ಶುಕ್ರವಾರ, ನವೆಂಬರ್ 22, 2019
26 °C
ಮಯಾಂಕ್‌ ಔಟ್‌ 

ಭಾರತ–ದಕ್ಷಿಣ ಆಫ್ರಿಕಾ ಮೂರನೇ ಟೆಸ್ಟ್‌; ಟೀಂ ಇಂಡಿಯಾಗೆ ಆರಂಭಿಕ ಆಘಾತ ನೀಡಿದ ರಬಾಡ

Published:
Updated:
ಮಯಾಂಕ್‌ ಅಗರವಾಲ್ ವಿಕೆಟ್‌ ಪಡೆದ ಸಂಭ್ರಮದಲ್ಲಿ ದಕ್ಷಿಣ ಆಪ್ರಿಕಾದ ಕಗಿಸೊ ರಬಾಡ

ರಾಂಚಿ: ಶನಿವಾರ ಇಲ್ಲಿನ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಕ್ರೀಡಾಂಗಣದಲ್ಲಿ ಆರಂಭವಾಗಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಮಯಾಂಕ್‌ ಅರ್ಗವಾಲ್‌ ವಿಕೆಟ್‌ ಕಳೆದುಕೊಳ್ಳುವ ಮೂಲಕ ಭಾರತ ಆರಂಭಿಕ ಆಘಾತ ಅನುಭವಿಸಿದೆ. ಕಗಿಸೊ ರಬಾಡ ಟೀಂ ಇಂಡಿಯಾ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದಾರೆ. 

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ, ಬಹುಬೇಗ ಆರಂಭಿಕ ಆಟಗಾರ ಮಯಂಕ್‌ ಅಗರವಾಲ್(10) ವಿಕೆಟ್‌ ಕಳೆದುಕೊಂಡಿದೆ. 19 ಎಸೆತಗಳನ್ನು ಎದುರಿಸಿದ ಮಯಾಂಕ್‌ ಅಗರವಾಲ್ ಎರಡು ಬೌಂಡರಿ ಸಿಡಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಚೇತೇಶ್ವರ ಪೂಜಾರ(0) ಖಾತೆ ತೆರೆಯುವ ಮುನ್ನವೇ ಕಗಿಸೊ ರಬಾಡ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. 

ಇದನ್ನೂ ಓದಿ: ಬಿಸಿಸಿಐ ಆಡಳಿತ ಮಂಡಳಿ ರಂಗೋಲಿ ಕೆಳಗೆ ನುಸುಳಿದ ರಾಜಕೀಯ

ಮೊದಲ ಎರಡೂ ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಮಯಂಕ್‌ ಅರ್ಗವಾಲ್‌ ಮತ್ತು ಸರಣಿಯಲ್ಲಿ ಎರಡು ಶತಕ ದಾಖಲಿಸಿರುವ ರೋಹಿತ್‌ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಭಾರತ 13.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 32 ರನ್‌ ಗಳಿಸಿದೆ. ರೋಹಿತ್‌ ಶರ್ಮಾ(11) ಮತ್ತು ನಾಯಕ ವಿರಾಟ್ ಕೊಹ್ಲಿ(11) ಆಟ ಮುಂದುವರಿಸಿದ್ದಾರೆ.  

ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನ ಗಂಗೂಲಿಗೆ ಖಚಿತ

ಉತ್ತಮ ಬೌಲಿಂಗ್‌ ನಿರ್ವಹಿಸುತ್ತಿರುವ ಕಗಿಸೊ ರಬಾಡ 7 ಓವರ್‌ಗಳಲ್ಲಿ 4 ಮೇಡನ್‌ ಸಹಿತ 2 ವಿಕೆಟ್‌(15 ರನ್‌) ಕಬಳಿಸಿದ್ದಾರೆ.

ಜಾರ್ಖಂಡ್‌ ಆಟಗಾರ ಶಬಾಜ್‌ ನದೀಂ ಈ ಟೆಸ್ಟ್‌ ಮೂಲಕ ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯ ಆಡುತ್ತಿದ್ದಾರೆ. ಬೌಲರ್‌ ಇಶಾಂತ್‌ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. 

ಸರಣಿಯ ಮೊದಲ ಎರಡೂ ಪಂದ್ಯಗಳನ್ನು ಭಾರತವು ಗೆದ್ದಿದ್ದು, ಮೂರನೇ ಟೆಸ್ಟ್‌ನಲ್ಲಿಯೂ ಜಯಗಳಿಸಿ ಸರಣಿ ಕ್ಲೀನ್‌ಸ್ವೀಪ್ ಮಾಡಿಕೊಳ್ಳಲು ಕೊಹ್ಲಿ ಬಳಗವು ತುದಿಗಾಲಿನಲ್ಲಿ ನಿಂತಿದೆ.

ಮಯಂಕ್ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಮತ್ತು ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ರೋಹಿತ್ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ಎರಡನೇ ನಾಯಕ ಕೊಹ್ಲಿ ದ್ವಿಶತಕ (ಅಜೇಯ 254 ರನ್‌)ಬಾರಿಸಿದ್ದರು. 

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ

ತಂಡಗಳು:

ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮವಿಹಾರಿ, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶಬಾಜ್‌ ನದೀಂ, ರಿಷಭ್ ಪಂತ್, ಶುಭಮನ್ ಗಿಲ್.

ದಕ್ಷಿಣ ಆಫ್ರಿಕಾ: ಫಾಫ್ ಡು ಪ್ಲೆಸಿ (ನಾಯಕ), ತೆಂಬಾ ಬವುಮಾ (ಉಪನಾಯಕ), ತಿಯಾನಿಸ್ ಡಿ ಬ್ರಯನ್, ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಜುಬೇರ್ ಹಮ್ಜಾ, ಜಾರ್ಜ್ ಲಿಂಡೆ, ಸೆನುರನ್ ಮುತ್ತುಸ್ವಾಮಿ, ಲುಂಗಿ ಗಿಡಿ, ಎನ್ರಿಚ್ ನೋರ್ಟೆ, ವೆರ್ನಾನ್ ಫಿಲಾಂಡರ್, ಡೇನ್ ಪೀಟ್, ಕಗಿಸೊ ರಬಾಡ, ರೂಡಿ ಸೆಕಂಡ್.

ಪ್ರತಿಕ್ರಿಯಿಸಿ (+)