ದಕ್ಷಿಣ ಆಫ್ರಿಕಾ ತಂಡದ ಛಲದ ಆಟ: ತಾಳ್ಮೆಯ ಪರೀಕ್ಷೆಯಲ್ಲಿ ಗೆದ್ದ ಭಾರತ

7

ದಕ್ಷಿಣ ಆಫ್ರಿಕಾ ತಂಡದ ಛಲದ ಆಟ: ತಾಳ್ಮೆಯ ಪರೀಕ್ಷೆಯಲ್ಲಿ ಗೆದ್ದ ಭಾರತ

Published:
Updated:

ಬೆಂಗಳೂರು: ಭಾರತ ‘ಎ’ ತಂಡಕ್ಕೆ ಗೆದ್ದೇ ತೀರುವ ಛಲ. ಎಷ್ಟೇ ಕಷ್ಟವಾದರೂ ಸರಿ ಸೋಲು ತಪ್ಪಿಸಿಕೊಳ್ಳುವ ’ಹಟ’ ದಕ್ಷಿಣ ಆಫ್ರಿಕಾ ‘ಎ’ ತಂಡಕ್ಕೆ. ಉಭಯ ತಂಡಗಳ ಈ ಹಗ್ಗಜಗ್ಗಾಟಕ್ಕೆ ಮಂಗಳವಾರ ಇಡೀ ದಿನ ಮುಡಿಪಾಯಿತು. ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಯಿತು.

ಆಡುವವರು ಮತ್ತು ಪಂದ್ಯ ವೀಕ್ಷಿಸುವವರಿಗೆ ತಾಳ್ಮೆಯ ‍ಪರೀಕ್ಷೆಯಂತಿದ್ದ ದಿನದಾಟದಲ್ಲಿ ಕೊನೆಗೂ ಆತಿಥೇಯರೇ 30 ರನ್‌ಗಳಿಂದ ಗೆದ್ದರು.

ಶ್ರೇಯಸ್ ಅಯ್ಯರ್ ಬಳಗವು ಸೋಮವಾರ ಮೊದಲ ಇನಿಂಗ್ಸ್‌ನಲ್ಲಿ 338 ರನ್‌ಗಳ ಮುನ್ನಡೆ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆ ದಿನದಾಟದ ಅಂತ್ಯಕ್ಕೆ  ಎರಡನೇ ಇನಿಂಗ್ಸ್‌ನಲ್ಲಿ 99 ರನ್‌ ಗಳಿಸಿದ್ದ ದಕ್ಷಿಣ ಆಫ್ರಿಕಾ ಬಳಗವು 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೊನೆಯ ದಿನದಾಟದಲ್ಲಿ ಉಳಿದ ಆರು ವಿಕೆಟ್‌ಗಳನ್ನು  ಬೇಗನೆ ಕಬಳಿಸಿ ಜಯದ ಕೇಕೆ ಹಾಕುವ ಯೋಚನೆಯಲ್ಲಿ ಅಯ್ಯರ್ ಬಳಗವಿತ್ತು.

ಆದರೆ, ಮಧ್ಯಮ ಕ್ರಮಾಂಕದ ಆಟಗಾರರಾದ ರೂಡಿ ಸೆಕೆಂಡ್ (94; 214 ಎಸೆತ, 15ಬೌಂಡರಿ) ಮತ್ತು ಶಾನ್ ವಾನ್ ಬರ್ಗ್ (50; 175ಎಸೆತ, 6ಬೌಂಡರಿ) ಅವರು ಆರನೇ ವಿಕೆಟ್‌ ಜೊತೆಯಾಟವು ಸುಲಭ ಜಯಕ್ಕೆ ಆಸ್ಪದ ಕೊಡಲಿಲ್ಲ. ಸಂಯಮ ಮತ್ತು ಲಯ ಕಳೆದುಕೊಳ್ಳದ ಬೌಲರ್‌ಗಳೂ ಬಗ್ಗಲಿಲ್ಲ.

ಬೆಳಿಗ್ಗೆಯ ಅವಧಿಯಲ್ಲಿ ನವದೀಪ್ ಸೈನಿ ಅವರು ಸೆನುರನ್ ಮುತುಸಾಮಿ ಅವರ ವಿಕೆಟ್ ಕಬಳಿಸಿದರು. ಆದರೆ ನಂತರದ ಅವಧಿಯಲ್ಲಿ ಯಾವ ಬೌಲರ್‌ಗಳ ಪ್ರಯತ್ನಕ್ಕೂ ಫಲ ಸಿಗಲಿಲ್ಲ. ಬರೋಬ್ಬರಿ 304 ಎಸೆತಗಳ ಜೊತೆಯಾಟವನ್ನು ಆಡಿದ ರೂಡಿ ಮತ್ತು ಬರ್ಗ್ ಬೌಲರ್‌ಗಳ ಬೆವರಿಳಿಸಿದರು. ಆದರೆ ಹೆಚ್ಚು ರನ್‌ಗಳನ್ನು ಗಳಿಸುವ ಗೋಜಿಗೆ ಇಬ್ಬರೂ ಹೋಗಲಿಲ್ಲ. ಚಹಾ ವಿರಾಮಕ್ಕೂ ಮುನ್ನ ಜೋರಾಗಿ ಮಳೆ ಸುರಿದಾಗ ದಕ್ಷಿಣ ಆಫ್ರಿಕಾ ಬಳಗದಲ್ಲಿ ಉಲ್ಲಾಸವಿತ್ತು. ಆದರೆ ಅದೇ ಸಂದರ್ಭದಲ್ಲಿ ತಮ್ಮ ಪೂರ್ವಭಾವಿ ಯೋಜನೆಯಲ್ಲಿ ಮಾರ್ಪಾಡು ತಂದ ಭಾರತ ಎ ಬಳಗದ ಕೋಚ್ ರಾಹುಲ್ ದ್ರಾವಿಡ್ ಯಶಸ್ವಿಯಾದರು.

ಚಹಾ ನಂತರದ ಅವಧಿಯಲ್ಲಿ  ಫೀಲ್ಡಿಂಗ್‌ ನಲ್ಲಿ ಹಲವು ಬಾರಿ ಬದಲಾವಣೆ ಮಾಡಿದ ಅಯ್ಯರ್, ಬೌಲಿಂಗ್‌ನಲ್ಲಿಯೂ ಪದೇ ಪದೇ ಬದಲಾವಣೆ ಮಾಡಿದರು. ಅದರ ಫಲವಾಗಿ 99ನೇ ಓವರ್‌ನಲ್ಲಿ ರೂಡಿ–ಬರ್ಗ್ ಜೊತೆಯಾಟವನ್ನು ಮಧ್ಯಮವೇಗಿ ರಜನೀಶ್ ಗುರುಬಾನಿ ಮುರಿದರು. ಬರ್ಗ್ ಅವರನ್ನು ವಿಕೆಟ್‌ ಪಡೆದರು.  ಬೆಳಿಗ್ಗೆಯಿಂದ ಫೀಲ್ಡಿಂಗ್ ಮಾಡಿ ಸುಸ್ತಾಗಿದ್ದ ಆತಿಥೇಯರ ಬಳಗದಲ್ಲಿ ಉತ್ಸಾಹ ಪುಟಿದೆದ್ದಿತು. 

ಆಗ ದಿನದಾಟದಲ್ಲಿ ಇನ್ನೂ 31 ಓವರ್‌ಗಳು ಬಾಕಿಯಿದ್ದವು.  ಅದರಿಂದಾಗಿ ಮಂದಬೆಳಕು ಆವರಿಸುವ ಸಾಧ್ಯತೆಯೂ ಇತ್ತು. ಈ ಅವಕಾಶವನ್ನು ಬಳಸಿಕೊಂಡು ಸೋಲಿನಿಂದ ಪಾರಾಗುವ ಯೋಚನೆಯಲ್ಲಿ ದಕ್ಷಿಣ ಆಫ್ರಿಕಾ ಬಳಗವೂ ಇತ್ತು. ಅದಕ್ಕೆ ತಕ್ಕಂತೆ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳೂ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪಣಕ್ಕೊಡ್ಡಿದರು.

ಆದರೂ ಬೌಲರ್‌ಗಳು ತಮ್ಮ ಅಸ್ತ್ರಗಳನ್ನು ಪ್ರಯೋಗಿಸಿದರು. 111ನೇ ಓವರ್‌ನಲ್ಲಿ ಡೇನ್ ಪೀಡ್ತ್‌ (8; 37ಎ) ಅವರನ್ನು ನವದೀಪ್ ಸೈನಿ ಔಟ್ ಮಾಡಿದರು. ಐದು ಓವರ್‌ಗಳ ನಂತರ ರೂಡಿ ಅವರ ವಿಕೆಟ್ ಪಡೆದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸಂಭ್ರಮದಿಂದ ಕುಣಿದಾಡಿದರು. ರೂಡಿ ಮೊದಲ ಇನಿಂಗ್ಸ್‌ನಲ್ಲಿಯೂ 94 ರನ್‌ ಗಳಿಸಿದ್ದರು.  ಕ್ರೀಸ್‌ನಲ್ಲಿ ಜೊತೆಗೂಡಿದ ಮಲೂಸಿ ಸಿಬೊಟೊ (7; 50ಎ) ಮತ್ತು ಬೇರನ್ ಹೆನ್ರಿಕ್ಸ್ (10; 29ಎ) ನಿಧಾನಗತಿಯ ಆಟಕ್ಕೆ ಮೊರೆಹೋದರು. 125ನೇ ಓವರ್‌ನಲ್ಲಿ ಹೆನ್ರಿಕ್ಸ್‌ ಅವರನ್ನು ಅಕ್ಷರ್ ಪಟೇಲ್ ಔಟ್ ಮಾಡಿದರು.  ಆದರೆ, ಕೊನೆಯ ಬ್ಯಾಟ್ಸ್‌ಮನ್ ಡೇನ್ ಒಲಿವರ್ 14 ಎಸೆತಗಳನ್ನು ಎದುರಿಸಿದರೂ ಒಂದು ರನ್ ಕೂಡ ಗಳಿಸಲಿಲ್ಲ.   129ನೇ ಓವರ್‌ನಲ್ಲಿ ದಾಳಿಗೆ ಇಳಿದ ಮಧ್ಯಮವೇಗಿ ಸಿರಾಜ್ ನಿರಾಸೆ ಮಾಡಲಿಲ್ಲ. ಒಲಿವರ್ ವಿಕೆಟ್ ಪಡೆದು ಸಂಭ್ರಮಿಸಿದರು. ಅದರೊಂದಿಗೆ ಎರಡನೇ ಇನಿಂಗ್ಸ್‌ನಲ್ಲಿಯೂ ಐದು ವಿಕೆಟ್‌ಗಳ ಗೊಂಚಲು ಗಳಿಸಿದರು.

ಸಂಕ್ಷಿಪ್ತ ಸ್ಕೋರು
ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 246:
ಭಾರತ ‘ಎ’: 129.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 584; ಎರಡನೇ ಇನಿಂಗ್ಸ್‌
 ದಕ್ಷಿಣ ಆಫ್ರಿಕಾ ‘ಎ’: 308 ( ರೂಡಿ ಸೆಕೆಂಡ್ 94, ಶಾನ್ ವಾನ್ ಬರ್ಗ್ 50, ಬೇರನ್ ಹೆನ್ರಿಕ್ಸ್ 10, ಮೊಹಮ್ಮದ್ ಸಿರಾಜ್ 73ಕ್ಕೆ5, ರಜನೀಶ್ ಗುರುಬಾನಿ 45ಕ್ಕೆ2, ನವದೀಪ್ ಸೈನಿ 24ಕ್ಕೆ1, ಅಕ್ಷರ್ ಪಟೇಲ್ 43ಕ್ಕೆ1, ಯಜುವೇಂದ್ರ ಚಾಹಲ್ 85ಕ್ಕೆ1)
ಫಲಿತಾಂಶ: ಭಾರತ ’ಎ’ ತಂಡಕ್ಕೆ ಇನಿಂಗ್ಸ್ ಮತ್ತು 30 ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !