ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಕಣಕ್ಕೆ ಮರಳಿದ ಭಾರತಕ್ಕೆ ಆಘಾತ

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಕ್ರಿಕೆಟ್ ಪಂದ್ಯ: ಲಿಜೆಲಿ ಲೀ– ಲೌರಾ ವೊಲ್ವಾರ್ಟ್‌ ದಾಖಲೆಯ ಜೊತೆಯಾಟ
Last Updated 7 ಮಾರ್ಚ್ 2021, 15:04 IST
ಅಕ್ಷರ ಗಾತ್ರ

ಲಖನೌ: ಕೋವಿಡ್–19ರಿಂದಾಗಿ ಒಂದು ವರ್ಷ ಸ್ಪರ್ಧಾತ್ಮಕ ಕ್ರಿಕೆಟ್ ಕಣಕ್ಕೆ ಇಳಿಯದೇ ಇದ್ದ ಭಾರತದ ಮಹಿಳಾ ತಂಡಕ್ಕೆ ಭಾನುವಾರ ದಕ್ಷಿಣ ಆಫ್ರಿಕಾ ಮಹಿಳೆಯರ ತಂಡ ಆಘಾತ ನೀಡಿತು. ಏಕಾನ ಕ್ರೀಡಾಂಗಣದಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರನ್ನು ಪ್ರವಾಸಿ ತಂಡ ಎಂಟು ವಿಕೆಟ್‌ಗಳಿಂದ ಮಣಿಸಿತು.

ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಭಾರತವನ್ನು 177 ರನ್‌ಗಳಿಗೆ ನಿಯಂತ್ರಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಲಿಜೆಲಿ ಲೀ (ಔಟಾಗದೆ 83; 122 ಎಸೆತ, 11 ಬೌಂಡರಿ, 1 ಸಿಕ್ಸರ್‌) ಮತ್ತು ಲೌರಾ ವೊಲ್ವಾರ್ಟ್‌ (80; 110 ಎ, 12 ಬೌಂ) ಭರ್ಜರಿ ಆರಂಭ ಒದಗಿಸಿದರು. ಭಾರತದ ವಿರುದ್ಧ ದಾಖಲೆ ಮೊತ್ತದ (37.1 ಓವರ್‌ಗಳಲ್ಲಿ 169 ರನ್‌) ಮೊದಲ ವಿಕೆಟ್ ಜೊತೆಯಾಟವಾಡಿದ ಇವರಿಬ್ಬರು ತಂಡಕ್ಕೆ ಸುಲಭ ಜಯ ತಂದುಕೊಟ್ಟರು. 40.1 ಓವರ್‌ಗಳಲ್ಲಿ ತಂಡ ಜಯಭೇರಿ ಮೊಳಗಿಸಿತು.

ವೇಗಿಗಳಾದ ಜೂಲನ್ ಗೋಸ್ವಾಮಿ ಮತ್ತು ಮೋನಿಕಾ ಪಟೇಲ್‌ ಅವರನ್ನು ನಿರಾತಂಕವಾಗಿ ಎದುರಿಸಿದ ದಕ್ಷಿಣ ಆಫ್ರಿಕಾದ ಆರಂಭಿಕ ಜೋಡಿ ಸ್ಪಿನ್ನರ್‌ಗಳಾದ ರಾಜೇಶ್ವರಿ ಗಾಯಕವಾಡ್‌, ದೀಪ್ತಿ ಶರ್ಮಾ ಮತ್ತು ಪೂನಂ ಯಾದವ್ ಅವರಿಗೂ ದಿಟ್ಟ ಉತ್ತರ ನೀಡಿತು. ಹೀಗಾಗಿ ವೇಗವಾಗಿ ರನ್‌ಗಳು ಹರಿದುಬಂದವು. 2019ರ ನವೆಂಬರ್ ನಂತರ ಮೊದಲ ಪಂದ್ಯ ಆಡಿದ ಜೂಲನ್ ಗೋಸ್ವಾಮಿ 38 ಮತ್ತು 40ನೇ ಓವರ್‌ಗಳಲ್ಲಿ ಒಂದೊಂದು ವಿಕೆಟ್ ಉರುಳಿಸಿ ಹೀನಾಯ ಸೋಲು ತಪ್ಪಿಸಿದರು. ಚೊಚ್ಚಲ ಪಂದ್ಯ ಆಡಿದ ಮೋನಿಕಾ ಕೇವಲ ನಾಲ್ಕು ಓವರ್ ಬೌಲಿಂಗ್ ಮಾಡಿ 20 ರನ್ ನೀಡಿದರು.

ಅರ್ಧಶತಕದ ಜೊತೆಯಾಟ

ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭಿಕ ಜೋಡಿ ಜೆಮಿಮಾ ರಾಡ್ರಿಗಸ್ ಮತ್ತು ಸ್ಮೃತಿ ಮಂದಾನ ಬೇಗನೇ ವಾಪಸಾದರು. ತಂಡದ ಮೊತ್ತ 16 ರನ್ ಆಗಿದ್ದಾಗ ಐದನೇ ಓವರ್‌ನಲ್ಲಿ ಸ್ಮೃತಿ ಮಂದಾನ ಔಟಾದರೆ ಮತ್ತೆ ಎರಡು ರನ್ ಸೇರಿಸುವಷ್ಟರಲ್ಲಿ ಜೆಮಿಮಾ ಕೂಡ ವಿಕೆಟ್ ಕಳೆದುಕೊಂಡರು. ಮೊತ್ತ 40 ಆಗುವಷ್ಟರಲ್ಲಿ ಪೂನಂ ರಾವುತ್ ಕೂಡ ಔಟಾದರು. ಈ ಸಂದರ್ಭದಲ್ಲಿ ಜೊತೆಗೂಡಿದ ನಾಯಕಿ ಮಿಥಾಲಿ ರಾಜ್ (50; 85 ಎ, 4 ಬೌಂ, 1 ಸಿ) ಮತ್ತು ಹರ್ಮನ್‌ಪ್ರೀತ್ ಕೌರ್ (40; 41 ಎ, 6 ಬೌಂ) 62 ರನ್‌ಗಳ ಜೊತೆಯಾಟ ಆಡಿ ಮೊತ್ತವನ್ನು ನೂರರ ಗಡಿ ದಾಟಿಸಿದರು.

100ನೇ ಏಕದಿನ ಪಂದ್ಯ ಆಡಿದ ಹರ್ಮನ್‌ಪ್ರೀತ್ ಕೌರ್ ಮೋಹಕ ಬ್ಯಾಟಿಂಗ್ ಮೂಲಕ ಮಿಂಚಿದರು. ಆದರೆ ಅರ್ಧಶತಕದ ಅಂಚಿನಲ್ಲಿದ್ದಾಗ ಸುನೆ ಲೂಜ್ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಲಾಂಗ್ ಆಫ್‌ನಲ್ಲಿದ್ದ ಶಬ್ನಿಮ್ ಇಸ್ಮಾಯಿಲ್‌ಗೆ ಕ್ಯಾಚ್ ನೀಡಿದರು.

2019ರ ನಂತರ ಮೊದಲ ಪಂದ್ಯ ಆಡಿದ ಮಿಥಾಲಿ ರಾಜ್ ಪಿಚ್‌ಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ನಂತರ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ದೀಪ್ತಿ ಶರ್ಮಾ (27; 46 ಎ) ಅವರೊಂದಿಗೂ ಉತ್ತಮ ಜೊತೆಯಾಟದ ಮೂಲಕ ಐದನೇ ವಿಕೆಟ್‌ಗೆ 52 ರನ್‌ ಸೇರಿಸಿದರು. ನಂತರ ಯಾರಿಗೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲು ಆಗಲಿಲ್ಲ. 25ನೇ ಓವರ್‌ನಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 102 ರನ್‌ ಗಳಿಸಿದ್ದ ತಂಡ ಕೊನೆಗೆ ಒಂಬತ್ತು ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 9ಕ್ಕೆ 177 (ಮಿಥಾಲಿ ರಾಜ್ 50, ಹರ್ಮನ್‌ಪ್ರೀತ್ ಕೌರ್ 40, ದೀಪ್ತಿ ಶರ್ಮಾ 27; ಶಬ್ನಿಮ್ ಇಸ್ಮಾಯಿಲ್ 28ಕ್ಕೆ3, ನೊಂಕುಲುಲೆಕೊ ಮಾಬ 41ಕ್ಕೆ2); ದಕ್ಷಿಣ ಆಫ್ರಿಕಾ: 40.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 178 (ಲಿಜೆಲಿ ಲೀ ಔಟಾಗದೆ 83, ಲೌರಾ ವೊಲ್ವಾರ್ಟ್‌ 80; ಜೂಲನ್ ಗೋಸ್ವಾಮಿ 38ಕ್ಕೆ2). ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 8 ವಿಕೆಟ್‌ಗಳ ಜಯ. ಪಂದ್ಯದ ಶ್ರೇಷ್ಠ ಆಟಗಾರ್ತಿ: ಶಬ್ನಿಮ್ ಇಸ್ಮಾಯಿಲ್. ಮುಂದಿನ ಪಂದ್ಯ: ಮಾರ್ಚ್‌ 9, ಲಖನೌ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT