ಭಾರತ ತಂಡದ ವಿರುದ್ಧ ಟೀಕೆಗಳ ಸುರಿಮಳೆ

7
ಇಂಗ್ಲೆಂಡ್‌ ಎದುರಿನ ಮೊದಲೆರೆಡು ಟೆಸ್ಟ್‌ ಪಂದ್ಯಗಳಲ್ಲಿ ಸೋಲು

ಭಾರತ ತಂಡದ ವಿರುದ್ಧ ಟೀಕೆಗಳ ಸುರಿಮಳೆ

Published:
Updated:

ನವದೆಹಲಿ: ಇಂಗ್ಲೆಂಡ್‌ ವಿರುದ್ದದ ಮೊದಲೆರೆಡು ಟೆಸ್ಟ್‌ ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಭಾರತ ತಂಡದ ವಿರುದ್ಧ ಹಿರಿಯ ಕ್ರಿಕೆಟ್‌ ಆಟಗಾರರು ಟೀಕೆ ವ್ಯಕ್ತಪಡಿಸಿದ್ದಾರೆ. 

ಭಾನುವಾರ ಮುಕ್ತಾಯಗೊಂಡ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡವು ಇನಿಂಗ್ಸ್‌ ಮತ್ತು 159 ರನ್‌ಗಳಿಂದ ಭಾರತ ತಂಡವನ್ನು ಮಣಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–0ಯ ಮುನ್ನಡೆ ಗಳಿಸಿತು.

‘ಭಾರತ ನಿಜಕ್ಕೂ ಕಳಪೆ ಆಟವಾಡಿತು. ಯಾವುದೇ ರೀತಿಯ ಹೋರಾಟ ನೀಡದೆ ಸೋಲು ಒಪ್ಪಿಕೊಂಡಿದ್ದು ನಿರಾಸೆ ತರಿಸಿತು. ಮುಂದಿನ ಪಂದ್ಯಗಳಲ್ಲಿ ತಿರುಗೇಟು ನೀಡುವ ಎಲ್ಲ ಸಾಮರ್ಥ್ಯ ಹಾಗೂ ಆತ್ಮವಿಶ್ವಾದ ತಂಡದ ಆಟಗಾರರಲ್ಲಿದೆ’ ಎಂದು ವಿರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದ ಇನ್ನೊಬ್ಬ ಹಿರಿಯ ಆಟಗಾರ ಬಿಶನ್‌ ಸಿಂಗ್‌ ಬೇಡಿ, ‘ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಇಷ್ಟು ಹೀನಾಯವಾಗಿ ಸೋಲು ಅನುಭವಿಸಿದ್ದು ಖೇದಕರ. ಹೋರಾಟದ ಮನೋಭವಾವವನ್ನೇ ಆಟಗಾರರು ಮರೆತಿದ್ದಾರೆ ಎಂಬ ಭಾವನೆ ಮೂಡುತ್ತಿದೆ’ ಎಂದಿದ್ದಾರೆ. 

‘ಆಗಸ್ಟ್‌ 18ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್‌ ಪಂದ್ಯದ ಮುನ್ನ ಹಿಂದಿನ ಪಂದ್ಯಗಳಲ್ಲಿ ಎಸಗಿದ ತಪ್ಪುಗಳನ್ನು ಆಟಗಾರರು ತಿದ್ದಿಕೊಳ್ಳಬೇಕು. ಕೇವಲ ವಿರಾಟ್‌ ಕೊಹ್ಲಿ ಅವರ ಮೇಲೆ ಅವಲಂಬಿತರಾಗುವುದು ಒಳ್ಳೆಯದಲ್ಲ. ಇನ್ನಿತರ ಬ್ಯಾಟ್ಸ್‌ಮನ್‌ಗಳು ತಮ್ಮ ಜವಾಬ್ದಾರಿ ಅರಿತು ಆಡಬೇಕು’ ಎಂದು ವಿವಿಎಸ್‌ ಲಕ್ಷ್ಮಣ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. 

***

‘ಆ್ಯಂಡರ್ಸನ್‌ ವಿಶೇಷ ಸಾಮರ್ಥ್ಯದ ಬೌಲರ್‌’
ಲಂಡನ್‌ (ಪಿಟಿಐ):
‘ತಮ್ಮ ಅಮೋಘ ವೇಗದ ದಾಳಿಯಿಂದ ಎದುರಾಳಿ ತಂಡದ ಆಟಗಾರರನ್ನು ಕಟ್ಟಿಹಾಕುವ ಜೇಮ್ಸ್‌ ಆ್ಯಂಡರ್ಸನ್‌ ಅವರು ವಿಶೇಷ ಸಾಮರ್ಥ್ಯ ಹೊಂದಿರುವ ಬೌಲರ್‌’ ಎಂದು ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಶ್ಲಾಘಿಸಿದ್ದಾರೆ. 

36 ವರ್ಷದ ಜೇಮ್ಸ್‌, ಭಾನುವಾರ 4 ವಿಕೆಟ್‌ ಪಡೆದರು. ಈ ಮೂಲಕ ಲಾರ್ಡ್ಸ್‌ ಅಂಗಳದಲ್ಲಿ 100 ವಿಕೆಟ್‌ ಕಬಳಿಸಿದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆ ಗಳಿಸಿದರು. ಸದ್ಯ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 553 ವಿಕೆಟ್‌ಗಳನ್ನು ಪಡೆದಿದ್ದಾರೆ. ‘ಮಳೆ ಬಿದ್ದ ಪರಿಣಾಮ ವೇಗದ ಬೌಲರ್‌ಗಳಿಗೆ ಪಿಚ್‌ ಅನುಕೂಲಕರವಾಗಿದ್ದು ನಿಜ. ಆದರೆ, ನಿಖರ ದಾಳಿ ಮುಖ್ಯ. ಜಿಮ್ಮಿ ಅವರ ಬೌಲಿಂಗ್‌ ನೋಡಲು ಖುಷಿಯಾಗುತ್ತದೆ. ವಯಸ್ಸು ಹೆಚ್ಚಾದಂತೆ ಅವರ ಬೌಲಿಂಗ್‌ ದಾಳಿಯು ಮತ್ತಷ್ಟು ಪರಿಣಾಮಕಾರಿಯಾಗುತ್ತಿದೆ’ ಎಂದು ರೂಟ್‌ ಅಭಿಪ್ರಾಯಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !