಷದಲ್ಲಿ ಜಯದ ತೋರಣ ಕಟ್ಟಿ ಸರಣಿ ಗೆದ್ದು ಸಂಭ್ರಮಿಸುವ ಭರವಸೆಯಲ್ಲಿದ್ದರು ಭಾರತ ತಂಡದ ಆಟಗಾರರು.

ಮೊದಲ ಮತ್ತು ಮೂರನೇ ಪಂದ್ಯ ಗೆದ್ದು ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿರುವ ಭಾರತ ತಂಡಕ್ಕೆ ಆಸ್ಟ್ರೇಲಿಯಾ ನೆಲದಲ್ಲಿ ಮೊತ್ತಮೊದಲ ಟೆಸ್ಟ್ ಸರಣಿ ಗೆಲ್ಲುವ ಸುವರ್ಣಾವಕಾಶ ಈಗ ಒದಗಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳಲ್ಲಿ ಅಮೋಘ ಸಾಮರ್ಥ್ಯ ತೋರುತ್ತಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಇದು ಸುಲಭ ಸಾಧ್ಯ ಎಂಬುದು ಕ್ರಿಕೆಟ್ ಪಂಡಿತರ ಅನಿಸಿಕೆ.

ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ ಎಂಬ ವಿಶ್ವಾಸದಿಂದ ಆಸ್ಟ್ರೇಲಿಯಾ ತಂಡ ಲೆಗ್‌ಸ್ಪಿನ್ನರ್‌ ಮಾರ್ನಸ್ ಲಬುಚಾನೆ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ. ಅವರು ಮಂಗಳವಾರ ಅಭ್ಯಾಸ ನಡೆಸಿದ್ದಾರೆ. ನಾಯಕ ಟಿಮ್ ಪೇನ್‌,  ನೇಥನ್ ಲಯನ್, ಉಸ್ಮಾನ್ ಖ್ವಾಜಾ, ಆ್ಯರನ್ ಫಿಂಚ್‌, ಮಾರ್ಕಸ್ ಹ್ಯಾರಿಸ್‌, ಪೀಟರ್ ಹ್ಯಾಂಡ್ಸ್‌ಕಂಬ್‌ ಮುಂತಾದವರೂ ನೆಟ್ಸ್‌ಗೆ ಇಳಿದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ವೆಬ್‌ಸೈಟ್‌ ಮಾಹಿತಿ ನೀಡಿದೆ.

ಫಿಂಚ್‌ಗೆ ಕೊಕ್‌ ಸಾಧ್ಯತೆ: ಸರಣಿಯಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿರುವ ಆರಂಭಿಕ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್‌ ಅವರನ್ನು ನಾಲ್ಕನೇ ಟೆಸ್ಟ್‌ನಿಂದ ಕೈಬಿಡುವ ಸಾಧ್ಯತೆ ಇದೆ. 

ಪ್ರಧಾನಿ ಹೊಸ ವರ್ಷದ ಭೋಜನ ಕೂಟ: ಹೊಸ ವರ್ಷದ ಅಂಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ ಮಂಗಳವಾರ ಭೋಜನ ಕೂಟ ಏರ್ಪಡಿಸಿದರು.

ಸಿಡ್ನಿಯಲ್ಲಿರುವ ಅಧಿಕೃತ ನಿವಾಸ ಕಿರಿಬಿಲ್ಲಿ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡೂ ತಂಡಗಳ ಎಲ್ಲ ಆಟಗಾರರೂ ಪಾಲ್ಗೊಂಡರು.ಆಸ್ಟ್ರೇಲಿಯಾದ ಎಲ್ಲ ಆಟಗಾರರು ತಂಡದ ಜೆರ್ಸಿ ತೊಟ್ಟುಕೊಂಡು ಬಂದಿದ್ದರೆ ಭಾರತದ ಆಟಗಾರರು ವಿಭಿನ್ನ ಉಡುಗೆಯಲ್ಲಿ ಬಂದಿದ್ದರು.

ಟ್ರೋಫಿ ಪ್ರದಾನ ಸಮಾರಂಭಕ್ಕೆ ಗಾವಸ್ಕರ್ ಇಲ್ಲ

ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ 2–1ರಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಆತಿಥೇಯರು ಗೆದ್ದರೂ ಟ್ರೋಫಿ ಭಾರತದ ಕೈತಪ್ಪುವುದಿಲ್ಲ. ಆದರೆ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಗಾವಸ್ಕರ್ ಇರುವುದಿಲ್ಲ!

‘ಟ್ರೋಫಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮೇ ಆರಂಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಕೋರಿತ್ತು. ಆದರೆ ನಂತರ ಯಾವುದೇ ಮಾಹಿತಿ ನೀಡಲಿಲ್ಲ. ಈಗ ಕಾಲ ಮಿಂಚಿದೆ. ಇನ್ನು ಕರೆದರೂ ನನಗೆ ಹೋಗಲು ಆಗುವುದಿಲ್ಲ’ ಎಂದು ಗಾವಸ್ಕರ್ ತಿಳಿಸಿದ್ದಾರೆ.

ವಿರಾಟ್ ಬಳಗಕ್ಕೆ ಸತತ ಸರಣಿಗಳು

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎದುರಿನ ಸರಣಿಗಳ ನಂತರವೂ ಭಾರತ ಕ್ರಿಕೆಟ್ ತಂಡಕ್ಕೆ ವಿಶ್ರಾಂತಿ ಇಲ್ಲ. ವಿಶ್ವಕಪ್‌ಗೆ ಮೊದಲು ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ವಿರುದ್ಧ ಸರಣಿಗಳಲ್ಲಿ ಪಾಲ್ಗೊಳ್ಳಲಿರುವ ತಂಡ ವಿಶ್ವಕಪ್ ನಂತರ ಡಿಸೆಂಬರ್ ವರೆಗೂ ನಿರಂತರ ಸರಣಿಗಳಲ್ಲಿ ಆಡಲಿದೆ.

ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಎದುರು ಪಂದ್ಯಗಳನ್ನು ಆಡಲಿದೆ.

***

ಪಂದ್ಯ ಆರಂಭ: ಗುರುವಾರ ಬೆಳಿಗ್ಗೆ 5.00

(ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !