ಮಂಗಳವಾರ, ಅಕ್ಟೋಬರ್ 15, 2019
22 °C
ಪುಣೆಯಲ್ಲಿ ಎರಡನೇ ಟೆಸ್ಟ್ ಇಂದಿನಿಂದ; ರೋಹಿತ್‌, ಮಯಂಕ್ ಮೇಲೆ ಭರವಸೆ

ಸರಣಿ ಜಯದ ಹುಮ್ಮಸ್ಸಿನಲ್ಲಿ ಭಾರತ

Published:
Updated:
prajavani

ಪುಣೆ: ಭಾರತ ತಂಡವನ್ನು ತವರಿನಲ್ಲಿ ಬಗ್ಗುಬಡಿಯುವುದು ಸುಲಭವಲ್ಲ. ಅಷ್ಟೇ ಅಲ್ಲ, ಭಾರತದ ವಿರುದ್ಧ ಸೋಲನ್ನು ತಪ್ಪಿಸಿಕೊಳ್ಳುವುದೂ ಸುಲಭವಲ್ಲ ಎಂಬುದನ್ನು ವಿಶಾಖಪಟ್ಟಣ ಟೆಸ್ಟ್‌ ತೋರಿಸಿಕೊಟ್ಟಿದೆ. ಆ ಟೆಸ್ಟ್‌ನಲ್ಲಿ ಟಾಸ್‌ ಸೋತ ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್‌ನಲ್ಲಿ 431 ರನ್‌ಗಳ ದೊಡ್ಡ ಮೊತ್ತ ಹೊಡೆಯಿತು. ಆ ತಂಡದ ಮೊದಲ ಇನಿಂಗ್ಸ್‌ ನಾಲ್ಕನೇ ದಿನಕ್ಕೆ ಬೆಳೆಯಿತು. ಆದರೂ ಪ್ರವಾಸಿ ತಂಡ 203 ರನ್‌ಗಳ ಭಾರಿ ಅಂತರದಿಂದ ಸೋಲನುಭವಿಸಿತು.

ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್‌ ಗುರುವಾರ ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಭಾರತ ಈ ಟೆಸ್ಟ್‌ ಪಂದ್ಯದಲ್ಲೇ ಗೆದ್ದು ಮೂರು ಟೆಸ್ಟ್‌ಗಳ ಸರಣಿಯಲ್ಲಿ ಗೆಲುವಿನ ಮುನ್ನಡೆ ಸಾಧಿಸುವ ಹುಮ್ಮಸ್ಸಿನಲ್ಲಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ, ದೊಡ್ಡ ಸೋಲಿನಲ್ಲೂ ಕೆಲವು ಸಕಾರಾತ್ಮಕ ಅಂಶಗಳ ಮೇಲೆ ವಿಶ್ವಾಸ ಕಂಡುಕೊಳ್ಳುವ ಯತ್ನದಲ್ಲಿದೆ.

ಭಾರತ 2013ರ ನಂತರ ಸೋತ ಏಕೈಕ ಟೆಸ್ಟ್‌ ಪುಣೆಯಲ್ಲಿ ನಡೆದಿತ್ತು. 2017ರ ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್‌ ಸ್ಟೀವ್‌ ಒ‘ಕೀಫ್‌ ಆ ಪಂದ್ಯದಲ್ಲಿ ಅಮೋಘ ಸಾಧನೆ ತೋರಿ 12 ವಿಕೆಟ್‌ ಪಡೆದಿದ್ದರು. ಸ್ಟೀವ್‌ ಸ್ಮಿತ್‌ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.  ಸದ್ಯದ ಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡದಿಂದ ಅಂಥ ಪ್ರದರ್ಶನ ನಿರೀಕ್ಷಿಸುವುದು ಕಷ್ಟ. ಪುಣೆಯಲ್ಲಿ ನಡೆದಿರುವ ಏಕೈಕ ಟೆಸ್ಟ್‌ ಅದಾಗಿತ್ತು. ತವರಿನಲ್ಲಿ ಭಾರತ ತಂಡ ಆ ರೀತಿಯ ಕುಸಿತ ಕಂಡಿದ್ದೂ ಅದೇ ಕೊನೆಯ ಬಾರಿಯಾಗಿತ್ತು. 

ದಕ್ಷಿಣ ಆಫ್ರಿಕ, ನಾಯಕನಿಂದಲೂ ಅದೃಷ್ಟ ಬಯಸುತ್ತಿದೆ. ಅವರು ಏಷ್ಯ ಉಪಖಂಡದಲ್ಲಿ ಸತತ ಎಂಟು ಟಾಸ್‌ಗಳನ್ನು ಸೋತಿದ್ದಾರೆ. ವಿಶಾಖಪಟ್ಟಣದಲ್ಲಿ ಟಾಸ್‌ ಸೋತಾಗ ಅವರ ಪದಗಳಿಗಿಂತ ಮುಖಭಾವವೇ ಎಲ್ಲ ಹೇಳುವಂತಿತ್ತು.

ಭಾರತ ತಂಡದಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ. ರೋಹಿತ್‌ ಶರ್ಮಾ ಅವರನ್ನು ಮರಳಿ ಆರಂಭ ಆಟಗಾರನಾಗಿ ಕಣಕ್ಕಿಳಿಸುವ ಚಿಂತಕರ ಚಾವಡಿಯ ಲೆಕ್ಕಾಚಾರ. ಮೊದಲ ಟೆಸ್ಟ್‌ನಲ್ಲಿ ಒಳ್ಳೆಯ ಫಲಿತಾಂಶ ಕೊಟ್ಟಿದೆ. ಅವರು ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದರು. ಮಯಂಕ್‌ ಅಗರವಾಲ್‌ ಕೂಡ ಚೊಚ್ಚಲ ದ್ವಿಶತಕ ಬಾರಿಸಿದ್ದಾರೆ. ಆ ಮೂಲಕ ಸದ್ಯಕ್ಕೆ ಭಾರತದ ‘ಓಪನಿಂಗ್ ಸಮಸ್ಯೆ’ ಪರಿಹಾರ ದೊರೆತಂತಾಗಿದೆ.

ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ಅವರಿರುವ ಬ್ಯಾಟಿಂಗ್ ಕ್ರಮಾಂಕ ಪ್ರಬಲವಾಗಿದೆ. ಕೊಹ್ಲಿ ಎಂದಿನ ಲಯ ಕಂಡುಕೊಳ್ಳಬೇಕಿದೆ. 2018ರ ಬಾಕ್ಸಿಂಗ್‌ ಡೇ ಟೆಸ್ಟ್ ನಂತರ ಐದು ಟೆಸ್ಟ್‌ಗಳಲ್ಲಿ (ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್‌ ವಿರುದ್ಧ ತಲಾ 2 ಟೆಸ್ಟ್‌, ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಟೆಸ್ಟ್‌ ಸೇರಿ) ಅವರು ಶತಕ ಗಳಿಸಲು ಸಾಧ್ಯವಾಗಿಲ್ಲ. ಈ ಐದು ಪಂದ್ಯಗಳಲ್ಲಿ ಅವರ 36.50 ಸರಾಸರಿ ಹೊಂದಿದ್ದಾರೆ. ಕೊಹ್ಲಿ ಮಟ್ಟಿಗೆ ಹೀಗಾಗಿರುವುದು ಅಪರೂಪ. ಹೀಗಾಗಿ ಅವರೂ ದೊಡ್ಡ ಇನಿಂಗ್ಸ್‌ ಆಡುವ ಬಯಕೆಯಲ್ಲಿದ್ದಾರೆ.

ಈ ಬಾರಿ, 2017ರಂತೆ ತಿರುವು ನೀಡುವ ಪಿಚ್‌ ಇರುವ ಸಾಧ್ಯತೆ ಕಡಿಮೆ. ಅಂಥ ಪಿಚ್‌ ಇದ್ದರೂ ಭಾರತ ರವಿಚಂದ್ರನ್‌ ಅಶ್ವಿನ್‌ ಮತ್ತು ರವೀಂದ್ರ ಜಡೇಜಾ, ಪ್ರವಾಸಿ ತಂಡದವರನ್ನು ಕಾಡುವುದು ಖಚಿತ. ತವರಿನಲ್ಲಿ ಇವರಿಬ್ಬರು ಸ್ವಲ್ಪ ನೆರವು ನೀಡುವ ಪಿಚ್‌ನಲ್ಲೂ ಯಶಸ್ಸು ಸಾಧಿಸುತ್ತ ಬಂದಿದ್ದಾರೆ.

ವೇಗದ ಬೌಲರ್‌ ಮೊಹಮ್ಮದ್ ಶಮಿ ಕೂಡ ಹಳೆಯ ಚೆಂಡಿನಲ್ಲಿ ಚಮತ್ಕಾರ ಮೆರೆಯುತ್ತಿರುವುದು ತಂಡದ ಹುಮ್ಮಸ್ಸು ಹೆಚ್ಚಿಸಿದೆ. ಇಶಾಂತ್‌ ಶರ್ಮಾ ಹೆಚ್ಚಿನ ಯಶಸ್ಸು ಗಳಿಸದಿದ್ದರೂ ಬಿಗುವಾಗಿಯೇ ಬೌಲಿಂಗ್‌ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜಸ್‌ಪ್ರೀತ್‌ ಬೂಮ್ರಾ ಅವರ ಅನುಪಸ್ಥಿತಿ ಮೊದಲ ಟೆಸ್ಟ್‌ನಲ್ಲಿ ಹೆಚ್ಚು ಗೊತ್ತಾಗಲಿಲ್ಲ.

ಆರಂಭ ಆಟಗಾರ ಡೀನ್‌ ಎಲ್ಗರ್‌ ಮತ್ತು ಆಕರ್ಷಕ ಆಟಗಾರ ಕ್ವಿಂಟನ್‌ ಡಿಕಾಕ್‌ ಮೊದಲ ಟೆಸ್ಟ್‌ನಲ್ಲಿ ಶತಕ ಹೊಡೆಯುವ ಹಾದಿಯಲ್ಲಿ ಸಂಯಮ ಪ್ರದರ್ಶಿಸಿದ್ದರು. ಆದರೆ ಈ ಪಿಚ್‌ನಲ್ಲಿ ಅಂಥ ಆಟ ಸಾಧ್ಯವಾಗುವುದೇ ಎಂಬ ಕುತೂಹಲವಿದೆ. 

ದಕ್ಷಿಣ ಆಫ್ರಿಕಾ ತಂಡ ಸೆನುರಾನ್‌ ಮುತ್ತುಸ್ವಾಮಿ ಮತ್ತು ಡೇನ್‌ ಪೀಟ್ ಅವರನ್ನು ಕೈಬಿಡುವ ಪ್ರಲೋಭನೆಗೆ ಒಳಗಾಗಬಹುದು. ಇವರಿಬ್ಬರನ್ನು ಭಾರತ ಬ್ಯಾಟ್ಸಮನ್ನರು ಚೆನ್ನಾಗಿ ದಂಡಿಸಿದ್ದರು. ರೋಹಿತ್‌ ಶರ್ಮಾ ಅವರಂತೂ ದಾಖಲೆಯ 13 ಸಿಕ್ಸರ್‌ಗಳನ್ನು ಎತ್ತಿದ್ದರು. ಮುತ್ತುಸ್ವಾಮಿ ಬದಲಿಗೆ ಜುಬೇರ್‌ ಹಂಝ ಮತ್ತು ಪೀಟ್‌ ಬದಲಿಗೆ ಇನ್ನೊಬ್ಬ ವೇಗಿ ಲುಂಗಿ ಗಿಡಿ ಅವಕಾಶ ಪಡೆಯುವ ನಿರೀಕ್ಷೆಯಿದೆ.

ತಂಡಗಳು

ಭಾರತ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ. ಮಯಂಕ್‌ ಅಗರವಾಲ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜ, ರವಿಚಂದ್ರನ್‌ ಅಶ್ವಿನ್‌, ಇಶಾಂತ್‌ ಶರ್ಮಾ ಮತ್ತು ಮೊಹಮ್ಮದ್‌ ಶಮಿ.

ದಕ್ಷಿಣ ಆಫ್ರಿಕಾ: ಫಾಫ್‌ ಡು ಪ್ಲೆಸಿ (ನಾಯಕ), ಡೀನ್‌ ಎಲ್ಗರ್‌, ಏಡನ್‌ ಮರ್ಕರಮ್‌, ಥಿಯುನಿಸ್‌ ಡಿ ಬ್ರಯಿನ್‌, ತೆಂಬಾ ಬವುಮಾ, ಕ್ವಿಂಟನ್‌ ಡಿಕಾಕ್‌ (ವಿಕೆಟ್‌ ಕೀಪರ್‌), ಕಗಿಸೊ ರಬಾಡಾ, ಕೇಶವ ಮಹಾರಾಜ್‌, ವೆರ್ನಾನ್‌ ಫಿಲಾಂಡರ್‌, ಲುಂಗಿ ಗಿಡಿ, ಡೇನ್‌ ಪೀಟ್‌, ಸೆನುರಾನ್‌ ಮುತ್ತುಸ್ವಾಮಿ, ಜುಬೇರ್‌ ಹಂಝಾ, ಹೆನ್ರಿಚ್‌ ಕ್ಲಾಸೆನ್‌ ಮತ್ತು ಅನ್ರಿಚ್‌ ನೋರ್ಟ್ಯೆ.

ಪಂದ್ಯ ಆರಂಭ: ಬೆಳಿಗ್ಗೆ 9.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

Post Comments (+)