ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸರಣಿ ಗೆಲ್ಲುವ ತವಕ

ಐದನೇ ಏಕದಿನ ಕ್ರಿಕೆಟ್ ಪಂದ್ಯ: ಸಮಬಲ ಸಾಧಿಸಲು ವೆಸ್ಟ್ ಇಂಡೀಸ್ ತಂಡದ ಹಂಬಲ
Last Updated 31 ಅಕ್ಟೋಬರ್ 2018, 20:23 IST
ಅಕ್ಷರ ಗಾತ್ರ

ತಿರುವನಂತಪುರ: ಸರಿಯಾಗಿ ಒಂದು ವರ್ಷದ ನಂತರ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಕಲರವ. ಭಾರತ ಮತ್ತು ವೆಸ್ಟ್ ಇಂಡೀಸ್‌ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಗುರುವಾರ ಇಲ್ಲಿ ನಡೆಯಲಿದೆ. ಕಳೆದ ವರ್ಷ ನವೆಂಬರ್‌ ಏಳರಂದು ಇಲ್ಲಿ ಮೊತ್ತ ಮೊದಲ ಅಂತರರಾಷ್ಟ್ರೀಯ ಪಂದ್ಯ ನಡೆದಿತ್ತು. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಅಂದು ಸೆಣಸಿದ್ದವು.

ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1ರ ಮುನ್ನಡೆ ಸಾಧಿಸಿದೆ. ಆದ್ದರಿಂದ ಇಲ್ಲಿ ಗೆದ್ದರೆ ಮಾತ್ರ ಸರಣಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯ. ವೆಸ್ಟ್ ಇಂಡೀಸ್‌ಗೆ ಸರಣಿಯಲ್ಲಿ ಸಮಬಲ ಸಾಧಿಸಲು ಗೆಲುವು ಅನಿವಾರ್ಯ.

ಸರಣಿ ಈ ವರೆಗೆ ಕುತೂಹಲಕಾರಿಯಾಗಿ ಸಾಗಿದೆ. ಮೊದಲ ಪಂದ್ಯದಲ್ಲಿ ಎಂಟು ವಿಕೆಟ್‌ ಅಂತರದಲ್ಲಿ ಪ್ರವಾಸಿ ತಂಡ ಎರಡನೇ ಪಂದ್ಯದಲ್ಲಿ ಅನಿರೀಕ್ಷಿತ ತಿರುಗೇಟು ನೀಡಿತ್ತು. 321 ರನ್‌ಗಳ ಮೊತ್ತವನ್ನು ಬೆನ್ನತ್ತಿ ಪಂದ್ಯ ಟೈ ಮಾಡಿಕೊಂಡಿತ್ತು. ಮೂರನೇ ಪಂದ್ಯದಲ್ಲಿ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿ ಗೆಲುವು ಸಾಧಿಸಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಆತಿಥೇಯರು ಬಲವಾದ ಪೆಟ್ಟು ನೀಡಿ 224 ರನ್‌ಗಳಿಂದ ಗೆದ್ದಿತ್ತು.

ಹೀಗಾಗಿ ನಿರ್ಣಾಯಕವಾಗಿರುವ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ‍ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ. ಮುಂದಿನ ವಿಶ್ವಕಪ್ ಟೂರ್ನಿಗೂ ಮೊದಲು ಇನ್ನು ಒಂದು ಸರಣಿ ಮಾತ್ರ ಭಾರತದ ಮುಂದೆ ಇದೆ. ಇಲ್ಲಿ ಪ್ರಶಸ್ತಿ ಗೆದ್ದರೆ ಆ ಸರಣಿಗೆ ಭಾರತ ವಿಶ್ವಾಸದಿಂದ ಸಜ್ಜಾಗಬಹುದಾಗಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಂಬಟಿ ರಾಯುಡು ಕೂಡ ಭರವಸೆಯಿಂದ ಮುಂದೆ ಸಾಗುತ್ತಿದ್ದಾರೆ. ಆದರೆ ಶಿಖರ್ ಧವನ್‌ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಕಳಪೆ ಆಟ ಭಾರತ ತಂಡದ ಚಿಂತೆಗೆ ಕಾರಣವಾಗಿದೆ. 10 ಸಾವಿರ ರನ್ ಪೂರ್ತಿಗೊಳಿಸಲು ಮಹೇಂದ್ರ ಸಿಂಗ್ ಧೋನಿ ಅವರಿಗೆ ಒಂದು ರನ್ ಅಗತ್ಯವಿದೆ. ಭರ್ಜರಿ ಬ್ಯಾಟಿಂಗ್ ಮೂಲಕ ಈ ಮಹತ್ವದ ಮೈಲಿಗಲ್ಲನ್ನು ಅವರು ದಾಟುವರು ಎಂಬ ವಿಶ್ವಾಸದಲ್ಲಿದ್ದಾರೆ ಕೇರಳದ ಕ್ರಿಕೆಟ್ ಪ್ರೇಮಿಗಳು.

ಜಸ್‌ಪ್ರೀತ್‌ ಬೂಮ್ರಾ ಬಲ: ಜಸ್‌ಪ್ರೀತ್ ಬೂಮ್ರಾ ತಂಡಕ್ಕೆ ಮರಳಿರುವುದರಿಂದ ಭಾರತ ಬೌಲಿಂಗ್‌ಗೆ ಬಲ ಬಂದಿದೆ. ಎರಡು ಪಂದ್ಯಗಳಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಆದರೆ ಭುವನೇಶ್ವರ್ ಕುಮಾರ್‌ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಗುರುವಾರದ ಪಂದ್ಯದಲ್ಲಿ ಅವರು ಮಿಂಚಿದರೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಬಳಗ ಸಂಕಷ್ಟಕ್ಕೆ ಒಳಗಾಗಲಿದೆ. ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌ ಮತ್ತು ರವೀಂದ್ರ ಜಡೇಜ ಸ್ಪಿನ್ ವಿಭಾಗದ ಶಕ್ತಿ ಎನಿಸಿದ್ದಾರೆ.

ವೆಸ್ಟ್ ಇಂಡೀಸ್‌ನ ಶಿಮ್ರಾನ್ ಹೆಟ್ಮೆಯರ್ ಮತ್ತು ಶಾಯ್‌ ಹೋಪ್‌ ಅವರು ಭಾರತದ ಬೌಲಿಂಗ್‌ ವಿಭಾಗಕ್ಕೆ ತಲೆನೋವಾಗಿದ್ದಾರೆ. ನಾಯಕ್ ಜೇಸನ್ ಹೋಲ್ಡರ್‌ ಹಾಗೂ ಆಲ್‌ರೌಂಡರ್‌ ಆ್ಯಶ್ಲೆ ನರ್ಸ್‌ ಯಾವುದೇ ಕ್ಷಣದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT