ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್: ಡೀನ್–ಕ್ವಿಂಟನ್ ಶತಕಗಳ ಸೊಬಗು

ಆರ್.ಅಶ್ವಿನ್‌ಗೆ ಐದು ವಿಕೆಟ್
Last Updated 4 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಆರಂಭಿಕ ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಜಿಗುಟುತನದ ಆಟಕ್ಕೆ ಆತಿಥೇಯ ತಂಡದ ಲೆಕ್ಕಾಚಾರಗಳು ತಲೆಕೆಳಾಗಾದವು.

ಇಲ್ಲಿ ನಡೆಯುತ್ತಿರುವ ಫ್ರೀಡಂ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನ ಡೀನ್ (160; 287 ಎಸೆತ, 18ಬೌಂಡರಿ, 4ಸಿಕ್ಸರ್) ಮತ್ತು ಕ್ವಿಂಟನ್ (111;163ಎಸೆತ, 16ಬೌಂಡರಿ, 2ಸಿಕ್ಸರ್) ಶತಕ ಬಾರಿಸಿದರು. ಅವರ ಆಟದ ಬಲದಿಂದ ದಿನದಾಟದ ಕೊನೆಗೆ ಪ್ರವಾಸಿ ತಂಡವು 118 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 385 ರನ್ ಗಳಿಸಿತು. ಭಾರತ ತಂಡದ ಮೊದಲ ಇನಿಂಗ್ಸ್‌ ಮೊತ್ತ ಚುಕ್ತಾ ಮಾಡಲು ಇನ್ನೂ 117 ರನ್‌ಗಳನ್ನು ತಂಡವು ಗಳಿಸಬೇಕಿದೆ.

ಗುರುವಾರ ಮಯಂಕ್ ಅಗರವಾಲ್ ದ್ವಿಶತಕ ಮತ್ತು ರೋಹಿತ್ ಶರ್ಮಾ ಶತಕದ ಬಲದಿಂದ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 502 ರನ್‌ ಗಳಿಸಿ ಡಿಕ್ಲೆರ್ ಮಾಡಿಕೊಂಡಿತ್ತು. ಅಶ್ವಿನ್ ಕೈಚಳದಿಂದಾಗಿ 20 ಓವರ್‌ಗಳಲ್ಲಿ 38 ರನ್‌ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ಮೂರನೇ ದಿನ ಆಟ ಮುಂದುವರಿಸಿದ ತಂಡವು ಬೇಗನೆ ಆಲೌಟ್‌ ಆಗುವ ನಿರೀಕ್ಷೆಯಲ್ಲಿ ಆತಿಥೇಯರಿದ್ದರು. ಅದಕ್ಕೆ ತಕ್ಕಂತೆ ದಿನದ ಏಳನೇ ಓವರ್‌ನಲ್ಲಿ ತೆಂಬಾ ಬವುಮಾ (18 ರನ್) ಅವರನ್ನು ಇಶಾಂತ್ ಶರ್ಮಾ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಕ್ರೀಸ್‌ಗೆ ಬಂದ ನಾಯಕ ಫಾಫ್ ಡು ಪ್ಲೆಸಿ ಅವರು ಡೀನ್ ಜೊತೆಗೂಡಿ ವಿಕೆಟ್ ಪತನ ತಡೆದರು. ಅಲ್ಲಿಂದ ಬೌಲರ್‌ಗಳಿಗೆ ‘ಟೆಸ್ಟ್ ’ ಶುರುವಾಯಿತು. 40ನೇ ಓವರ್‌ನಲ್ಲಿ ಅಶ್ವಿನ್ ಎಸೆತವನ್ನು ಲಾಂಗ್‌ ಆನ್‌ನತ್ತ ತಳ್ಲಿದ ಡೀನ್ ಅರ್ಧಶತಕ ಪೂರೈಸಿದರು. ನಂತರ ಅವರು ಮತ್ತಷ್ಟು ಆತ್ಮವಿಶ್ವಾಸದಿಂದ ಆಡತೊಡಗಿದರು. 46ನೇ ಓವರ್‌ನಲ್ಲಿ ರವೀಂದ್ರ ಜಡೇಜ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಡೀನ್ ತಪ್ಪು ಮಾಡಿದರು. ಬ್ಯಾಟ್‌ ಅಂಚು ಸವರಿದ ಚೆಂಡು ಹಿಂದೆ ಸಾಗಿತು. ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರ ಪ್ರಯತ್ನಕ್ಕೆ ಕ್ಯಾಚ್ ಆಗಲಿಲ್ಲ. ಇದು ಡೀನ್‌ಗೆ ಒಂದು ರೀತಿಯಲ್ಲಿ ವರದಾನವಾಯಿತು.

ಆರು ಓವರ್‌ಗಳ ನಂತರ ಫಾಫ್ ಕೂಡ ಅರ್ಧಶತಕದ ಗಡಿ ದಾಟಿದರು. ಇವರಿಬ್ಬರೂ ಐದನೇ ವಿಕೆಟ್‌ ಜೊತೆಯಾಟದಲ್ಲಿ 115 ರನ್‌ ಸೇರಿಸಿದರು. ಡುಪ್ಲೆಸಿಯ ವಿಕೆಟ್ ಗಳಿಸಿದ ಅಶ್ವಿನ್ ಜೊತೆಯಾಟವನ್ನು ಮುರಿದರು.

ಆದರೆ ದಕ್ಷಿಣ ಆಫ್ರಿಕಾ ತಂಡದ ಮತ್ತೊಂದು ಹೋರಾಟಕ್ಕೆ ಇದು ಹಾದಿಯಾಯಿತು. ಡೀನ್ ಜೊತೆಗೂಡಿದ ಕ್ವಿಂಟನ್ ಡಿ ಕಾಕ್ ಅವರು ಬೌಲರ್‌ಗಳನ್ನು ಕಾಡಿದರು. 60ನೇ ಓವರ್‌ನಲ್ಲಿ ಅಶ್ವಿನ್ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಡೀನ್ ಶತಕ ಗಳಿಸಿದರು. ಅವರ ಹಾದಿಯಲ್ಲಿಯೇ ಸಾಗಿದ ಕ್ವಿಂಟನ್ ಕೂಡ 105ನೇ ಓವರ್‌ನಲ್ಲಿ ನೂರರ ಗಡಿ ದಾಟಿದರು. ಆದರೆ ಇದಕ್ಕೂ ಮುನ್ನ ಎಲ್ಗರ್‌ಗೆ ಜಡೇಜ ಅವರು ಪೆವಿಲಿಯನ್ ದಾರಿ ತೋರಿಸಿದ್ದರು. 64 ರನ್‌ಗಳ ಜೊತೆಯಾಟವೂ ಮುರಿಯಿತು. ಅವರ ನಂತರ ಕ್ರೀಸ್‌ಗೆ ಬಂದವರು ಹೆಚ್ಚು ರನ್‌ ಗಳಿಸಲಿಲ್ಲ. ಆದರೆ ಕ್ವಿಂಟನ್ ಏಕಾಂಗಿ ಹೋರಾಟ ನಡೆಸಿದರು. 110ನೇ ಓವರ್‌ನಲ್ಲಿ ಅಶ್ವಿನ್ ಎಸೆತಕ್ಕೆ ಕ್ಲೀನ್‌ಬೌಲ್ಡ್ ಆದರು.

ಸ್ಪಿನ್ನರ್‌ಗಳಿಗೆ ಉತ್ತಮ ನೆರವು ನೀಡುತ್ತಿರುವ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಅಪಾರ ತಾಳ್ಮೆಯಿಂದ ಆಡುವ ಅವಶ್ಯಕತೆ ಇದೆ. ನಾಲ್ಕನೇ ಇನಿಂಗ್ಸ್‌ನಲ್ಲಿ ಗುರಿ ಬೆನ್ನತ್ತುವ ತಂಡಕ್ಕೆ 250ಕ್ಕಿಂತ ಹೆಚ್ಚು ರನ್‌ಗಳ ಸ್ಕೋರ್ ಕೂಡ ಕಠಿಣವಾಗಬಹುದು.

ಆರ್‌. ಅಶ್ವಿನ್‌ ಬೌಲಿಂಗ್‌ ಸಾಧನೆ

ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 200 ವಿಕೆಟ್‌ ಪಡೆದ ಭಾರತದ ಎರಡನೇ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾದರು. ಡೀನ್‌ ಎಲ್ಗರ್‌ ವಿಕೆಟ್‌ ಉರುಳಿಸುವ ಮೂಲಕ ಅವರು ಈ ಮೈಲುಗಲ್ಲು ಸ್ಥಾಪಿಸಿದರು. ಅಶ್ವಿನ್‌, ಈ ಸಾಧನೆ ಮಾಡಿದ ಮೊದಲಿಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT