ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತಕ್ಕೆ ಶರಣಾದ ಜಪಾನ್

ಸುಖಜೀತ್ ಸಿಂಗ್ ಎರಡು ಗೋಲು
Published : 9 ಸೆಪ್ಟೆಂಬರ್ 2024, 17:14 IST
Last Updated : 9 ಸೆಪ್ಟೆಂಬರ್ 2024, 17:14 IST
ಫಾಲೋ ಮಾಡಿ
Comments

ಹುಲುನ್‌ಬೈರ್, ಚೀನಾ: ಸುಖಜೀತ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಹಾಲಿ ಚಾಂಪಿಯನ್ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಜಪಾನ್ ವಿರುದ್ಧ ಜಯಗಳಿಸಿತು. 

ಸೋಮವಾರ  ಇಲ್ಲಿ ನಡೆದ ಪಂದ್ಯದಲ್ಲಿ ಸುಖಜೀತ್ (2ನೇ ಹಾಗೂ  60ನೇ ನಿಮಿಷ) ಹೊಡೆದ ಗೋಲುಗಳಿಂದಾಗಿ ಭಾರತ ತಂಡವು 5–1ರಿಂದ ಜಪಾನ್ ಎದುರು ಗೆದ್ದಿತು. ಭಾರತದ ಅಭಿಷೇಕ್ (3ನಿ), ಸಂಜಯ್ (17ನಿ) ಮತ್ತು ಉತ್ತಮ್ ಸಿಂಗ್ (54 ನಿ) ಅವರು ತಲಾ ಒಂದು ಗೋಲು ಕಾಣಿಕೆ ನೀಡಿದರು. 

ಜಪಾನ್ ತಂಡದ ಮಾತ್ಸುಮೊಟೊ ಕಝುಮಾಸಾ 41ನೇ ನಿಮಿಷದಲ್ಲಿ ಒಂದು ಗೋಲು ಹೊಡೆದ ಸೋಲಿನ ಅಂತರವನ್ನು ತುಸು ತಗ್ಗಿಸಿದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು  ಚೀನಾ ಎದುರು ಜಯಿಸಿತ್ತು. 

ಜಪಾನ್ ಎದುರಿನ ಪಂದ್ಯದಲ್ಲಿ ಸುಖಜೀತ್ ಅವರು ಫೀಲ್ಡ್ ಗೋಲ್ ಹೊಡೆಯುವ ಮೂಲಕ ಭಾರತದ ಖಾತೆಯನ್ನು ತೆರೆದರು. ಪಂದ್ಯ ಆರಂಭವಾಗಿ ಎರಡನೇ ನಿಮಿಷದಲ್ಲಿ ವೃತ್ತದ ಬಲಬದಿಯಿಂದ ಧಾವಿಸಿದ ಸಂಜಯ್ ಲಾಬ್‌ ಮಾಡಿದ ಚೆಂಡನ್ನು ಸುಖಜೀತ್ ಗೋಲುಪೆಟ್ಟಿಗೆಯತ್ತ ಕಳುಹಿಸುವಲ್ಲಿ ಸಫಲರಾದರು. 

ಒಂದು ನಿಮಿಷದ ನಂತರ ಜಪಾನ್ ರಕ್ಷಣಾ ಪಡೆಯನ್ನು ದಾಟಿದ ಅಭಿಷೇಕ್  ಚುರುಕಾಗಿ ಡ್ರಿಬಲ್ ಮಾಡುತ್ತ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು. ಇದಾಗಿ 14 ನಿಮಿಷಗಳ ನಂತರ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದ ಸಂಜಯ್ ಕೇಕೆ ಹಾಕಿದರು. ಇದರಿಂದಾಗಿ ತಂಡವು 3–0 ಮುನ್ನಡೆ ಗಳಿಸಿತು. 

ಈ ಹಂತದಲ್ಲಿ ಒತ್ತಡಕ್ಕೊಳಗಾದ ಜಪಾನ್ ತಂಡದ ಆಟಗಾರರು ಆಕ್ರಮಣಶೀಲರಾದರು. ಚೆಂಡನ್ನು ಗೋಲು ವರ್ತುಲದಲ್ಲಿ ಹಲವು ಬಾರಿ ತೆಗೆದುಕೊಂಡು ಹೋದರು. ಇದರ ಫಲವಾಗಿ 21ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆಯುವಲ್ಲಿ ಯಶಸ್ವಿಯೂ ಆದರು. ಆದರೆ ಜಪಾನಿಯರ ಡ್ರ್ಯಾಗ್‌ ಫ್ಲಿಕ್ ತಡೆಯುವಲ್ಲಿ ಭಾರತದ ರಕ್ಷಣಾ ಪಡೆ ಯಶಸ್ವಿಯಾಯಿತು. ಅಲ್ಲದೇ ತಿರುಗೇಟು ನೀಡಲೂ ಭಾರತ ತಂಡವು ಮುನ್ನುಗ್ಗಿತು. ಜುಗರಾಜ್ ಸಿಂಗ್ ಅವರು ಚುರುಕಿನ ಆಟದ ಮೂಲಕ ಫ್ರೀ ಹಿಟ್ ಪಡೆದರು. 

ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಭಾರತ ತಂಡವು ಹೆಚ್ಚು ಪಾರಮ್ಯ ಮೆರೆಯಿತು. ಶೇ 67ರಷ್ಟು ಸಮಯದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು. 11 ಬಾರಿ ವೃತ್ತ ಪ್ರವೇಶಿಸಿದ ಭಾರತದ ಆಟಗಾರರು, ಮೂರು ಬಾರಿ ಗೋಲುಪೆಟ್ಟಿಗೆಯತ್ತ ಚೆಂಡನ್ನು ಹೊಡೆದರು. ಆದರೆ ಗೋಲು ದಾಖಲಾಗಲಿಲ್ಲ. 

41ನೇ ನಿಮಿಷದಲ್ಲಿ ಕಝುಮಸಾ ಅವರು ಗೋಲು ಹೊಡೆಯುವ ಮೂಲಕ ಜಪಾನ್ ತಂಡಕ್ಕೆ ಅಲ್ಪ ಸಮಾಧಾನ ತಂದರು. ಇದಾಗಿ 13 ನಿಮಿಷ ಕಳೆದಿತ್ತು.  ಜರ್ಮನ್‌ಪ್ರೀತ್ ಸಿಂಗ್ ಅಸಿಸ್ಟ್ ಮಾಡಿದ ಚೆಂಡನ್ನು ಉತ್ತಮ್ ಸಿಂಗ್ ಗೋಲುಪೆಟ್ಟಿಗೆಗೆ ತಳ್ಳಿದರು. ಕೆಲನಿಮಿಷಗಳ ನಂತರ ಸುಖಜೀತ್ ಅವರು ತಮ್ಮ ಎರಡನೇ ಗೋಲು ಗಳಿಸಿದರು. ಅಭಿಷೇಕ್ ಅಸಿಸ್ಟ್ ಮಾಡಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಸುಖಜೀತ್ ಗೋಲುಪೆಟ್ಟಿಗೆಗೆ ಸೇರಿಸಿದ ರೀತಿ ಆಕರ್ಷಕವಾಗಿತ್ತು. 

ಜಪಾನ್ ತಂಡವು ಹೋದ ವರ್ಷದ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಆಗ ರನ್ನರ್ಸ್ ಅಪ್ ಆಗಿದ್ದ ಮಲೇಷ್ಯಾ ತಂಡವನ್ನು ಭಾರತವು ಬುಧವಾರ ಎದುರಿಸಲಿದೆ. ಮಂಗಳವಾರ ವಿಶ್ರಾಂತಿಯ ದಿನವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT