ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI: ಸರಣಿ ಸಮಬಲದತ್ತ ಹಾರ್ದಿಕ್ ಚಿತ್ತ

ಏಳು ವರ್ಷದ ನಂತರ ಸರಣಿ ಜಯಿಸುವ ಹುಮ್ಮಸ್ಸಿನಲ್ಲಿ ವಿಂಡೀಸ್
Published 11 ಆಗಸ್ಟ್ 2023, 12:58 IST
Last Updated 11 ಆಗಸ್ಟ್ 2023, 12:58 IST
ಅಕ್ಷರ ಗಾತ್ರ

ಲಾಡೆರ್‌ಹಿಲ್, ಅಮೆರಿಕ: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ಟ್ವೆಂಟಿ20 ಕ್ರಿಕೆಟ್ ಸರಣಿಯು ಈಗ ಕುತೂಹಲ ಘಟ್ಟ ತಲುಪಿದೆ. ಈ ರೋಚಕತೆಯನ್ನು ಕಣ್ತುಂಬಿಕೊಳ್ಳಲು ಅಮೆರಿಕದ ಕ್ರಿಕೆಟ್‌ಪ್ರಿಯರು ಸಜ್ಜಾಗಿದ್ದಾರೆ.

ಶನಿವಾರ ಇಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಛಲದಲ್ಲಿ ಭಾರತವಿದೆ. ಇನ್ನೊಂದೆಡೆ  2–1ರಿಂದ ಮುಂದಿರುವ ಆತಿಥೇಯ ತಂಡವು ಈ ಪಂದ್ಯದಲ್ಲಿ ಜಯಭೇರಿ ಬಾರಿಸಿ ಸರಣಿ ಜಯದ ಸಂಭ್ರಮ ಆಚರಿಸುವ ಹಮ್ಮಸ್ಸಿನಲ್ಲಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಹಾರ್ದಿಕ್ ಪಾಂಡ್ಯ ಬಳಗವು ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಗೆದ್ದಿತ್ತು. ಆದರೆ ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್ ಕೇವಲ 1 ರನ್ ಗಳಿಸಿ ಔಟಾಗಿದ್ದರು.

ಆದರೂ ಅವರಿಗೆ ಮತ್ತೊಂದು ಅವಕಾಶ ಕೊಡುವ ಸಾಧ್ಯತೆ ಇದೆ. ಅವರು ಮತ್ತು ಶುಭಮನ್ ಗಿಲ್ ಲಯಕ್ಕೆ ಮರಳಿದರೆ ಉತ್ತಮ ಆರಂಭ ಸಿಗುವುದು ಖಚಿತ. ಸೂರ್ಯ ಮತ್ತು ತಿಲಕ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದರಿಂದಾಗಿ ದೊಡ್ಡ ಮೊತ್ತ ಗಳಿಸುವುದು ಕಷ್ಟವೇನಲ್ಲ.

ಬೌಲಿಂಗ್‌ನಲ್ಲಿಯೂ ಹೆಚ್ಚಿನ ಚಿಂತೆಯಿಲ್ಲ. ಸ್ಪಿನ್ನರ್‌ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್,  ವೇಗಿ ಆರ್ಷದೀಪ್ ಸಿಂಗ್ ಮತ್ತು ಮುಕೇಶ್ ಕುಮಾರ್ ಪಂದ್ಯಕ್ಕೆ ವಿಜಯದ ಕಾಣಿಕೆ ನೀಡುವ ಸಮರ್ಥರು. ಆದರೆ, ಅವರನ್ನು ಇನಿಂಗ್ಸ್‌ನ ಸೂಕ್ತ ಸಂದರ್ಭದಲ್ಲಿ ದಾಳಿಗಿಳಿಸುವ ಜಾಣ್ಮೆಯನ್ನು ನಾಯಕ ಹಾರ್ದಿಕ್ ತೋರಿದರೆ ಫಲ ಖಚಿತ.

ಆತಿಥೇಯ ತಂಡದ ನಾಯಕ ರೋವ್ಮನ್ ಪೊವೆಲ್ ಹಾಗೂ ನಿಕೊಲಸ್ ಪೂರನ್ ಅವರು ಅದ್ಭುತ ಲಯದಲ್ಲಿದ್ದಾರೆ. ಎದುರಾಳಿ ತಂಡದಿಂದ ಜಯದ ಅವಕಾಶವನ್ನು ಕಿತ್ತುಕೊಳ್ಳುವ ಸಮರ್ಥರೂ ಹೌದು. ಶಿಮ್ರಾನ್ ಹೆಟ್ಮೆಯರ್, ಕೈಲ್ ಮೇಯರ್ಸ್ ಮತ್ತು ಶೈ ಹೋಪ್ ಅವರು ತಮ್ಮ ಲಯಕ್ಕೆ ಮರಳಿದರೆ ಭಾರತದ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು.

2016ರಿಂದ ಇಲ್ಲಿಯವರೆಗೆ ವಿಂಡೀಸ್ ತಂಡವು ಭಾರತದ ಎದುರು ಟಿ20 ಕ್ರಿಕೆಟ್ ಸರಣಿಯನ್ನು ಗೆದ್ದಿಲ್ಲ. ಈಗ ಸಿಕ್ಕಿರುವ ಅವಕಾಶವನ್ನು ಫಲಪ್ರದಗೊಳಿಸುವತ್ತ ಚಿತ್ತ ನೆಟ್ಟಿದೆ.

ಪಿಚ್ ಹೇಗಿದೆ?

ಪಂದ್ಯದ ಆರಂಭದಲ್ಲಿ ಇಲ್ಲಿಯ ಪಿಚ್‌ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಪಂದ್ಯ ಮುಂದುವರೆದಂತೆ ಬೌಲರ್‌ಗಳ ಕೌಶಲಕ್ಕೆ ಫಲ ನೀಡಬಹುದು.  ಆದ್ದರಿಂದ ಬ್ಯಾಟರ್‌ಗಳು ಕೊನೆಯ ಹಂತದ ಓವರ್‌ಗಳಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಾಗಬಹುದು.

ಪಂದ್ಯ ಅರಂಭ: ರಾತ್ರಿ 8ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT