ಗುರುವಾರ , ನವೆಂಬರ್ 21, 2019
23 °C

ಬಾಂಗ್ಲಾ ಎದುರಿನ ಸರಣಿ: ಇಂದು ತಂಡದ ಆಯ್ಕೆ

Published:
Updated:

ಮುಂಬೈ: ಬಾಂಗ್ಲಾದೇಶ ಎದುರಿನ ಟ್ವೆಂಟಿ–20 ಸರಣಿಗೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಗುರುವಾರ ಇಲ್ಲಿ ನಡೆಯಲಿದ್ದು ವಿರಾಟ್ ಕೊಹ್ಲಿ ಅವರ ವಿಶ್ರಾಂತಿ ವಿಷಯ ಪ್ರಮುಖವಾಗಿ ಚರ್ಚೆಗೆ ಬರಲಿದೆ. ರಿಷಭ್ ಪಂತ್ ಬದಲಿಗೆ ಸಂಜು ಸ್ಯಾಮ್ಸನ್ ಸ್ಥಾನ ಗಳಿಸುವ ಸಾಧ್ಯತೆ ಇದೆ.

ಕಳೆದ ವರ್ಷ ಅಕ್ಟೋಬರ್‌ನಿಂದ ಈ ವರೆಗೆ ಎಲ್ಲ ಮಾದರಿಗಳಲ್ಲಿ ಭಾರತ ಆಡಿರುವ 56 ಪಂದ್ಯಗಳ ಪೈಕಿ 48ರಲ್ಲಿ ವಿರಾಟ್ ಕೊಹ್ಲಿ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಒಲವು ವ್ಯಕ್ತವಾಗಿದೆ. ಆದರೆ ವಿಶ್ರಾಂತಿ ಬೇಕೇ ಬೇಡವೇ ಎಂಬುದನ್ನು ತಾವೇ ನಿರ್ಧರಿಸುವಂತೆ ಆಯ್ಕೆ ಸಮಿತಿ ಕೊಹ್ಲಿಗೆ ಸೂಚಿಸಲಿದೆ. 

ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಸ್ಥಾನ ತುಂಬಲು ಮುಂಬೈನ ಆಲ್‌ರೌಂಡರ್ ಶಿವಂ ದುಬೆಗೆ ಅವಕಾಶ ನೀಡುವ ಸಾಧ್ಯತೆ ಇದೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಈಚೆಗೆ ಕೇರಳ ಪರವಾಗಿ ದ್ವಿಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಸಮಿತಿ ದ್ವಿತೀಯ ಆದ್ಯತೆಯಾಗಿ ಪರಿಗಣಿಸಲಿದೆ. ಮನೀಷ್ ಪಾಂಡೆಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ. ಮಣಿಗಂಟಿನ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರನ್ನೂ ಆಯ್ಕೆಗೆ ಪರಿಗಣಿಸುವ ನಿರೀಕ್ಷೆ ಇದೆ.

ನವೆಂಬರ್‌ 3ರಂದು ದೆಹಲಿಯಲ್ಲಿ ಮೊದಲ ಟ್ವೆಂಟಿ–20 ಪಂದ್ಯ ನಡೆಯಲಿದ್ದು ಉಳಿದೆರಡು ಪಂದ್ಯಗಳಿಗೆ ರಾಜ್‌ಕೋಟ್ ಮತ್ತು ನಾಗಪುರ ಆತಿಥ್ಯ ವಹಿಸಲಿವೆ. ನಂತರ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿ ಎರಡು ಪಂದ್ಯಗಳನ್ನು ಆಡಲಿವೆ. ಇವು ಕ್ರಮವಾಗಿ ಇಂದೋರ್ ಮತ್ತು ಕೋಲ್ಕತ್ತದಲ್ಲಿ ನಡೆಯಲಿವೆ.

ಪ್ರತಿಕ್ರಿಯಿಸಿ (+)