ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಹೊಸ್ತಿಲಲ್ಲಿ ಭಾರತ ‘ಎ’

ಶ್ರೀಲಂಕಾ ‘ಎ’ ಎದುರಿನ ಅನಧಿಕೃತ ಟೆಸ್ಟ್‌ ಪಂದ್ಯ: ಸೋಲಿನ ಸುಳಿಯಲ್ಲಿ ಪ್ರವಾಸಿ ಪಡೆ
Last Updated 2 ಜೂನ್ 2019, 18:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತ ‘ಎ’ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ‘ಎ’ ಎದುರಿನ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ 7 ವಿಕೆಟ್‌ಗೆ 210 ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ ಶ್ರೀಲಂಕಾ ‘ಎ’ 60 ಓವರ್‌ಗಳಲ್ಲಿ 212ರನ್‌ ಕಲೆಹಾಕಿ ಮೊದಲ ಇನಿಂಗ್ಸ್‌ನ ಹೋರಾಟ ಮುಗಿಸಿತು.

57 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಶುರು ಮಾಡಿದ ಪ್ರಿಯಾಂಕ್‌ ಪಾಂಚಾಲ್‌ ಮುಂದಾಳತ್ವದ ಭಾರತ ‘ಎ’ 82.2 ಓವರ್‌ಗಳಲ್ಲಿ 372ರನ್‌ಗಳಿಗೆ ಆಲೌಟ್‌ ಆಯಿತು.

ಅನಮೋಲ್‌ಪ್ರೀತ್‌ ಸಿಂಗ್‌ (60; 69ಎ, 9ಬೌಂ), ಸಿದ್ದೇಶ್‌ ಲಾಡ್‌ (58; 76ಎ, 6ಬೌಂ) ಮತ್ತು ವಿಕೆಟ್‌ ಕೀಪರ್‌ ಕೆ.ಎಸ್‌.ಭರತ್‌ (60; 56ಎ, 4ಬೌಂ, 2ಸಿ) ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಹೀಗಾಗಿ ತಂಡದ ಮೊತ್ತವು 42ನೇ ಓವರ್‌ನಲ್ಲಿ 200ರ ಗಡಿ ದಾಟಿತು.

ಇವರು ಔಟಾದ ನಂತರ ರಾಹುಲ್‌ ಚಾಹರ್‌ (84; 109ಎ, 7ಬೌಂ, 2ಸಿ) ಮತ್ತು ಜಯಂತ್‌ ಯಾದವ್‌ (53; 96ಎ, 3ಬೌಂ) ಅರ್ಧಶತಕಗಳನ್ನು ದಾಖಲಿಸಿ ತಂಡದ ಮೊತ್ತ ಹೆಚ್ಚಿಸಿದರು.

ದ್ವಿತೀಯ ಇನಿಂಗ್ಸ್‌ ಶುರು ಮಾಡಿರುವ ಅಶಾನ್‌ ಪ್ರಿಯಾಂಜನ್‌ ನೇತೃತ್ವದ ಲಂಕಾ ‘ಎ’, ಮೂರನೇ ದಿನದಾಟದ ಅಂತ್ಯಕ್ಕೆ 51 ಓವರ್‌ಗಳಲ್ಲಿ 7 ವಿಕೆಟ್‌ಗೆ 210ರನ್‌ ಗಳಿಸಿದೆ.

ಗುರಿ ಬೆನ್ನಟ್ಟಿದ ಲಂಕಾ ತಂಡ ಆರಂಭಿಕ ಆಘಾತ ಕಂಡಿತು. ಸದೀರ ಸಮರವಿಕ್ರಮ (4) ಮತ್ತು ಪಾತುಮ್‌ ನಿಶಾಂಕ (5) ಬೇಗನೆ ವಿಕೆಟ್‌ ನೀಡಿದರು. ನಂತರ ಭಾನುಕಾ ರಾಜಪಕ್ಷ (110; 112ಎ, 17ಬೌಂ, 3ಸಿ) ಶತಕ ಗಳಿಸಿ ತಂಡಕ್ಕೆ ಆಸರೆಯಾದರು.

ಅವರಿಗೆ ಉಳಿದ ಬ್ಯಾಟ್ಸ್‌ಮನ್‌ಗಳು ಸೂಕ್ತ ಬೆಂಬಲ ನೀಡಲಿಲ್ಲ. ಹೀಗಾಗಿ ಮೂರನೇ ದಿನವೇ 300ರ ಗಡಿ ದಾಟುವ ತಂಡದ ಕನಸು ಸಾಕಾರಗೊಳ್ಳಲಿಲ್ಲ. ಭಾರತದ ಸ್ಪಿನ್ನರ್‌ ರಾಹುಲ್‌ ಚಾಹರ್‌ ಮೂರು ವಿಕೆಟ್‌ ಉರುಳಿಸಿ ಯಶಸ್ವಿ ಬೌಲರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: ಮೊದಲ ಇನಿಂಗ್ಸ್‌: 69.1 ಓವರ್‌ಗಳಲ್ಲಿ 269 ಮತ್ತು 82.2 ಓವರ್‌ಗಳಲ್ಲಿ 372 (ಪ್ರಿಯಾಂಕ್‌ ಪಾಂಚಾಲ್‌ 15, ಅನಮೋಲ್‌ಪ್ರೀತ್‌ ಸಿಂಗ್ 60, ಸಿದ್ದೇಶ್‌ ಲಾಡ್‌ 58, ಕೆ.ಎಸ್‌. ಭರತ್‌ 60, ಶಿವಂ ದುಬೆ 19, ರಾಹುಲ್‌ ಚಾಹರ್‌ 84, ಜಯಂತ್‌ ಯಾದವ್‌ 53; ಲಾಹಿರು ಕುಮಾರ 65ಕ್ಕೆ1, ವಿಶ್ವ ಫರ್ನಾಂಡೊ 68ಕ್ಕೆ3, ಲಕ್ಷಣ್‌ ಸಂದಕನ್‌ 87ಕ್ಕೆ3, ಕಮಿಂದು ಮೆಂಡಿಸ್‌ 36ಕ್ಕೆ1).

ಶ್ರೀಲಂಕಾ ‘ಎ’: ಪ್ರಥಮ ಇನಿಂಗ್ಸ್‌; 60 ಓವರ್‌ಗಳಲ್ಲಿ 212 ಮತ್ತು ದ್ವಿತೀಯ ಇನಿಂಗ್ಸ್‌ 51 ಓವರ್‌ಗಳಲ್ಲಿ 7 ವಿಕೆಟ್‌ಗೆ 210 (ಭಾನುಕಾ ರಾಜಪಕ್ಷ 110, ನಿರೋಷನ್‌ ಡಿಕ್ವೆಲ್ಲಾ 18, ಪ್ರಿಯಾಮಲ್‌ ಪೆರೇರಾ 11, ಕಮಿಂದು ಮೆಂಡಿಸ್‌ ಬ್ಯಾಟಿಂಗ್‌ 33, ಮಲಿಂದಾ ಪುಷ್ಪಕುಮಾರ 11; ಸಂದೀಪ್‌ ವಾರಿಯರ್‌ 33ಕ್ಕೆ1, ಆದಿತ್ಯ ಸರ್ವಟೆ 23ಕ್ಕೆ1, ಶಿವಂ ದುಬೆ 25ಕ್ಕೆ2, ರಾಹುಲ್‌ ಚಾಹರ್‌ 73ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT