ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಹಿಟ್‌ಮ್ಯಾನ್‌‘ ರೋಹಿತ್ ನಾಯಕತ್ವಕ್ಕೆ ಮುನ್ನುಡಿ

ಭಾರತ–ನ್ಯೂಜಿಲೆಂಡ್ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಇಂದು; ವೆಂಕಟೇಶ್ ಅಯ್ಯರ್‌ಗೆ ಅವಕಾಶ ಸಾಧ್ಯತೆ
Last Updated 16 ನವೆಂಬರ್ 2021, 17:49 IST
ಅಕ್ಷರ ಗಾತ್ರ

ಜೈಪುರ: ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಮತ್ತು ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕರಾಗಿ ಹೊಸ ಇನಿಂಗ್ಸ್‌ ಆರಂಭಿಸಲು ಜೈಪುರದ ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

ಬುಧವಾರ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡವು ರೋಹಿತ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಹೋದ ಜೂನ್ 3ರಿಂದ ನವೆಂಬರ್‌ 12ರವರೆಗೂ ತವರಿನಿಂದ ಹೊರಗಿದ್ದ ಭಾರತ ತಂಡವು ಈ ಸರಣಿಯಲ್ಲಿ ಆಡಲಿದೆ. ಈ ಅವಧಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌, ಇಂಗ್ಲೆಂಡ್ ಪ್ರವಾಸ, ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಎರಡನೇ ಹಂತ ಮತ್ತು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಆಡಿ ಸಿಹಿ–ಕಹಿ ಫಲಿತಾಂಶಗಳೊಂದಿಗೆ ಮರಳಿದೆ.

ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದು ಕೂಡ ಇದೇ ಅವಧಿಯಲ್ಲಿ. ರವಿಶಾಸ್ತ್ರ ಮುಖ್ಯ ಕೋಚ್ ಕಾರ್ಯಾವಧಿ ಕೂಡ ಈಚೆಗೆ ಮುಕ್ತಾಯವಾಯಿತು. ಆದರೆ, ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಹೀನಾಯ ಸೋಲು ಅನುಭವಿಸಿದೆ. ಅದರಿಂದಾಗಿ ಕಿವೀಸ್ ವಿರುದ್ಧದ ಸರಣಿಯಲ್ಲಿ ತಂಡದ ಪ್ರದರ್ಶನದ ಬಗ್ಗೆ ಕುತೂಹಲ ಕೆರಳಿದೆ.

ಐಪಿಎಲ್‌ನಲ್ಲಿ ಮಿಂಚಿದ್ದ ಯುವಪ್ರತಿಭೆಗಳಾದ ಋತುರಾಜ್ ಗಾಯಕವಾಡ್, ವೆಂಕಟೇಶ್ ಅಯ್ಯರ್ ಮತ್ತು ಹರ್ಷಲ್ ಪಟೇಲ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಮೆರೆಯುವ ಅವಕಾಶ ದೊರೆಯಲಿದೆ. ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆಯದ ಬೇಸರದಲ್ಲಿದ್ದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡ ತಂಡದಲ್ಲಿದ್ದಾರೆ. ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಕೂಡ ಬಳಗದಲಿದ್ದಾರೆ. ವಿರಾಟ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಅವರು ವಿಶ್ರಾಂತಿ ಪಡೆದಿರುವುದರಿಂದ ಯುವ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ನ್ಯೂಜಿಲೆಂಡ್ ತಂಡವು ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತು ಭಾರತಕ್ಕೆ ಬಂದಿದೆ. ಕೇನ್ ವಿಲಿಯಮ್ಸನ್ ವಿಶ್ರಾಂತಿ ಪಡೆದಿರುವುದರಿಂದ ವೇಗಿ ಟಿಮ್ ಸೌಥಿ ತಂಡವನ್ನು ಮುನ್ನಡೆಸುವರು. ಮಾರ್ಟಿನ್ ಗಪ್ಟಿಲ್, ನಿಶಾಮ್, ಡೆರಿಲ್ ಮಿಷೆಲ್ ಉತ್ತಮ ಲಯದಲ್ಲಿರುವುದರಿಂದ ಬ್ಯಾಟಿಂಗ್ ವಿಭಾಗವು ಬಲಿಷ್ಠವಾಗಿದೆ. ಮಿಚೆಲ್ ಸ್ಯಾಂಟನರ್ ಮತ್ತು ಈಶ್ ಸೋಧಿ ಭಾರತದ ನೆಲದಲ್ಲಿ ತಮ್ಮ ಸ್ಪಿನ್ ಮೋಡಿ ತೋರಲು ಸಿದ್ಧರಾಗಿದ್ದಾರೆ.

ಪಿಚ್‌ ಮತ್ತು ಟಾಸ್..

ಇಲ್ಲಿಯ ಕ್ರೀಡಾಂಗಣದ ಪಿಚ್‌ ಬಹಳಷ್ಟು ಪಂದ್ಯಗಳಲ್ಲಿ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡಿದೆ. ಈ ಬಾರಿಯೂ ರನ್‌ಗಳ ಹೊಳೆ ಹರಿಯುವ ನಿರೀಕ್ಷೆ ಇದೆ.

ಪಂದ್ಯವು ರಾತ್ರಿ ಏಳುಗಂಟೆಗೆ ಆರಂಭವಾಗಲಿದ್ದು, ಎರಡನೇ ಇನಿಂಗ್ಸ್‌ ಆಡುವ ತಂಡಕ್ಕೆ ಇಬ್ಬನಿಯ ಪರಿಣಾಮ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಬಹುದು. ಆದರೂ ಟಾಸ್ ಗೆಲುವು ಮತ್ತು ಆ ತಂಡದ ನಾಯಕ ತೆಗೆದುಕೊಳ್ಳುವ ನಿರ್ಧಾರ ಪ್ರಮುಖವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಯುಎಇಯಲ್ಲಿ ನಡೆದ ವಿಶ್ವಕಪ್ ಟೂರ್ನಿ ಮತ್ತು ಐಪಿಎಲ್ ಪಂದ್ಯಗಳಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ತಂಡಗಳೇ ಹೆಚ್ಚು ಗೆಲುವು ಸಾಧಿಸಿದ್ದವು.

ರೋಹಿತ್–ವಿರಾಟ್ ಶತಕಗಳ ನೆನಪು

ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ಎಂಟು ವರ್ಷಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. 2013 ಇಲ್ಲಿ ಆಸ್ಟ್ರೇಲಿಯಾ ಎದುರು ಭಾರತ ತಂಡ ಗೆದ್ದಿದ್ದ ಏಕದಿನ ಪಂದ್ಯವೇ ಕೊನೆಯ ಅಂತರರಾಷ್ಟ್ರೀಯ ಹಣಾಹಣಿಯಾಗಿದೆ. ಆ ಪಂದ್ಯದಲ್ಲಿ ರೋಹಿತ್ ಶರ್ಮಾ (141; 125ಎ) ಮತ್ತು ವಿರಾಟ್ ಕೊಹ್ಲಿ (ಅಜೇಯ 100; 52ಎ) ಶತಕ ಗಳಿಸಿದ್ದರು.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಋತುರಾಜ್ ಗಾಯಕವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಟಿಮ್ ಸೌಥಿ (ನಾಯಕ), ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, ಜಿಮ್ಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೀಫರ್ಟ್, ಈಶ್ ಸೋಧಿ, ಮಾರ್ಕ್ ಚಾಪಮನ್, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್, ಕೈಲ್ ಜೆಮಿಸನ್, ಆ್ಯಡಂ ಮಿಲ್ನೆ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT