ಗುರುವಾರ , ಏಪ್ರಿಲ್ 15, 2021
20 °C

ಹಾಕಿ: ಭಾರತಕ್ಕೆ ಮಣಿದ ಜರ್ಮನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ರೆಫೆಲ್ಡ್‌, ಜರ್ಮನಿ: ಯುವಪ್ರತಿಭೆ ವಿವೇಕ್ ಸಾಗರ್ ಪ್ರಸಾದ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡವು ಯುರೋಪ್ ಪ್ರವಾಸದಲ್ಲಿ ಜರ್ಮನಿ ಎದುರು ಶುಭಾರಂಭ ಮಾಡಿತು.

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು 6–1ರಿಂದ ಜರ್ಮನಿಯನ್ನು ಸೋಲಿಸಿತು.  ವಿವೇಕ್ (27 ಮತ್ತು 28ನೇ ನಿಮಿಷ) ಗೋಲು ಗಳಿಸಿದರು. ನೀಲಕಂಠ ಶರ್ಮಾ (13ನೇ ನಿ) ಮೊದಲ ಗೋಲು ಹೊಡೆದು ಭಾರತಕ್ಕೆ ಉತ್ತಮ ಆರಂಭ ನೀಡಿದರು.

ಲಲಿತ್ ಉಪಾಧ್ಯಾಯ (41ನೇ ನಿ), ಅಕ್ಷದೀಪ್ ಸಿಂಗ್ (42ನೇ ನಿ) ಮತ್ತು ಹರ್ಮನ್‌ಪ್ರೀತ್ ಸಿಂಗ್ (47ನೇ ನಿ) ತಂಡದ ಗೆಲುವಿಗೆ ಕಾಣಿಕೆ ನೀಡಿದರು.

13ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಮಿಡ್‌ಫೀಲ್ಡರ್‌ ನೀಲಕಂಠ ಅವರು ತೋರಿದ ಕೈಚಳಕ ಅಮೋಘವಾಗಿತ್ತು. ಎದುರಾಳಿ ಗೋಲ್‌ಕೀಪರ್‌ ಮತ್ತು ರಕ್ಷಣಾ ಪಡೆಯನ್ನು ವಂಚಿಸಿದ ಅವರು ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

ಇದಾಗಿ ಒಂದು ನಿಮಿಷದ ನಂತರ ಜರ್ಮನಿಯ ಫಾರ್ವರ್ಡ್ ಆಟಗಾರ ಕಾನ್ಸಟೆಂಟಿನ್ ಸ್ಟೇಬ್ ಒಂದು ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು.  ಎರಡನೇ ಕ್ವಾರ್ಟರ್‌ನಲ್ಲಿ ವಿವೇಕ್ ಸತತ ಎರಡು ಗೋಲು ಹೊಡೆದು ತಂಡದ ಒತ್ತಡವನ್ನು ಕಡಿಮೆ ಮಾಡಿದರು.

ತಂಡದ ರಕ್ಷಣಾ ಪಡೆ ಮತ್ತು ನಾಯಕ, ಗೋಲ್‌ಕೀಪರ್ ಪಿ.ಆರ್‌. ಶ್ರೀಜೇಶ್ ಅವರ ಚಾಣಾಕ್ಷತೆಯ ಮುಂದೆ ಜರ್ಮನಿ ಆಟಗಾರರ ಗೋಲು ಗಳಿಸುವ ಪ್ರಯತ್ನಗಳು ವಿಫಲವಾದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.